ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿರುಕುಳ ತಡೆಗೆ ಪ್ರತಿಭಟನೆಯೇ ಅಸ್ತ್ರ’

ಶಹಾಪುರ ನ್ಯಾಯಾಲಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ
Last Updated 12 ಏಪ್ರಿಲ್ 2018, 11:37 IST
ಅಕ್ಷರ ಗಾತ್ರ

ಶಹಾಪುರ: ‘ಯಾವುದೇ ವ್ಯಕ್ತಿ ಲೈಂಗಿಕವಾಗಿ ಕಿರುಕುಳ ನೀಡಲು ಮುಂದಾದರೆ ಮೊದಲು ಮಹಿಳೆಯರು ಅದನ್ನು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು.ನಂತರ ಧೈರ್ಯವಾಗಿ ದುಷ್ಟಶಕ್ತಿಗಳ ವಿರುದ್ಧ ದೂರು ನೀಡಬೇಕು’ ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಪ್ರಭು ಎನ.ಬಡಿಗೇರ ಸಲಹೆ ನೀಡಿದರು.

ಇಲ್ಲಿನ ಜೆಎಂಎಫ್ ನ್ಯಾಯಾಲಯದ ಆವರಣದಲ್ಲಿ ಬುಧವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ‘ಲೈಂಗಿಕ ಅಪರಾಧ ಗಳಿಂದ ಮಗುವಿನ ರಕ್ಷಣೆ ಕಾಯ್ದೆ’ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳು ನಮ್ಮ ಭವಿಷ್ಯದ ಆಸ್ತಿ. ದೇವರ ಸಮಾನರಾದ ಯಾವುದೇ ಮಕ್ಕಳ ಮೇಲೆ ದೌರ್ಜನ್ಯವಾದರೆ ಎಲ್ಲರೂ ಖಂಡಿಸಬೇಕು. ಮಕ್ಕಳ ಸಂರಕ್ಷಣೆಗೆ ಕಾನೂನಿನಲ್ಲಿ ಪ್ರಬಲ ರಕ್ಷಣೆ ನೀಡಿದೆ. 18 ವರ್ಷದ ಒಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾದರೆ ಸಮಿಪದ ಠಾಣೆಗೆ ತೆರಳಿ ದೂರು ನೀಡಬೇಕು. ಮುಂದೆ ನ್ಯಾಯಾಲಯದ ಸಾಕ್ಷಿ ಸಮಯದಲ್ಲಿ ಯಾವುದೇ ಭೀತಿಗೆ ಒಳಗಾಗದೆ ಸಾಕ್ಷಿ ನೀಡಿದರೆ ಕೃತ್ಯ ಎಸಗಿದ ವ್ಯಕ್ತಿ ಕಾನೂನು ಕುಣಿಕೆಯಿಂದ ಪಾರಾಗಲು ಸಾಧ್ಯವಿಲ್ಲ. ಇಂತಹ ಶಿಕ್ಷೆಯಿಂದ ಮುಂದೆ ಮತ್ತೊಬ್ಬರಿಗೆ ಪಾಠವಾಗುತ್ತದೆ’ ಎಂದರು.

ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಎಚ್.ಎ.ಸಾತ್ವಿಕ ಮಾತನಾಡಿ, ’ಚಿಕ್ಕ ಮಕ್ಕಳಿಗೆ ಯಾವುದೆ ಕಾರಣಕ್ಕೆ ಮೊಬೈಲ್ ನೀಡಬಾರದು. ಅದರಿಂದ ಸದ್ಬಳಕೆ ಮಾಡಿಕೊಳ್ಳಬೇಕು ವಿನಃ ದುರ್ಬಳಕೆ ಮಾಡಿಕೊಳ್ಳಬಾರದು. ಪಾಲಕರು ಸದಾ ತಮ್ಮ ಮಕ್ಕಳ ನಡೆ ನುಡಿಯ ಬಗ್ಗೆ ಗಮನಿಸುತ್ತಿರಬೇಕು. ಮಕ್ಕಳಿಗೆ ಶಿಕ್ಷಣ ಜೊತೆಯಲ್ಲಿ ಸಂಸ್ಕಾರವನ್ನು ಪಾಲಕರು ನೀಡಬೇಕು’ ಎಂದರು.

ಹಿರಿಯ ವಕೀಲ ಆರ್.ಎಂ.ಹೊನ್ನಾರಡ್ಡಿ,ಅವರು ‘ಲೈಂಗಿಕ ಅಪರಾಧಗಳಿಂದ ಮಗುವಿನ ರಕ್ಷಣೆ’ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಅಮರೇಶ ದೇಸಾಯಿ. ಕಾರ್ಯದರ್ಶಿ ಹೇಮರಡ್ಡಿ ಕೊಂಗಂಡಿ, ಮಲ್ಲಪ್ಪ ಪೂಜಾರಿ, ಬಸಮ್ಮ ರಾಂಪುರೆ, ಜಯಲಕ್ಷ್ಮಿ ಬಸರಡ್ಡಿ, ಹಿರಿಯ ವಕೀಲರಾದ ಶ್ರೀನಿವಾಸರಾವ ಕುಲಕರ್ಣಿ, ಬಿ.ಕೃಷ್ಣಮೂರ್ತಿ, ವಾಸುದೇವ ಕಟ್ಟಿಮನಿ, ಶರಬಣ್ಣ ರಸ್ತಾಪುರ ಇದ್ದರು.

**

ಮಕ್ಕಳಿಗೆ ಶಿಕ್ಷಣದ ಜತೆಯಲ್ಲಿ ಉತ್ತಮ ಸಂಸ್ಕಾರವನ್ನು ನೀಡಬೇಕು. ಚಿಕ್ಕ ಮಕ್ಕಳಿಗೆ ಯಾವುದೆ ಕಾರಣಕ್ಕೂ ಮೊಬೈಲ್ ನೀಡಬಾರದು – ಎಚ್‌.ಎ.ಸಾತ್ವಿಕ, ನ್ಯಾಯಾಧೀಶ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT