ಬೇಜವಾಬ್ದಾರಿ ತೋರಿದರೆ ಶಿಸ್ತು ಕ್ರಮ

7
ತೀರ್ಥಹಳ್ಳಿ: ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್‌

ಬೇಜವಾಬ್ದಾರಿ ತೋರಿದರೆ ಶಿಸ್ತು ಕ್ರಮ

Published:
Updated:

ತೀರ್ಥಹಳ್ಳಿ: ಚುನಾವಣೆ ನಿಯಮದ ಬಗ್ಗೆ ನಿಖರ ಮಾಹಿತಿ ಪಡೆಯದೇ ಕರ್ತವ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್‌ ಎಚ್ಚರಿಕೆ ನೀಡಿದರು.

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಮಂಗಳವಾರ ಚುನಾವಣಾ ಕರ್ತವ್ಯ ಕುರಿತು ಅಧಿಕಾರಿ, ಸಿಬ್ಬಂದಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಚುನಾವಣಾ ಕರ್ತವ್ಯ ನಿರ್ವಹಣೆ ಕುರಿತು ಎರಡು ಬಾರಿ ತರಬೇತಿ ನೀಡಲಾಗಿದೆ. ಇಷ್ಟಾದರೂ ಅಧಿಕಾರಿ ಮತ್ತು ಸಿಬ್ಬಂದಿ ಚುನಾವಣೆ ನಿಯಮಗಳನ್ನು ಸರಿಯಾಗಿ ಗ್ರಹಿಸಿಕೊಂಡಿಲ್ಲ. ಮಾದರಿ ನೀತಿ ಸಂಹಿತೆ, ಚುನಾವಣಾ ಕರ್ತವ್ಯಗಳ ಕುರಿತು ಕೈಪಿಡಿಯನ್ನು ಅಧ್ಯಯನ ಮಾಡದೇ ಇರುವುದು ಇದಕ್ಕೆಲ್ಲ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ ಚಲಾವಣೆ, ಮಾದರಿ ನೀತಿ ಸಂಹಿತೆ ನಿಯಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ, ಜಾಗೃತಿ ಸಭೆಗಳನ್ನು ಸಿಬ್ಬಂದಿ ನಡೆಸದೇ ಇರುವುದು ಗಮನಕ್ಕೆ ಬಂದಿದೆ. ಇಂಥ ತಪ್ಪುಗಳನ್ನು ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಚುನಾವಣಾಪೂರ್ವ ಸಿದ್ಧತೆಗಳು ಸಮಾಧಾನ ತಂದಿಲ್ಲ. ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ಶೌಚಾಲಯ ಇತರೆ ಮೂಲಸೌಕರ್ಯ ಇರುವಂತೆ ನೋಡಿಕೊಳ್ಳಿ’ ಎಂದು ತಿಳಿಸಿದರು.

ಜಾರಿಗೊಳಿಸಿದ್ದ ಕಾಯ್ದೆ ಅನ್ವಯ ಅಪರಾಧ ಪ್ರಕರಣಗಳಿಗೆ ಮೊಕದ್ದಮೆ ದಾಖಲಿಸಬೇಕು. ಪ್ರಕರಣದ ಪತ್ತೆಗೆ ಚುನಾವಣಾ ನೀತಿ ಸಂಹಿತೆ ನಿಯಮ ಪಾಲನೆ ಮಾಡಬೇಕು. ಏಪ್ರಿಲ್‌ 17ರ ನಂತರ ಮತಗಟ್ಟೆಗಳಿಗೆ ಚುನಾವಣಾ ಆಯೋಗದ ವೀಕ್ಷಕ ಅಧಿಕಾರಿಗಳು ಭೇಟಿ ನೀಡುವರು. ದೋಷ ಕಂಡುಬಂದರೆ ಸಂಬಂಧಪಟ್ಟ ಸೆಕ್ಟರ್‌ ಮ್ಯಾಜಿಸ್ಟ್ರೇಟ್‌ ಅಧಿಕಾರಿ ವಿರುದ್ಧ ಕ್ರಮ ಕೈಕೊಳ್ಳಲಾಗುವುದು. ಸ್ಕ್ವಾಡ್‌, ಪಿಆರ್‌ಒ ಕಾರ್ಯಚಟುವಟಿಕೆ ಪ್ರಮುಖವಾಗಿದೆ. ಪಿಡಿಒ, ವಿಎ, ಬಿಎಲ್‌ಒ ಸಿಬ್ಬಂದಿ ಚುರುಕಿನಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ರಾಕೇಶ್‌ ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಕ್ಷೇತ್ರ ಚುನಾವಣಾಧಿಕಾರಿ ಗೋವಿಂದಸ್ವಾಮಿ, ಸಹಾಯಕ ಚುನಾವಣಾಧಿಕಾರಿ ಆನಂದಪ್ಪ ನಾಯ್ಕ ಅವರೂ ಇದ್ದರು.

**

ಅಭ್ಯರ್ಥಿಗೆ ₹ 28 ಲಕ್ಷ ವೆಚ್ಚಕ್ಕೆ ಅವಕಾಶವಿದೆ. ಆದರೆ, ಕ್ಷೇತ್ರದಲ್ಲಿ ಹೆಚ್ಚು ಹಣ ಖರ್ಚು ಮಾಡಬಹುದು ಎಂಬ ಮಾಹಿತಿ ದೊರೆಕಿದೆ. ಅಕ್ರಮ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು – ಡಾ.ಎಂ.ಲೋಕೇಶ್‌, ಜಿಲ್ಲಾಧಿಕಾರಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry