ಬುಧವಾರ, ಆಗಸ್ಟ್ 5, 2020
20 °C
ಕೂಲಿಕಾರನ ಪುತ್ರ ಸಮಾಜವಾದಿ ಕೋಣಂದೂರು ಲಿಂಗಪ್ಪ ಶಾಸಕರಾಗಿ ಆಯ್ಕೆಯಾಗಿದ್ದ ಕಥೆ

ವೋಟಿನ ಜತೆಗೆ ನೋಟು ಕೊಟ್ಟು ಗೆಲ್ಲಿಸಿದ್ದರು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ವೋಟಿನ ಜತೆಗೆ ನೋಟು ಕೊಟ್ಟು ಗೆಲ್ಲಿಸಿದ್ದರು

ಶಿವಮೊಗ್ಗ:  ಅದು 1972ನೇ ಇಸವಿ. ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿದ್ದ ಸಮಾಜವಾದಿ ನೇತಾರ ಗೋಪಾಲಗೌಡರು ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಲಗಿದ್ದರು. ಚುನಾವಣೆಗೆ ಓಡಾಡಲೂ ಅವರಿಗೆ ಸಾಧ್ಯವಿರಲಿಲ್ಲ.ಶಂಕರನಾರಾಯಣ ಭಟ್ಟರು, ಪೂರ್ಣಚಂದ್ರ ತೇಜಸ್ವಿ, ಕಡಿದಾಳು ಶಾಮಣ್ಣ, ಎನ್‌.ಡಿ. ಸುಂದರೇಶ್ ಮತ್ತಿತರರಿಗೆ ಚುನಾವಣೆಗೆ ಸ್ಪರ್ಧಿಸುವಂತೆ ಸಮಾಜವಾದಿ ಮುಖಂಡರು ಒತ್ತಾಯಿಸಿದ್ದರು. ಆದರೆ, ಯಾರೂ ಮುಂದೆ ಬರಲಿಲ್ಲ. ಆಗ ಗೋಪಾಲಗೌಡರ ಉತ್ತರಾಧಿಕಾರಿಯಾಗಿ ನಾಮಪತ್ರ ಸಲ್ಲಿಸಲು ಸಮಾನ ಮನಸ್ಕ ಸಮಾಜವಾದಿಗಳು ಆಯ್ಕೆ ಮಾಡಿದ ಅಭ್ಯರ್ಥಿಯೇ ಕೋಣಂದೂರು ಲಿಂಗಪ್ಪ.

ಲಿಂಗಪ್ಪ ಅವರ ತಂದೆ ರಾಮಪ್ಪ ತೀರ್ಥಹಳ್ಳಿ ಬಸ್‌ನಿಲ್ದಾಣದಲ್ಲಿ ಕೂಲಿ ಮಾಡುತ್ತಿದ್ದರು. ಬಸ್‌ನಿಲ್ದಾಣಕ್ಕೆ ಬರುವ ಶ್ರೀಮಂತರ ಸಾಮಗ್ರಿಗಳನ್ನು ಹೊತ್ತು ಅವರ ಮನೆಗಳಿಗೆ ತಲುಪಿಸುತ್ತಿದ್ದರು. ಹಣ, ಒಡೆವೆ ಕೊಟ್ಟರೂ ನಿಯತ್ತಿನಿಂದ ಅವುಗಳನ್ನು ಸಂಬಂಧಿಸಿದವರಿಗೆ ತಲುಪಿಸುತ್ತಿದ್ದರು. ಹಾಗಾಗಿ, ಜನರ ಪ್ರೀತಿ ಗಳಿಸಿದ್ದರು. ತಾಯಿ ಗೌರಮ್ಮ ತವರು ಮನೆ ಕೋಣಂದೂರಿನಲ್ಲೇ ಲಿಂಗಪ್ಪ ಹುಟ್ಟಿ, ಬೆಳೆದಿದ್ದರು. ಅಜ್ಜ ಹಿರಿಯಣ್ಣಪ್ಪ, ಅಜ್ಜಿ ಸಾವಿತ್ರಮ್ಮ, ಸೋದರ ಮಾವ ಗಂಗಪ್ಪ ವಿದ್ಯಾಭ್ಯಾಸಕ್ಕೆ ನೆರವಾಗಿದ್ದರು. ಜಾತಿ, ಹಣ ಬಲವಿಲ್ಲದ ಅವರನ್ನು ನಂಬಿಕಸ್ಥ ಸಮಾಜವಾದಿ ಎಂಬ ಒಂದೇ ಕಾರಣಕ್ಕೆ ಎಲ್ಲರೂ ಸೇರಿ ಚುನಾವಣಾ ಕಣಕ್ಕೆ ಧುಮುಕಿಸಿದ್ದರು.

‘ಒಂದೆಡೆ ಚುನಾವಣೆ ಎದುರಿಸಲು ಹಣವಿಲ್ಲ. ಠೇವಣಿ ಕಟ್ಟಲು ಅಗತ್ಯವಾದ ₹ 250 ದೊಡ್ಡ ಹೊರೆ ಎನಿಸಿತ್ತು. ಮತ್ತೊಂದೆಡೆ ರಾಜಕೀಯ ಗುರುಗಳಾದ ಗೋಪಾಲಗೌಡರು ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದರು. ಅವರಿಲ್ಲದೇ ಮೊದಲ ಚುನಾವಣೆ ಎದುರಿಸಬೇಕಿತ್ತು. ಇಂತಹ ಸಮಯದಲ್ಲಿ ತೀರ್ಥಹಳ್ಳಿಯ ಜವಳಿ ವರ್ತಕರಾದ ಬಿ.ಎನ್‌. ಕೃಷ್ಣಮೂರ್ತಿ ಅವರು ಠೇವಣಿ ಹಣ ನೀಡಿದ್ದರು’ ಎಂದು 46 ವರ್ಷಗಳ ಹಿಂದಿನ ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಭಾವುಕರಾದರು.

ಟವಲ್‌ ಹಾಸಿ ದೇಣಿಗೆ ಸಂಗ್ರಹ: ಹಳೆಯ ಫೋರ್ಡ್ ಕಂಪನಿ ಕಾರನ್ನು ₹ 6ಕ್ಕೆ ದಿನವೊಂದಕ್ಕೆ ಬಾಡಿಗೆಗೆ ಪಡೆಯಲಾಗಿತ್ತು. ಅದಕ್ಕೆ ಕಟ್ಟಿಕೊಂಡ ಮೈಕ್‌ಗೆ ದಿನಕ್ಕೆ ₹ 4 ನಿಗದಿ ಮಾಡಲಾಗಿತ್ತು. ಹಳ್ಳಿ ಹಳ್ಳಿಗೆ ಹೋಗಿ ಚುನಾವಣಾ ಪ್ರಚಾರ ಸಭೆ ಆರಂಭಿಸುವ ಮೊದಲು ವೇದಿಕೆ ಮುಂದೆ ಟವಲ್‌ ಹಾಸುತ್ತಿದ್ದೆವು. ಸಭೆ ಮುಗಿಸಿ ಹೊರಡುವ ಜನರು ಒಂದಾಣೆ, ಎರಡಾಣೆ ಹಾಕುತ್ತಿದ್ದರು. ಕೆಲವರು ಅಪರೂಪಕ್ಕೆ ₹ 5, ₹ 10 ಹಾಕುತ್ತಿದ್ದರು. ಅಂದಿನ ಪ್ರಚಾರದ ಖರ್ಚಿಗೆ ಅಗತ್ಯವಾದ ಹಣ ಇಟ್ಟುಕೊಂಡು ಒಂದಿಷ್ಟನ್ನು ಸ್ಥಳೀಯರಿಗೇ ನೀಡುತ್ತಿದ್ದೆವು. ಅದರಲ್ಲೇ ಅಲ್ಲಿನ ಖರ್ಚು ವೆಚ್ಚ ಭರಿಸುತ್ತಿದ್ದರು’ ಎಂದು ಚುನಾವಣಾ ಪ್ರಹಸನ ಮೆಲುಕು ಹಾಕಿದರು.

ಉಳಿದ ಹಣ ಗೌಡರ ಚಿಕಿತ್ಸೆಗೆ: ಅಂದು ಪ್ರತಿ ಹಳ್ಳಿಗೂ ತೆರಳಿ ಮತ ಕೇಳುವ ಜತೆಗೆ ಸಂಗ್ರಹಿಸಿದ ಹಣ ಸುಮಾರು ₹ 11,600ರಷ್ಟಾಗಿತ್ತು. ಅದರಲ್ಲಿ ಚುನಾವಣಾ ಪ್ರಕ್ರಿಯೆಯ ಎಲ್ಲ ಖರ್ಚುಗಳನ್ನೂ ನಿಭಾಯಿಸಿ ₹ 3 ಸಾವಿರಕ್ಕೂ ಹೆಚ್ಚು ಹಣ ಉಳಿಸಿದ್ದೆ. ಹಣ ಉಳಿಸಿದ್ದಕ್ಕೆ ಕೆಲವರು ಸಿಟ್ಟಾದರು. ಆ ಹಣವನ್ನೂ ಬಳಸಿಕೊಂಡು ಇನ್ನೊಂದು ಸುತ್ತು ಹಳ್ಳಿ ಸುತ್ತಿದ್ದರೆ ಹೆಚ್ಚಿನ ಮತ ಬೀಳುತ್ತಿದ್ದವು ಎನ್ನುವುದು ಅವರ ವಾದವಾಗಿತ್ತು. ಕೊನೆಗೆ ಆ ಹಣವನ್ನು ಗೋಪಾಲಗೌಡರ ಚಿಕಿತ್ಸೆಗೆ ನೀಡಿದೆವು’ ಎಂದು ಗತ ಘಟನೆ ಬಿಚ್ಚಿಟ್ಟರು.

ಅಂದು ಲಿಂಗಪ್ಪ ಅವರು ಕಾಂಗ್ರೆಸ್‌ ಅಭ್ಯರ್ಥಿ ಕೆ.ಟಿ. ದಾನಮ್ಮ ಅವರ ವಿರುದ್ಧ 2,566 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಸಿಪಿಎಂ ಅಭ್ಯರ್ಥಿ ಬಿ.ಎನ್‌. ಅಣ್ಣಪ್ಪ ಹೆಗ್ಡೆ ಅವರು 12,243 ಮತ ಪಡೆದು ಪ್ರಬಲ ಪೈಪೋಟಿ ನೀಡಿದ್ದರು.

ಶಾಸಕರಾದ ನಂತರ ವಿಧಾನಸಭೆಯಲ್ಲಿ ಭೂ ಹಕ್ಕಿನ ಕುರಿತು ಧ್ವನಿ ಎತ್ತಿದ್ದರು. ಅವರ ಧ್ವನಿಗೆ ಪೂರಕವಾಗಿ ಅಂದು ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರೂ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದರು. ಇದರ ಫಲವಾಗಿ ಲಿಂಗಪ್ಪ ಅವರು ಅಂದು ತೀರ್ಥಹಳ್ಳಿ ತಾಲ್ಲೂಕಿನ ಸುಮಾರು 9,600 ಗೇಣಿದಾರರಿಗೆ ಭೂಮಿ ದೊರಕಿಸಿಕೊಟ್ಟಿದ್ದರು. ಆ ಮೂಲಕ ಸಮಾಜವಾದಿ ಚಳವಳಿಯ ಮೂಲ ಆಶಯ ಈಡೇರಿಸಿದ್ದರು.

‘ಅಂದು ರಾಜಕೀಯದಲ್ಲಿ ಎರಡೇ ಅಂಶಕ್ಕೆ ಒತ್ತು ನೀಡಿದ್ದೆವು. ಕಾಂಗ್ರೆಸ್ ಪರವಾಗಿದ್ದರೆ ಅವರು ಶ್ರೀಮಂತರು, ಸಮಾಜವಾದಿ ಬೆಂಬಲಿಸಿದರೆ ಅವರು ಬಡವರು ಎಂದು. ಇಂದು ಜಾತಿ, ಧರ್ಮ ವಿಜೃಂಭಿಸುತ್ತಿದೆ. ಇದೂ ಒಂದು ದಿನ ಅಂತ್ಯವಾಗಲೇ ಬೇಕು. ಜಾತಿ ರಹಿತ ಪ್ರಜಾಪ್ರಭುತ್ವ, ಪ್ರಾಮಾಣಿಕರಿಗೆ ಗೌರವ ಸಿಗುವ ಕಾಲ ಮತ್ತೆ ಬಂದೇ ಬರುತ್ತದೆ’ ಎಂದು ಆಶಾಭಾವ ವ್ಯಕ್ತಪಡಿಸುತ್ತಾರೆ ಲಿಂಗಪ್ಪ.

ನೆಲೆ ಕಳೆದುಕೊಂಡ ಸಮಾಜವಾದಿಗಳು

ಒಂದು ಕಾಲದಲ್ಲಿ ಸಮಾಜವಾದಿ ನೆಲೆಯಾಗಿದ್ದ ತೀರ್ಥಹಳ್ಳಿಯಲ್ಲಿ ನಿರಂತರವಾಗಿ ಕಾಂಗ್ರೆಸ್, ಸಮಾಜವಾದಿಗಳ ಮಧ್ಯೆ ಸ್ಪರ್ಧೆ ನಡೆಯುತ್ತಿತ್ತು. ಗೋಪಾಲಗೌಡರ ನಂತರ ಸಮಾಜವಾದಿಗಳ ಪ್ರಭಾವ ಕಡಿಮೆಯಾಗಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿತ್ತು. ಸಮಾಜವಾದಿ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿದ್ದ ಎಸ್‌. ಬಂಗಾರಪ್ಪ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ತೆಕ್ಕೆಗೆ ಜಾರಿದ್ದರು. ಕಟ್ಟಾ ಸಮಾಜವಾದಿಯಾಗಿ ರೂಪುಗೊಂಡಿದ್ದ ಲಿಂಗಪ್ಪ ಅವರು ಪಕ್ಷಾಂತರ ಮಾಡಲು ಸಿದ್ಧರಿರಲಿಲ್ಲ. ಹಾಗಾಗಿ, ಅವರು 1978ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಡಿದಾಳು ದಿವಾಕರ್ ಎದುರು ಸೋಲು ಕಂಡರು.

ಕೃಷಿ, ಸಾಹಿತ್ಯದತ್ತ ಚಿತ್ತ

ಪೂರ್ಣಚಂದ್ರ ತೇಜಸ್ವಿ, ಕಡಿದಾಳು ಶಾಮಣ್ಣ, ಸಿಪಿಕೆ ಅವರ ಸಹಪಾಠಿಯಾಗಿದ್ದ ಲಿಂಗಪ್ಪ ಅವರು ಮೂರು ವರ್ಷ ವಕೀಲರಾಗಿ ಕೆಲಸ ಮಾಡಿದ್ದರು. 6 ವರ್ಷ ಶಾಸಕರಾಗಿದ್ದರು. 1978ರ ಸೋಲಿನ ನಂತರ ಅವರು ಒಂದು ಅವಧಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಮೂರು ದಶಕಗಳಿಂದ ಅವರು ಕೃಷಿಕರಾಗಿದ್ದಾರೆ. ಹಲವು ಸಾಹಿತ್ಯ ಕೃತಿಗಳನ್ನು ಹೊರತಂದಿದ್ದಾರೆ. ಪ್ರಸ್ತುತ 84ರ ಹರೆಯದ (ಜನನ 1934) ಲಿಂಗಪ್ಪ ಪತ್ನಿ ಗಿರಿಜಮ್ಮ ಅವರ ಜತೆ ಶಿವಮೊಗ್ಗದ ವಿನೋಬನಗರದಲ್ಲಿ ನೆಲೆಸಿದ್ದಾರೆ. ಪುತ್ರರಾದ ವೇಣುಗೋಪಾಲ್, ಫಣಿರಾಜ್ ವೈದ್ಯರು. ಪುತ್ರಿ ಶಿವಾಣಿ ಇಸ್ರೊದಲ್ಲಿ ಉಪ ಪ್ರಧಾನ ವ್ಯವಸ್ಥಾಪಕಿ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.