ಮಂಗಳವಾರ, ಡಿಸೆಂಬರ್ 10, 2019
24 °C

ನಾಗವಲ್ಲಿ ಮಾರ್ಗದಲ್ಲಿ...

Published:
Updated:
ನಾಗವಲ್ಲಿ ಮಾರ್ಗದಲ್ಲಿ...

ವಿಷ್ಣುವರ್ಧನ್‌, ರಮೇಶ್‌, ಸೌಂದರ್ಯ, ಪ್ರೇಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ‘ಆಪ್ತಮಿತ್ರ’ ಚಿತ್ರ ದೊಡ್ಡ ಯಶಸ್ಸು ಕಂಡಿತ್ತು. ನಂತರ ಅದರ ಮುಂದುವರಿದ ಭಾಗವಾದಂತಿದ್ದ ‘ಆಪ್ತರಕ್ಷಕ’ ಕೂಡ ಯಶಸ್ಸಿನ ಹಳಿಯ ಮೇಲೆಯೇ ಓಡಿತು. ‘ಆಪ್ತಮಿತ್ರ’ ಚಿತ್ರದ ನಂತರ ಸೌಂದರ್ಯ ವಿಮಾನ ಅಪಘಾತದಲ್ಲಿ ತೀರಿಕೊಂಡಿದ್ದು, ಆಪ್ತರಕ್ಷಕ ನಂತರ ವಿಷ್ಣುವರ್ಧನ್‌ ತೀರಿಕೊಂಡಿದ್ದು ಇವಕ್ಕೆಲ್ಲ ಸಂಬಂಧವಿದೆ ಎಂಬ ಗಾಳಿಸುದ್ದಿಯೂ ಗಾಂಧಿನಗರ ಗಲ್ಲಿಗಳಲ್ಲಿ ಓಡಾಡಿ ತಣ್ಣಗಾಗಿದೆ.

ಈಗ ಇದೇ ಎಳೆಯನ್ನೇ ಇಟ್ಟುಕೊಂಡ ಸಿನಿಮಾವೊಂದು ಇದೇ ತಿಂಗಳ 20ರಂದು ತೆರೆಗೆ ಬರಲು ಸಜ್ಜಾಗಿದೆ! ಚಿತ್ರದ ಹೆಸರೇ ಹೂರಣವನ್ನು ಹೇಳುವಂತಿದೆ. ಚಿತ್ರದ ಹೆಸರು ‘ನಾಗವಲ್ಲಿ v/s ಆಪ್ತಮಿತ್ರರು’. ಶಂಕರ್‌ ಅರುಣ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೊದಲು ಈ ಚಿತ್ರಕ್ಕೆ ‘ಆಪ್ತಮಿತ್ರರು– 2’ ಎಂದೇ ಹೆಸರಿಡಲು ಯೋಚಿಸಲಾಗಿತ್ತು. ಆದರೆ ಆ ಹೆಸರನ್ನು ಬೇರೆ ಯಾರೋ ಈಗಾಗಲೇ ನೋಂದಣಿ ಮಾಡಿಬಿಟ್ಟಿರುವುದರಿಂದ ‘ನಾಗವಲ್ಲಿ v/s ಆಪ್ತಮಿತ್ರರು’ ಎಂಬ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

‘ಪ್ರೇಕ್ಷಕರಿಗೆ ಈ ಚಿತ್ರದ ಕ್ಲೈಮಾಕ್ಸ್‌ ತುಂಬಾ ಕಾಡುತ್ತದೆ. ಇದುವರೆಗೆ ಯಾರೂ ಚಿತ್ರೀಕರಣ ನಡೆಸದೇ ಇರುವ ಕೇರಳದ ಅನಂತಪದ್ಮನಾಭ ಅರಮನೆಯಲ್ಲಿ ಅನುಮತಿ ಪಡೆದುಕೊಂಡು ಏಳು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ನಾಗವಲ್ಲಿಯ ಕುರಿತು ಚಿತ್ರವನ್ನು ಇದುವರೆಗೆ ಯಾರೂ ಮಾಡಿಲ್ಲ. ಅಂಥ ಸಾಹಸಕ್ಕೆ ಕೈಹಾಕಿದ್ದು ಒಳ್ಳೆಯ ಫಲವನ್ನೇ ನೀಡಿದೆ’ ಎಂದು ಹೇಳುತ್ತಾರೆ ನಿರ್ದೇಶಕರು.

ಅವರ ಪ್ರಕಾರ ನಾಗವಲ್ಲಿ ಎಂಬುದು ಕಾಲ್ಪನಿಕ ಪಾತ್ರವಲ್ಲ. ಇತಿಹಾಸದಲ್ಲಿ ನಿಜವಾಗಿಯೂ ಬದುಕಿದ್ದ ಪಾತ್ರ. ಕೇರಳದ ಇತಿಹಾಸ ತಜ್ಞರ ಸಂಶೋಧನೆಯ ನೆರವಿನಿಂದ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆಯಂತೆ.

‘ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳನ್ನೇ ಕೇಂದ್ರವಾಗಿಟ್ಟುಕೊಂಡು ಚಿತ್ರ ಬಿಡುಗಡೆ ಮಾಡಬೇಕು ಎಂಬ ಅಲಿಖಿತ ಪರಿಪಾಠವನ್ನು ನಾವು ಮುರಿಯುತ್ತೇವೆ. ಬೇರೆ ಯಾವುದಾದರೂ ಒಳ್ಳೆಯ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದೂ ನಿರ್ದೇಶಕರು ಹೇಳಿದರು.

‘ವಿಷ್ಣುವರ್ಧ ನ್ಅಭಿಮಾನಿಯಾಗಿ, ಅವರ ಸಾವಿಗೆ ಕಾರಣವಾದ ನಾಗವಲ್ಲಿಯನ್ನು ಹುಡುಕಿಕೊಂಡು ಹೋಗುವ ಪಾತ್ರ ನನ್ನದು’ ಎಂದು ಹೇಳಿಕೊಂಡರು ನಾಯಕ ವಿಕ್ರಂ ಕಾರ್ತಿಕ್. ಮನೋವೈದ್ಯೆಯಾಗಿ ವೈಷ್ಣವಿ ಚಂದ್ರನ್‌ ನಟಿಸಿದ್ದಾರೆ.

ಪ್ರತಿಕ್ರಿಯಿಸಿ (+)