7
ಬಿಗುಮಾನ ಬಿಡದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಎನ್‌.ಚಲುವರಾಯಸ್ವಾಮಿ

ಶ್ರೇಷ್ಠತೆಯಿಂದ ಪ್ರತಿಷ್ಠೆಗೆ ಜಾರಿದ ನಾಗಮಂಗಲ ಕ್ಷೇತ್ರ

Published:
Updated:

ಮಂಡ್ಯ: ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾಗಿರುವ ನಾಗಮಂಗಲ ಕ್ಷೇತ್ರ ಹಲವು ಶ್ರೇಷ್ಠ ನಾಯಕರನ್ನು ನಾಡಿಗೆ ಕೊಟ್ಟಿದೆ. 90ರ ದಶಕದ ನಂತರ ವರ್ಣರಂಜಿತ ಚಿತ್ರಣಗಳಿಗೆ ಹೆಸರಾದ ನಾಗಮಂಗಲ ಈಗ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಇಡೀ ದೇಶದ ಮೂಲೆ ಮೂಲೆಯಲ್ಲಿ ನೆಲೆಸಿರುವ ನಾಗಮಂಗಲ ಜನರು ಶ್ರಮಿಕರು, ಸ್ವಾಭಿಮಾನಿಗಳು ಎಂದೇ ಹೆಸರುವಾಸಿಯಾಗಿದ್ದಾರೆ. ವರುಣನ ಅವಕೃಪೆ, ನೀರಾವರಿ ಕೊರತೆ, ನಿರುದ್ಯೋಗ ಸಮಸ್ಯೆಗಳಿಂದ ಕಂಗಾಲಾಗಿದ್ದ ಇಲ್ಲಿಯ ಜನರು ವಲಸೆ ಹೋಗಿ ವಿವಿಧೆಡೆ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆಗೈದು ತಮ್ಮೂರಿಗೆ ಕೀರ್ತಿ ತಂದಿದ್ದಾರೆ. ಕಲೆ, ಸಾಹಿತ್ಯ, ಜಾನಪದ, ಉದ್ಯಮ, ನಿನಿಮಾ ಕ್ಷೇತ್ರಗಳಲ್ಲಿ ಪ್ರಖ್ಯಾತ ನಾಮಗಳು ಸಿಗುತ್ತವೆ. ಚುನಾವಣೆ ಬಂದಾಗ ತವರಿಗೆ ಬರುವ ಅವರು ತಪ್ಪದೇ ಮತದಾನ ಮಾಡುತ್ತಾರೆ. ಆ ಮೂಲಕ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.

1952ರ ಮೊದಲ ಚುನಾವಣೆಯಲ್ಲೇ ಕ್ಷೇತ್ರದ ಜನರು ಪಕ್ಷೇತರ ಅಭ್ಯರ್ಥಿಗೆ ವಿಜಯದ ಮಾಲೆ ಹಾಕಿದ್ದು ಇತಿಹಾಸದಲ್ಲಿ ದಾಖಲೆಯಾಗಿ ಉಳಿದಿದೆ. ಕ್ರಿಯಾಶೀಲ ನಾಯಕರಾಗಿದ್ದ ಕೆ.ಸಿಂಗಾರಿಗೌಡ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಆದರೆ ಮತದಾರರು ಪಕ್ಷೇತರ ಅಭ್ಯರ್ಥಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಆರ್ಥಿಕ ತಜ್ಞ, ಇಂಗ್ಲಿಷ್‌ ಪಂಡಿತ ಎಂ.ಶಂಕರಲಿಂಗೇಗೌಡ ಅವರನ್ನು ಗೆಲ್ಲಿಸಿದರು. ಆ ಮೂಲಕ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂಬ ಸಂದೇಶ ಕೊಟ್ಟರು. ಆದರೆ ಎಂ.ಶಂಕರಲಿಂಗೇಗೌಡರು ಅನಾರೋಗ್ಯದಿಂದ ನಿಧನರಾದರು 1953ರಲ್ಲಿ ಎದುರಾದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಸಿಂಗಾರಿಗೌಡ ಜಯಗಳಿಸಿದರು.

ಮರಿಯಪ್ಪ ವಿರುದ್ಧ ಮರಿಯಪ್ಪ: ನಾಗಮಂಗಲ ಕಣದಲ್ಲಿ 1957ರಲ್ಲಿ ನಡೆದ ಚುನಾವಣೆ ಇಡೀ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯಿತು. ಹೆಚ್ಚು ಒಕ್ಕಲಿಗ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಕುರುಬ ಸಮಾಜಕ್ಕೆ ಸೇರಿದ ಟಿ.ಮರಿಯಪ್ಪ ಅವರನ್ನು ಗೆಲ್ಲಿಸಿದರು. ಮತ್ತೊಮ್ಮೆ ಜನರು ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಎಂಬ ಸಂದೇಶ ಕೊಟ್ಟರು. ಕೆ.ಸಿ.ರೆಡ್ಡಿ ನೇತೃತ್ವದ ಮೈಸೂರು ಪ್ರಜಾಪ್ರತಿನಿಧಿ ಸಭೆಯಲ್ಲಿ ಹಣಕಾಸು ಸಚಿವರಾಗಿದ್ದ ಟಿ.ಮರಿಯಪ್ಪ ಪಿಎಸ್‌ಪಿಯಿಂದ ಸ್ಪರ್ಧೆ ಮಾಡಿದ್ದರು. ಸಂಸದರಾಗಿದ್ದ ಪ್ರಭಾವಿ ಮುಖಂಡ ಶಿವನಂಜಪ್ಪ ಅವರ ಸಂಬಂಧಿ ಕೆ.ಮರಿಯಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಈ ಚುನಾವಣೆ ‘ಮರಿಯಪ್ಪ ವಿರುದ್ಧ ಮರಿಯಪ್ಪ’ ನಡುವಿನ ಹೋರಾಟವಾಗಿತ್ತು. ವ್ಯಕ್ತಿತ್ವಕ್ಕೆ ಮಣೆ ಹಾಕಿದ ಜನರು ಟಿ.ಮರಿಯಪ್ಪ ಅವರನ್ನು ಗೆಲ್ಲಿಸಿದರು.

1962ರಲ್ಲಿ ನಡೆದ ಚುನಾವಣೆಯೂ ಭಿನ್ನ ರೂಪ ಪಡೆದಿತ್ತು. ಕೆ.ಸಿಂಗಾರಿಗೌಡ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿತು. ಆದರೆ ಅವರ ವಿರುದ್ಧ ಅವರ ಬೆಂಬಲಿಗರೇ ಆದ ಟಿ.ಎನ್‌.ಮಾದಪ್ಪಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದರು. 1967ರಲ್ಲಿ ಮತ್ತೆ ಕೆ.ಸಿಂಗಾರಿಗೌಡ ಜಯಗಳಿಸಿದರು.

ಎಚ್‌.ಟಿ.ಕೃಷ್ಣಪ್ಪ ರಂಗಪ್ರವೇಶ: 1972ರ ಚುನಾವಣೆಯಲ್ಲಿ ಟಿ.ಎನ್‌.ಮಾದಪ್ಪಗೌಡ ಅವರು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆದರೆ ಅವರು ಅನಾರೋಗ್ಯದಿಂದ ನಿಧನರಾದರು. 1973ರಲ್ಲಿ ನಡೆದ ಉಪಚುನಾವಣೆಯಲ್ಲಿ ಸರಳ, ಸಜ್ಜನ ರಾಜಕಾರಣಿ ಎಂದೇ ಖ್ಯಾತರಾಗಿದ್ದ ಎಚ್‌.ಟಿ.ಕೃಷ್ಣಪ್ಪ ಜಯಗಳಿಸಿದರು. ನಂತರ ಅರಸು ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಯಾದರು. ಆದರೆ ಕಾಂಗ್ರೆಸ್‌ಗೆ ಸೇರುವುದಕ್ಕೂ ಮೊದಲು ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಷರತ್ತು ಹಾಕಿದ್ದು ವಿಶೇಷ. 1978 ಚುನಾವಣೆಯಲ್ಲಿ ಗುರು–ಶಿಷ್ಯರ ನಡುವಿನ ಹೋರಾಟ ನಡೆಯಿತು. ಎಚ್‌.ಟಿ.ಕೃಷ್ಣಪ್ಪ ಹಾಗೂ ಅವರ ರಾಜಕೀಯ ಗುರು ಸಿಂಗಾರಿಗೌಡರ ನಡುವೆ ಸ್ಪರ್ಧೆ ಏರ್ಪಟ್ಟಿತು. ರೋಚಕ ಹೋರಾಟದಲ್ಲಿ ಎಚ್‌.ಟಿ.ಕೃಷ್ಣಪ್ಪ ಗೆದ್ದರು, ರೇಷ್ಮೆ ಇಲಾಖೆ ಸಚಿವರೂ ಆದರು.

ಬದಲಾದ ಕಣ: 90ರ ದಶಕದ ನಂತರ ಕ್ಷೇತ್ರ ಹಲವು ವಿಲಕ್ಷಣ ಘಟನೆಗಳಿಂದ ಗಮನ ಸೆಳೆಯಿತು. 1989, 1994ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ ಎಲ್‌.ಆರ್‌.ಶಿವರಾಮೇಗೌಡ ಪತ್ರಕರ್ತ ಗಂಗಾಧರ ಮೂರ್ತಿ ಕೊಲೆ ಪ್ರಕರಣದಲ್ಲಿ ಸೆರೆಮನೆವಾಸ ಸೇರಬೇಕಾಯಿತು. ನಂತರ ನಡೆದ ಚುನಾವಣೆಗಳಲ್ಲಿ ಎಚ್‌.ಡಿ.ದೇವೇಗೌಡರ ಪ್ರಭಾವ ಕ್ಷೇತ್ರದಾದ್ಯಂತ ದಟ್ಟವಾಗಿ ಹರಡಿತು.

ಜೆಡಿಎಸ್‌ ಅಭ್ಯರ್ಥಿ ಎನ್‌.ಚಲುವರಾಯಸ್ವಾಮಿ 1999, 2004ರ ಚುನಾವಣೆಯನ್ನು ಸತತವಾಗಿ ಗೆದ್ದರು. ಸಚಿವರೂ ಆದರು. 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸುರೇಶ್‌ಗೌಡ ಗೆದ್ದರು. 2013ರ ಚುನಾವಣೆಯನ್ನು ಮತ್ತೆ ಚಲುವರಾಯಸ್ವಾಮಿ ಗೆಲುವು ದಾಖಲಿಸಿದ್ದಾರೆ.

ಈಗ ಕ್ಷೇತ್ರ ಅಪಾರ ಬದಲಾವಣೆಗೆ ಒಳಗಾಗಿದೆ. ಮುಖಂಡರಿಗೆ ಪ್ರತಿಷ್ಠೆಯೇ ಪ್ರಮುಖವಾಗಿದೆ. ಜೆಡಿಎಸ್‌ನಲ್ಲಿ ಇದ್ದ ಚಲುವರಾಯಸ್ವಾಮಿ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್‌ ಸೇರಿದ್ದು, ಪಕ್ಷದ ಅಭ್ಯರ್ಥಿ ಆಗಲಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ಕೆ.ಸುರೇಶ್‌ಗೌಡ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನ ಎನ್‌.ಚಲುವರಾಯಸ್ವಾಮಿ ಅವರು ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ.

ಎಚ್‌.ಡಿ.ದೇವೇಗೌಡರ ನಿರಂತರ ಭೇಟಿ

ಈ ಬಾರಿಯ ಚುನಾವಣೆಯನ್ನು ಬಹಳ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಎಚ್‌.ಡಿ.ದೇವೇಗೌಡರು ಕ್ಷೇತ್ರಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಹಲವು ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೂ ಅವರು ಪಾಲ್ಗೊಳ್ಳುತ್ತಿರುವುದು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.

ನಾಗಮಂಗಲ ಕ್ಷೇತ್ರವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ದೇವೇಗೌಡರ ಇಡೀ ಕುಟುಂಬ ಕಾರ್ಯನಿರತವಾಗಿದೆ. ಎಚ್‌.ಡಿ.ಕುಮಾರಸ್ವಾಮಿ, ರೇವಣ್ಣ ದಂಪತಿ ಆದಿಚುಂಚನಗಿರಿಯಲ್ಲಿ ಅಮಾವಾಸ್ಯೆ ಪೂಜೆಗಳಲ್ಲಿ ಪಾಲ್ಗೊಂಡು ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದು ಕೆ.ಸುರೇಶ್‌ಗೌಡ ಅವರ ಹೋರಾಟ ಎನ್ನುವುದಕ್ಕಿಂತಲೂ ದೇವೇಗೌಡರ ಕುಟುಂಬದ ಹೋರಾಟ ಎಂದೇ ಬಿಂಬಿಸಲಾಗಿದೆ.

ಇನ್ನೊಂದೆಡೆ ಚೆಲುವರಾಯಸ್ವಾಮಿ ಕ್ಷೇತ್ರದಲ್ಲೆಡೆ ಮಿಂಚಿನಂತೆ ಸಂಚಾರ ಕೈಗೊಂಡು ಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪೈಪೋಟಿ ನೀಡುತ್ತಿರುವ ಅವರು ಜಿಲ್ಲೆಯಾದ್ಯಂತ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿರುವ ‘ಅನಿವಾಸಿ ನಾಗಮಂಗಲಿಗರ ಸಂಘ’ದ ಸದಸ್ಯರೂ ಸಭೆ ನಡೆಸುತ್ತಿದ್ದು ಯಾರಿಗೆ ಬೆಂಬಲ ನೀಡಬೇಕು ಎಂಬ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಅವರ ಮತಗಳು ನಿರ್ಣಾಯಕವಾಗಿದ್ದು ವಲಸೆ ಹೋದವರನ್ನು ಮರಳಿ ಊರಿಗೆ ಕರೆಸಲು ಎಲ್ಲ ಪಕ್ಷಗಳು ಮುಖಂಡರು ಸಜ್ಜಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry