ಶುಕ್ರವಾರ, ಡಿಸೆಂಬರ್ 6, 2019
23 °C

ವಿಶ್ವ ರ್‍ಯಾಂಕ್ ಪಟ್ಟಿಯಲ್ಲಿ ಕಿದಂಬಿ ಶ್ರೀಕಾಂತ್‌ಗೆ ಅಗ್ರ ಸ್ಥಾನ

Published:
Updated:
ವಿಶ್ವ ರ್‍ಯಾಂಕ್ ಪಟ್ಟಿಯಲ್ಲಿ ಕಿದಂಬಿ ಶ್ರೀಕಾಂತ್‌ಗೆ ಅಗ್ರ ಸ್ಥಾನ

ನವದೆಹಲಿ: ಬ್ಯಾಡ್ಮಿಂಟನ್‌ ತಾರೆ ಕಿದಂಬಿ ಶ್ರೀಕಾಂತ್‌ ಅವರು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌(ಬಿಡಬ್ಲ್ಯುಎಫ್‌) ಗುರುವಾರ ಬಿಡುಗಡೆ ಮಾಡಿರುವ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಇದೊಂದು ಐತಿಹಾಸಿಕ ಸಾಧನೆಯೂ ಆಗಿದೆ.

ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ಮೊದಲ ಭಾರತೀಯ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಧುನಿಕ ಗಣಕೀಕೃತ ಶ್ರೇಯಾಂಕ ವ್ಯವಸ್ಥೆಯನ್ನು ಪರಿಚಯಿಸುವ ಮೊದಲು ಪ್ರಕಾಶ್‌ ಪಡುಕೋಣೆ ಅವರು ವಿಶ್ವ ಶ್ರೇಯಾಂಕ ಆಟಗಾರರಾಗಿ ಗುರುತಿಸಿಕೊಂಡಿದ್ದರು.

2015ರಲ್ಲಿ ಮಹಿಳಾ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಸೈನಾ ನೆಹ್ವಾಲ್‌ ಗಳಿಸಿದ ಬಳಿಕ ಈ ಅಗ್ರ ಸ್ಥಾನವನ್ನು ಪಡೆದ ಎರಡನೇ ಭಾರತೀಯ ಶ್ರೀಕಾಂತ್.

ಕಳೆದ ವರ್ಷ ಅವರು ತೋರಿದ ಸತತ ಸಾಧನೆ ನಂತರ, ನಾಲ್ಕು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಅವರಿಗೆ ಪದ್ಮಶ್ರೀ ಪ್ರಶಸ್ತಿಯೂ ಲಭಿಸಿತ್ತು.

ಶ್ರೀಕಾಂತ್‌ ಅವರ ಬಳಿ 76,895 ಪಾಯಿಂಟ್‌ಗಳಿವೆ. ಇದರೊಂದಿಗೆ ಅವರು ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

‘ನಾನು ಮೊದಲ ಬಾರಿಗೆ ವಿಶ್ವ ನಂ:1 ಶ್ರೇಯಾಂಕವನ್ನು ಸಾಧಿಸಿದ್ದು ಸಂತಸ ತಂದಿದೆ. ನನ್ನ ಈ ಸಾಧನೆ ಪ್ರಕಾಶ್ ಪಡುಕೋಣೆ ಅವರ ನಂತರದ್ದು, ಪ್ರಕಾಶ್‌ ಪಡುಕೋಣೆ ಅವರು ಈ ಸಾಧನೆ ತೋರಿದ ಮೊದಲ ಭಾರತೀಯ ವ್ಯಕ್ತಿಯಾಗಿದ್ದಾರೆ’ ಎಂದು ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಶ್ರೀಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಶ್ರೀಕಾಂತ್‌ ಬ್ಯಾಡ್ಮಿಂಟನ್‌ನ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದ ಪಂದ್ಯದಲ್ಲಿ ಶ್ರೀಕಾಂತ್‌ ಆಟ. ಚಿತ್ರ: ಪಿಟಿಐ

ಪ್ರತಿಕ್ರಿಯಿಸಿ (+)