ಸೋಮವಾರ, ಜೂಲೈ 13, 2020
23 °C

ಆಡು, ನಲಿ, ಕಲಿ...

ಪೀರ್‌ಪಾಷಾ Updated:

ಅಕ್ಷರ ಗಾತ್ರ : | |

ಆಡು, ನಲಿ, ಕಲಿ...

‘ಹೆ ಡ್‌ಸ್ಟ್ರೀಮ್ಸ್‌’, ಒಂಬತ್ತು ಜನ ಸಮಾನ ಮನಸ್ಕರಿಂದ 2008ರಲ್ಲಿ ಆರಂಭಗೊಂಡ ಸಂಸ್ಥೆ. ಮೊದಲು ಮಹಿಳಾ ಸಬಲೀಕರಣ ಮತ್ತು ಯುವಕರ ಸಶಕ್ತಿಕರಣ ಅದರ ಆದ್ಯತೆಯಾಗಿತ್ತು. 2015ರ ನಂತರ ಅದರ ಗುರಿಗಳು 12ರಿಂದ 16ರ ವಯೋಮಾನದ ಮಕ್ಕಳ ಕಲಿಕಾ ಕಲ್ಯಾಣದೆಡೆಗೆ ತಿರುಗಿವೆ.

ವಿದ್ಯಾರ್ಥಿಗಳಲ್ಲಿ ಜ್ಞಾನ, ಸೃಜನಾತ್ಮಕ ಕಲೆ, ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸದ ಮನೋಭಾವ ತುಂಬುವ ಕಾರ್ಯಕ್ರಮಗಳನ್ನು ರೂಪಿಸಿ, ಕಾರ್ಯಗತಗೊಳಿಸುತ್ತಿದೆ. ಅದರಲ್ಲಿ ಅರಿವು, ದಿಶಾ, ಟ್ಯಾಕಲ್‌ ಫೆಸ್ಟ್‌, ಕ್ಯಾರವಾನ, ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ಸೇರಿವೆ.

ಆಡಾಡುತ ಕಲಿಕೆ

ಶಾಲಾ ಕೊಠಡಿಗಳಲ್ಲಿನ ಏಕಮುಖ ಕಲಿಕೆಯಿಂದ ಮಕ್ಕಳನ್ನು ಹೊರತಂದು, ಗ್ಯಾಜೆಟ್‌ಗಳ ಸಹಾಯದಿಂದ ವಿಜ್ಞಾನದ ಕೌತುಕಗಳು ಮತ್ತು ಇಂಗ್ಲಿಷ್‌ ಕಲಿಕೆಯನ್ನು ಮನದಟ್ಟು ಮಾಡಿಸಲು ಅರಿವು ಕಾರ್ಯಕ್ರಮ ರೂಪಿಸಲಾಗಿದೆ. 6ರಿಂದ 8ನೇ ತರಗತಿಯ ಮಕ್ಕಳಿಲ್ಲಿ ‘ಅರಿವು’ ಆ್ಯಪ್‌ನಲ್ಲಿ ಗೇಮ್‌ಗಳನ್ನು ಆಡುತ್ತಲೇ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳುತ್ತಾರೆ. ಪಠ್ಯಗಳನ್ನು ಅರ್ಥೈಸಿಕೊಳ್ಳುತ್ತಾರೆ. ವಾರದಲ್ಲಿ ಎರಡು ದಿನ ಈ  ಕ್ಲಾಸ್‌ಗಳು ನಡೆಯುತ್ತವೆ. ಇದರೊಂದಿಗೆ ನಡೆಯುವ ‘ಕ್ಯಾರವಾನ’ ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ, ರಂಗಭೂಮಿ, ಕಥೆ ಹೇಳುವಿಕೆ, ಕರಕುಶಲ ವಸ್ತುಗಳ ತಯಾರಿಕೆ ಬಗ್ಗೆ ಮಕ್ಕಳಿಗೆ ತಿಳಿ ಹೇಳಲಾಗುತ್ತದೆ. ಈ ಚಟುವಟಿಕೆಗಳು ಬೇಸಿಗೆ ಶಿಬಿರದಲ್ಲಿ ಮರುಕಳಿಸುತ್ತವೆ.

ಅರಿವು ಕಾರ್ಯಕ್ರಮದ ಚಟುವಟಿಕೆಗಳು ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಯ 30 ಸರ್ಕಾರಿ ಶಾಲೆಗಳು ಮತ್ತು 8 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ನಡೆಯುತ್ತಿವೆ. ಇದಕ್ಕಾಗಿ ಶಿಕ್ಷಣ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ಸಂಸ್ಥೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ.

9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ ಕುರಿತು ಮಾರ್ಗದರ್ಶನ ನೀಡಲು ‘ದಿಶಾ’ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಹೈಸ್ಕೂಲ್ ಬಳಿಕ ಆಯ್ದುಕೊಳ್ಳಬಹುದಾದ ಕೋರ್ಸ್‌ಗಳ ಮಾಹಿತಿ ನೀಡಲಾಗುತ್ತದೆ. ಹಾಗೆಯೇ ಹಲವಾರು ವೃತ್ತಿರಂಗಗಳ ಪರಿಚಯ ಮಾಡಿಕೊಡಲಾಗುತ್ತದೆ. ನಾಲ್ಕು ದಿನಗಳ ನಡೆಯುವ ಈ ಕಾರ್ಯಾಗಾರದಲ್ಲಿನ ಮಳಿಗೆಗಳಲ್ಲಿ ವಿಪುಲವಾದ ಮಾರ್ಗದರ್ಶನ ಸಿಗುತ್ತದೆ.

ಹೈಸ್ಕೂಲ್‌ ವಿದ್ಯಾರ್ಥಿಗಳ ಕಾಲೇಜು ಪ್ರವೇಶ

‘ದಿಶಾ’ದಲ್ಲಿ ಟ್ಯಾಕಲ್‌ ಫೆಸ್ಟ್‌ ಕೂಡ ಸೇರಿದೆ. ಇಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಗಳು ಕಾಲೇಜುಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿನ ತರಗತಿ, ಪ್ರಯೋಗಾಲಯ ಮತ್ತು ಗ್ರಂಥಾಲಯಗಳನ್ನು ನೋಡುತ್ತಾರೆ. ಕಾಲೇಜು ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತಾರೆ. ‘ಇದರಿಂದ ಕಾಲೇಜು ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಲ್ಲಿ ಇರುವ ಕುತೂಹಲ ತಣಿಯುತ್ತದೆ. ಕಾಲೇಜು ಮೆಟ್ಟಿಲು ಹತ್ತುವ ಉತ್ಸಾಹ ಹೆಚ್ಚುತ್ತದೆ.

ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದಿಂದ ಹೊರಗುಳಿಯುವಿಕೆಯ ಪ್ರಮಾಣ ಕಡಿಮೆ ಆಗಲಿದೆ’ ಎನ್ನುವುದು ಯೋಜನಾ ಸಂಯೋಜಕಿ ಸಿ.ವಿನೀತಾ ವಿಶ್ವಾಸ.

ಸಂಸ್ಥೆ ನಡೆಸುವ ವಿಶೇಷ ತರಗತಿಗಳಲ್ಲಿ ಹೇಳಿದ ಕಥೆಗಳು, ಹಾಡುಗಳನ್ನು ಮೊಬೈಲ್‌ ಮೂಲಕ ಮಕ್ಕಳಿಗೆ ತಲುಪಿಸಲು ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಗೈರುಹಾಜರಾದ ವಿದ್ಯಾರ್ಥಿ ಸಂಸ್ಥೆಯ ನಿರ್ದಿಷ್ಟ ಸಂಖ್ಯೆಗೆ ಪೋಷಕರ ಮೊಬೈಲ್‌ನಿಂದ ಮಿಸ್‌ಕಾಲ್‌ ಕೊಟ್ಟರೆ ಸಾಕು, ಅವರಿಗೆ ಮರಳಿ ಕರೆ ಬರುತ್ತದೆ. ಅದರಲ್ಲಿ ಮುದ್ರಿತ ಧ್ವನಿಯ ಕಥೆಗಳು, ಹಾಡುಗಳನ್ನು ಮಕ್ಕಳಿಗೆ ಕೇಳಿಸಲಾಗುತ್ತದೆ. ಜತೆಗೆ ಮಕ್ಕಳು ಹೇಳುವ ಕಥೆಗಳ ಧ್ವನಿಯನ್ನು ಮುದ್ರಿಸಿಕೊಂಡು, ಕಥೆ ಹೇಳುವ ಕಲೆಯನ್ನು ಸುಧಾರಿಸಲಾಗುತ್ತದೆ.

‘ನಾನು ಬಾಲ್ಯದಲ್ಲಿ ಕಳೆದುಕೊಂಡ ಅನುಭವಗಳನ್ನು ಈಗ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಮೂಲಕ ಪಡೆಯುತ್ತಿದ್ದೇನೆ. ಇಂದಿನ ಮಕ್ಕಳಲ್ಲಿನ ಆಸಕ್ತಿ, ಏಕಾಗ್ರತೆ ಅನುಕರಿಸಲು ಕಲಿತಿದ್ದೇನೆ. ಹೆಡ್‌ಸ್ಟ್ರೀಮ್ಸ್‌ ಒಡನಾಟದಿಂದ ನನ್ನ ವ್ಯಕ್ತಿತ್ವದಲ್ಲೂ ಹಲವಾರು ಸಕಾರಾತ್ಮಕ ಬದಲಾವಣೆ ಆಗಿದೆ’ ಎನ್ನುತ್ತಾರೆ ಈ ಸಂಸ್ಥೆಯಲ್ಲಿ ಸ್ವಯಂಸೇವಕಿ, ಬಿ.ಎ. ವಿದ್ಯಾರ್ಥಿನಿ ರಾಜೇಶ್ವರಿ ವಿ.

‘ದೊಡ್ಡ ಝರಿಯೊಂದು ಸಣ್ಣ ಝರಿಗಳನ್ನು ತನ್ನಲ್ಲಿ ಸೇರಿಸಿಕೊಂಡು ಹರಿಯುತ್ತಾ ಬೆಳೆದು ನದಿಯಾಗುತ್ತದೆ. ಸಮಾಜದ ಅಭಿವೃದ್ಧಿಯೆಂಬ ನದಿ ವಿಸ್ತರಿಸಲು ನಮ್ಮ ಹೆಡ್‌ಸ್ಟ್ರೀಮ್ಸ್‌ ಸಂಸ್ಥೆ ಶ್ರಮಿಸುತ್ತಿದೆ’ ಎಂಬುದು ಸಂಸ್ಥೆಯ ಸಹ–ಸಂಸ್ಥಾಪಕ ಡಾ.ನವೀನ್‌ ಐ ಥಾಮಸ್‌ ಮಾತು.

ನೀವೂ ಈ ಸಂಸ್ಥೆಯೊಂದಿಗೆ ಕೈಜೋಡಿಸಬೇಕಾದರೆ ಸಂಪರ್ಕಿಸಿ: headstreams.org

‘ಕಲಿಕೆಗೆ ಹೊಸ ಅವಕಾಶ ಸಿಕ್ಕಿದೆ’

‘ನನಗೆ ಇಂಗ್ಲಿಷ್‌ ಕಲಿಯುವ ಆಸಕ್ತಿ ಇದೆ. ಎನ್‌ಜಿಒ ಮಿಸ್‌ಗಳು ಹೇಳಿಕೊಟ್ಟ ಪಾಠದಿಂದಾಗಿ, ಮಾತಿನಲ್ಲಿ ಹೆಚ್ಚು ಇಂಗ್ಲಿಷ್‌ ಪದಗಳನ್ನು ಬಳಸುವುದನ್ನು ಕಲಿತಿದ್ದೇನೆ. ನನಗೀಗ ಆ್ಯಕ್ಟಿವಿಟಿ ಡಿಸೈನ್‌ ಗೊತ್ತು, ಕ್ರಿಯೇಟಿವಿಟಿ ಥಿಂಕಿಂಗ್‌ ಅಂದ್ರೆ ಗೊತ್ತು’ ಎನ್ನುತ್ತಾಳೆ ಸಂಸ್ಥೆಯ ‘ಅರಿವು’ ಕಾರ್ಯಕ್ರಮದ ಫಲಾನುಭವಿ ಮಾಸ್ತಿ ತಾಲ್ಲೂಕಿನ ಕಪ್ಪೂರು ಗ್ರಾಮದ 6ನೇ ತರಗತಿ ವಿದ್ಯಾರ್ಥಿನಿ ಹರಿಣಿ.

‘ನಮ್ಮೂರು ಹುಬ್ಬಳ್ಳಿ. ಅಪ್ಪ–ಅಮ್ಮ ಹಾಸ್ಟೆಲ್‌ನಲ್ಲಿ ಬಿಟ್ಟೋದ ಮೇಲೆ ಅವರ ನೆನಪು ಕಾಡುತ್ತಿತ್ತು. ಈ ಎನ್‌ಜಿಒ ಆ್ಯಕ್ಟಿವಿಟಿಯಿಂದ ಮನೆ ಹೆಚ್ಚು ನೆನಪಾಗಲ್ಲ. ನಾನೀಗ ಖುಷಿಯಿಂದ ಇದ್ದೇನೆ. ಓದಿನಲ್ಲೂ ಗಮನ ಹೆಚ್ಚಿದೆ’ ಎಂದು ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ವಿಶ್ವನಾಥ ಹೇಳಿದ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.