ಶುಕ್ರವಾರ, ಡಿಸೆಂಬರ್ 13, 2019
19 °C

ಪ್ರಸಾಧನದಲ್ಲಿ ಅಸ್ಮಿತೆ ಕಂಡುಕೊಂಡ ಅಸ್ಮಿ

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

ಪ್ರಸಾಧನದಲ್ಲಿ ಅಸ್ಮಿತೆ ಕಂಡುಕೊಂಡ ಅಸ್ಮಿ

* ಮೇಕಪ್‌ ದೀರ್ಘಾವಧಿ ತಾಜಾ ಆಗಿರಲು ಏನು ಮಾಡಬೇಕು?

ಭಾರತದ ಹವಾಮಾನ, ವಾತಾವರಣದಲ್ಲಿ ಇಡೀ ದಿನ ಮೇಕಪ್‌ ಮಾಸದಂತೆ ಕಾಯ್ದುಕೊಳ್ಳುವುದು ತ್ರಾಸದಾಯಕ. ಇಲ್ಲಿನ ಹವಾಮಾನದಲ್ಲಿ ಗರಿಷ್ಠ 8 ಗಂಟೆ ತಾಜಾತನ ಉಳಿಸಿಕೊಳ್ಳಬಹುದು. ಕರವಸ್ತ್ರದಲ್ಲಿ ಫೇಸ್‌ ಪೌಡರ್‌ ಇಟ್ಟುಕೊಂಡಿರಿ. ಮುಖ ಬೆವರಿದಾಗ ಅಥವಾ ಜಿಡ್ಡು ಉತ್ಪತ್ತಿಯಾದಾಗ ಪೌಡರ್‌ನಿಂದ ಮುಖ ಒರೆಸಿಕೊಳ್ಳುವುದು ಒಳಿತು. ಯಾವ ಬಗೆಯ ಚರ್ಮ ಎಂಬುದನ್ನು ನೋಡಿಕೊಂಡು ಅದಕ್ಕೆ ತಕ್ಕುದಾದ ಮೇಕಪ್‌ ಮಾಡುವುದರಿಂದ ತಾಜಾತನವನ್ನು ಕೆಲ ಸಮಯ ಉಳಿಸಿಕೊಳ್ಳಬಹುದು.

* ಬಿಬಿ ಕ್ರೀಮ್‌ಗಳ ಬಳಕೆ ಹೇಗೆ?

ಮುಖಕ್ಕೆ ಫೌಂಡೇಷನ್ ಕ್ರೀಮ್‌ಗಳು ಹಾಗೂ ವಿವಿಧ ಮೇಕಪ್‌ ಕ್ರೀಮ್‌ಗಳನ್ನು ಪ್ರತ್ಯೇಕವಾಗಿ ಬಳಸುವುದಕ್ಕೆ ಪರ್ಯಾಯವಾಗಿ ಬಿಬಿ ಕ್ರೀಮ್‌ ಉಪಯೋಗಿಸಬಹುದು. ಇದು, ಮುಖದಲ್ಲಿನ ಕಲೆಗಳು, ಕಣ್ಣಿನ ಕೆಳಗಿನ ಕಪ್ಪು ವರ್ತುಲ, ಮೂಗು ಮತ್ತು ತುಟಿಯ ಬಳಿ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ಮುಚ್ಚುತ್ತದೆ. ಉದ್ಯೋಗಸ್ಥರು, ಪ್ರತಿದಿನ ಮೇಕಪ್‌ ಮಾಡಿಕೊಳ್ಳಲು ಸಮಯ ಇಲ್ಲದವರು ಬಿಬಿ ಕ್ರೀಮ್‌ ಬಳಸಬಹುದು.

* ಪ್ರಸಾಧನ ಕಲೆಯಲ್ಲಿ ಆಸಕ್ತಿ ಮೂಡಿದ್ದು ಹೇಗೆ?

ಚಿಕ್ಕಂದಿನಿಂದಲೂ ಪ್ರಸಾಧನ ಕಲೆಯ ಕುರಿತು ವಿಶೇಷ ಒಲವಿತ್ತು. ಆದರೆ, ಕಲಿಕೆಗೆ ಅವಕಾಶಗಳಿರಲಿಲ್ಲ. ಶಿಕ್ಷಣ ಪೂರ್ಣಗೊಂಡ ನಂತರ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಮಾಡಲು ಆರಂಭಿಸಿದೆ. ಬೇರೆಯವರ ಕೈಕೆಳಗೆ ಕಾರ್ಯನಿರ್ವಹಿಸುವುದು ಕಷ್ಟ ಎಂದೆನಿಸಿತು. ಅದಕ್ಕೆ ಪ್ರಸಾಧನ ಕಲೆಯ ಕೋರ್ಸ್‌ ಪೂರೈಸಿ ಪೂರ್ಣಕಾಲಿಕ ವೃತ್ತಿಯಾಗಿ ಆರಿಸಿಕೊಂಡೆ.

* ಪ್ರಸಾಧನ ಕ್ಷೇತ್ರದ ಸವಾಲುಗಳೇನು?

ಇದೊಂದು ಸೂಕ್ಷ್ಮ ಕಲೆ. ಕ್ರಿಯಾಶೀಲತೆಗೆ ಸದಾ ನಮ್ಮನ್ನು ಒಡ್ಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಉತ್ಪನ್ನಗಳ ವೈವಿಧ್ಯ ಹೆಚ್ಚುತ್ತಿದೆ. ನಮಗೆ ಅವುಗಳ ಮಾಹಿತಿ ಇರಬೇಕು. ಸಾಮಾಜಿಕ ಮಾಧ್ಯಮಗಳ ಪ್ರಭಾವ‌ದಿಂದ ಜಗತ್ತೇ ಹಳ್ಳಿಯಾಗಿರುವ ಈ ಸಂದರ್ಭದಲ್ಲಿ ಪ್ರಸಾಧನ ಕಲಿಕೆಯ ಹಾದಿ ಸುಲಭವಾಗಿದೆ. ಆದರೆ ಸವಾಲುಗಳು ಹೆಚ್ಚುತ್ತಿವೆ. ಪ್ರಸಾಧನವೊಂದು ನಂಬಿಕೆಯ ಕಲೆ. ಜನರು ನಮ್ಮ ಮೇಲೆ ನಂಬಿಕೆ ಇರಿಸಿ ಮುಖವನ್ನು ಒಡ್ಡುತ್ತಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಮೇಕಪ್‌ ಮಾಡಬೇಕು. ಚರ್ಮದ ವಿಧ ಮತ್ತು ಅದಕ್ಕೆ ಹೊಂದಿಕೆಯಾಗುವ ಮೇಕಪ್‌ಗಳ ಕುರಿತು ಪ್ರಾಥಮಿಕ ಜ್ಞಾನ ಅಗತ್ಯ.

* ನಿಮ್ಮ ಪ್ರಕಾರ ಮೇಕಪ್‌ ಎಂದರೆ?

ಒಂದಾದ ನಂತರ ಇನ್ನೊಂದು ಕ್ರೀಮ್‌ ಮೆತ್ತಿಕೊಳ್ಳುವುದು ಮೇಕಪ್ ಅಲ್ಲ. ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿರುವ ಮೊಡವೆ ಅಥವಾ ಯಾವುದೇ ನ್ಯೂನ್ಯತೆಗಳು ಕಾಣಿಸದಂತೆ ಕುತ್ತಿಗೆ ಮತ್ತು ಮುಖ ಒಂದೇ ಚೌಕಟ್ಟಿನ ಭಾಗ ಎನ್ನುವಂತೆ ಬಿಂಬಿಸುವುದೇ ಪ್ರಸಾಧನ ಕಲಾವಿದರ ಕೌಶಲ.

* ಮದುಮಗಳ ಮೇಕಪ್ ಮತ್ತು ರೂಪದರ್ಶಿಯರ ಮೇಕಪ್‌ಗಳಿರುವ ವ್ಯತ್ಯಾಸಗಳೇನು?

ಮದುಮಗಳ ಮೇಕಪ್‌ನಲ್ಲಿ ಪ್ರಸಾಧನ ಕಲಾವಿದರ ನಿಜವಾದ ಕೌಶಲ ಬಿಂಬಿತವಾಗುತ್ತದೆ. ನಮ್ಮ ಕೈಚಳಕಕ್ಕೆ ಇದು ಸೂಕ್ತ ವೇದಿಕೆ. ಮದುವೆ ಮುಹೂರ್ತದಲ್ಲಿ ವಧು ಗಂಟೆಗಟ್ಟಲೆ ಹೋಮಕುಂಡದ ಮುಂದೆ ಕುಳಿತಿರುತ್ತಾಳೆ. ಆದರೂ ಆಕೆಯ ಮುಖ ಕಳೆಗುಂದದಂತೆ ಮೇಕಪ್‌ ಮಾಡಬೇಕು. ವಧುವಿನ ಮುಖದ ಚರ್ಮವನ್ನು ಮೊದಲು ಗುರುತಿಸಿ ಉತ್ಪನ್ನಗಳನ್ನು ಆರಿಸಿಕೊಳ್ಳಬೇಕು. ರೂಪದರ್ಶಿಯರಿಗಾದರೆ, ಧರಿಸುವ ಉಡುಪು ಹಾಗೂ ಯಾವ ರ‍್ಯಾಂಪ್‌ಮೇಲೆ ಹಜ್ಜೆಹಾಕುತ್ತಿದ್ದಾರೆ ಎಂಬುದನ್ನು ಆಧರಿಸಿ ಮೇಕಪ್ ಮಾಡಲಾಗುತ್ತದೆ. ರೂಪದರ್ಶಿಯರು ಕೇಶ ಹಾಗೂ ಕಣ್ಣಿನ ಪ್ರಸಾಧನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

* ಹಿಂದಿನ ಮೇಕಪ್‌ಗೂ ಇಂದಿಗೂ ಏನೆಲ್ಲಾ ಬದಲಾವಣೆಗಳಾಗಿವೆ?

ಸೌಂದರ್ಯವನ್ನು ಆಸ್ವಾದಿಸುವ ಕಣ್ಣು ಮತ್ತು ಮನಸ್ಸುಗಳಲ್ಲಾಗುವ ಬದಲಾವಣೆ ಪ್ರಸಾಧನ ಕ್ಷೇತ್ರದ ಮೇಲೆ ಬಿಂಬಿತವಾಗುತ್ತದೆ. ಇಂದು ಬರಿಗಣ್ಣಿನ ನೋಟಕ್ಕಿಂತ ಕ್ಯಾಮೆರಾ ಕಣ್ಣಿನ ನೋಟವೇ ಪ್ರಾಧಾನ್ಯತೆ ಪಡೆಯುತ್ತಿದೆ. ಗುಣಮಟ್ಟದ ಕ್ಯಾಮೆರಾಗಳಿರುವುದರಿಂದ ಸ್ಪಲ್ಪ ಮೇಕಪ್ ಮಾಡಿದರೂ ಎದ್ದು ಕಾಣುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಮೇಕಪ್ ಮಾಡಬೇಕು.

* ಮೇಕಪ್‌ ಕಿಟ್‌ನಲ್ಲಿ ಏನೇನಿರಬೇಕು?

ಕಿಟ್‌ನಲ್ಲಿ ಎಷ್ಟು ಬೆಲೆಯ ಹಾಗೂ ಯಾವ ಬ್ರ್ಯಾಂಡ್‌ನ ಉತ್ಪನ್ನಗಳಿವೆ ಎನ್ನುವುದರ ಮೇಲೆ ಪ್ರಸಾಧನದ ಗುಣಮಟ್ಟ ನಿರ್ಧರಿಸಲಾಗದು. ಮಾಡಿಕೊಂಡಿರುವ ಮೇಕಪ್‌ನಿಂದ ಅಂತಿಮವಾಗಿ ನಾವು ಹೇಗೆ ಕಾಣಿಸುತ್ತೇವೆ ಎಂಬುದಷ್ಟೇ ಮುಖ್ಯ. ಬ್ರ್ಯಾಂಡ್‌ಗಳ ಹಿಂದೆ ಹೋಗದೆ, ಚರ್ಮಕ್ಕೆ ಹೊಂದಿಕೆಯಾಗುವ ಸೌಂದರ್ಯವರ್ಧಕಗಳಿಂದ ಕಿಟ್‌ ಭರ್ತಿಮಾಡಿಕೊಳ್ಳಬೇಕು.

ಸಂಪರ್ಕಕ್ಕೆ: facebook.com/AsmeeMUA2017

ಪ್ರತಿಕ್ರಿಯಿಸಿ (+)