ಬುಧವಾರ, ಆಗಸ್ಟ್ 5, 2020
21 °C

ತೆಲುಗಿಗೆ ಹಾರಿದ ಪ್ರಜ್ಜು

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ತೆಲುಗಿಗೆ ಹಾರಿದ ಪ್ರಜ್ಜು

ನಂದಿನಿ ಹಾಲಿನ ಉತ್ಪನ್ನದ ಜಾಹೀರಾತಿಗಾಗಿ, ಹದಿನೈದನೇ ವಯಸ್ಸಿಗೇ ಬಣ್ಣ ಹಚ್ಚಿ ನಗೆ ಚೆಲ್ಲಿದ್ದ ಕೊಡಗಿನ ಕುವರಿ ಪ್ರಜ್ಜು ಪೂವಯ್ಯ ಅವರದು ಮೂರು ದೋಣಿಯ ಪಯಣ. ಮಾಡೆಲಿಂಗ್‌ನಲ್ಲೂ ಛಾಪು ಮೂಡಿಸಿರುವ ಅವರು, ಜಾಹೀರಾತು ಚಿತ್ರೀಕರಣಕ್ಕಾಗಿ ಆಗಾಗ್ಗೆ ಮುಂಬೈಗೆ ಹಾರುತ್ತಿರುತ್ತಾರೆ. ಇನ್ನು ಕನ್ನಡ ಮತ್ತು ತಮಿಳಿನ ಚಿತ್ರಗಳಲ್ಲಿ ನಟಿಸಿರುವ ಅವರೀಗ, ತೆಲುಗಿನ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಟಾಲಿವುಡ್‌ನಲ್ಲಿ ಮೋಡಿ ಮಾಡಲು ಅಣಿಯಾಗಿದ್ದಾರೆ.

‘ಪ್ರೇಮ ಅಂತಾ ಈಸಿ ಕಾದು’ ಎಂಬ ಚಿತ್ರದ ಮೂಲಕ ಪ್ರಜ್ಜು ಅಧಿಕೃತ ನಾಯಕಿಯಾಗಿ ತೆಲುಗಿನಲ್ಲಿ ಪದಾರ್ಪಣೆ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ ಗರಡಿಯಲ್ಲಿ ಪಳಗಿರುವ ಈಶ್ವರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಎಂ.ಬಿ.ಎ ಹಿನ್ನೆಲೆಯ ಈಶ್ವರ್, ರಾಜಮೌಳಿ ಅವರ ಸ್ಕ್ರಿಪ್ಟ್‌ ತಂಡದ ಭರವಸೆಯ ಪಟು. ಇದೀಗ, ಸ್ವತಂತ್ರ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರಿಗೆ ನಾಯಕಿ ನಟಿಯಾಗಿ ಪ್ರಜ್ಜು ಪೂವಯ್ಯ ಹಾಗೂ ತೆಲುಗಿನ ನಟ ರಾಜೇಶ್ ನಾಯಕ ನಟನಾಗಿ ಸಾಥ್‌ ನೀಡುತ್ತಿದ್ದಾರೆ.

‘ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಚಿತ್ರ. ಆತ್ಮೀಯ ಸ್ನೇಹಿತರ ಮಧ್ಯೆ ಪ್ರೀತಿ ಕುಡಿಯೊಡೆದಾಗ, ಅದನ್ನು ಅಭಿವ್ಯಕ್ತಿಪಡಿಸುವಾಗ ಆಗುವ ತಳಮಳ, ಅಡ್ಡಿ, ಆತಂಕ ಹಾಗೂ ಹಿತಕರ ವೇದನೆಯನ್ನು ಹೊಂದಿರುವ ನವಿರಾದ ಕಾಲೇಜು ಪ್ರೇಮದ ಕಥಾಹಂದರ ಚಿತ್ರದ್ದು. ಚಿತ್ರಕ್ಕೆ ಸಂವೇದನಾತ್ಮಕ ಓಘ ನೀಡುವಂತಹ ಐದು ಹಾಡುಗಳಿವೆ. ಒಟ್ಟಿನಲ್ಲಿ ಈ ಚಿತ್ರ ಕಾಲೇಜು ಲವ್‌ ಸ್ಟೋರಿಯಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ’ ಎಂದು ಪ್ರಜ್ಜು ತಮ್ಮ ತೆಲುಗು ಪ್ರಾಜೆಕ್ಟ್‌ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಚಿತ್ರದ ಚಿತ್ರೀಕರಣ ಬ್ಯಾಂಕಾಕ್, ಶ್ರೀಲಂಕಾ ಹಾಗೂ ಗೋವಾದಲ್ಲಿ ನಡೆದಿತ್ತು. ಎಲ್ಲವೂ ಅಂದುಕೊಂಡಂತೆ ಆದರೆ ಎರಡ್ಮೂರು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆಯಂತೆ.

ಕಮರ್ಷಿಯಲ್‌ ಚಿತ್ರದ ಚೊಚ್ಚಲ ಅವಕಾಶ ಪ್ರಜ್ಜು ಅವರಿಗೆ ಒಲಿದು ಬಂದ ರೀತಿ ಆಸಕ್ತಿಕರವಾಗಿದೆ. ದಾಸರಿ ನಾರಾಯಣ್ ಅವರ ‘ಹೆಲ್ಪ್‌ಲೈನ್’ ಎಂಬ ತೆಲುಗು ಟೆಲಿಫಿಲ್ಮ್‌ನಲ್ಲಿ ಪ್ರಜ್ಜು ನಟಿಸಿದ್ದರು. ಪ್ರೀತಿಯ ಸುತ್ತ ಹೆಣೆದಿದ್ದ ‘ಹೆಲ್ಪ್‌ಲೈನ್‌’ ಸಾಮಾಜಿಕ ಸಂದೇಶ ನೀಡುವ ಚಿತ್ರವಾಗಿತ್ತು. ಈ ಚಿತ್ರದ ವಿಡಿಯೊ ತುಣುಕೊಂದನ್ನು ವೀಕ್ಷಿಸಿದ್ದ ನಿರ್ದೇಶಕ ಈಶ್ವರ್, ಪ್ರಜ್ಜು ನಟನೆಗೆ ಮನಸೋತು ತಮ್ಮ ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಅವಕಾಶ ನೀಡಿದರು.

‘ಯಾವುದೇ ಪಾತ್ರವನ್ನು ನಾವು ಆಯ್ಕೆ ಮಾಡುವುದಕ್ಕಿಂತ ಹೆಚ್ಚಾಗಿ ನಿರ್ದೇಶಕರೇ ಅಳೆದು ತೂಗಿ, ತಮ್ಮ ಚಿತ್ರಕ್ಕೆ ಯಾರು ಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಟೆಲಿಫಿಲ್ಮ್‌ನಲ್ಲಿ ನನ್ನ ಪಾತ್ರದ ಒಂದು ವಿಡಿಯೊ ತುಣುಕು ವೀಕ್ಷಿಸಿದ್ದ ಈಶ್ವರ್, ಅವರ ಚಿತ್ರಕ್ಕೆ ನಾನೇ ಬೇಕು ಎಂದು ನಿರ್ಧರಿಸಿ, ಕರೆ ಮಾಡಿ ಅಪ್ರೋಚ್ ಮಾಡಿದರು. ಬಳಿಕ, ಹೈದರಾಬಾದ್‌ಗೆ ಕರೆಯಿಸಿಕೊಂಡು ಕಥೆ ಹೇಳಿದರು. ನನ್ನ ಪಾತ್ರಕ್ಕಿದ್ದ ತೂಕ ಹಾಗೂ ಅದು ಮುಂದೆ ನನಗೆ ಯಾವ ರೀತಿಯ ಇಮೇಜ್ ಕೊಡಬಲ್ಲದು ಎಂಬುದನ್ನು ಯೋಚಿಸಿ ಒಪ್ಪಿಕೊಂಡೆ. ಒಟ್ಟಿನಲ್ಲಿ ಇದು ನನ್ನ ಹಿಂದಿನ ಚಿತ್ರಗಳಿಗಿಂತ ಅತ್ಯಂತ ಭಿನ್ನವಾದ ಪಾತ್ರವಾಗಿದೆ’ ಎಂದು ಪ್ರಜ್ಜು ತಮ್ಮ ಪಾತ್ರದ ಬಗ್ಗೆ ಬಣ್ಣಿಸುತ್ತಾರೆ.

ಕನ್ನಡದ ಆರೇಳು ಚಿತ್ರಗಳಲ್ಲಿ ಕಾಣಿಸಿಕೊಂಡು, ‘ಚಂದನವನ’ದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಪ್ರಜ್ಜು ಸದ್ಯ ಕನ್ನಡದ ‘ಅಭೀಷ್ಟಾರ್ಥಂ’ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಎರಡು–ಮೂರು ಸ್ಕ್ರಿಫ್ಟ್‌ಗಳು ಮಾತುಕತೆಯ ಹಂತದಲ್ಲಿವೆ. ಈಗಾಗಲೇ ತಮಿಳಿನ ‘ವೆಟಿಯಾಡು’ ಎಂಬ ಚಿತ್ರದಲ್ಲಿ ನಟಿಸಿರುವ ಅವರಿಗೆ, ತಮಿಳಿನಲ್ಲೂ ಅವಕಾಶಗಳು ಅರಸಿ ಬರುತ್ತಿವೆ.

‘ತಮಿಳು ಚಿತ್ರರಂಗದಿಂದ ಕರೆಗಳು ಬರುತ್ತಿರುತ್ತವೆ. ಬಹುತೇಕ ಕರೆಗಳು ಹೊಸ ನಿರ್ದೇಶಕರದ್ದೇ. ಆದರೆ, ಬೇರೊಂದು ಚಿತ್ರರಂಗಕ್ಕೆ ಹೋಗಬೇಕಾದರೆ, ನಮಗೆ ಭರವಸೆ ಮೂಡಿಸುವವರು ಚಿತ್ರತಂಡದಲ್ಲಿರಬೇಕು. ಹಿಂದಿನ ಚಿತ್ರದಲ್ಲಿ ನನಗೆ ಅಂತಹವರು ಸಿಕ್ಕಿದ್ದರು. ಹಾಗಾಗಿ, ಬೇರೆ ಭಾಷೆಯ ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೂ ಮೊದಲು ಸ್ವಲ್ಪ ಆಲೋಚಿಸಿಯೇ ನಿರ್ಧಾರ ಕೈಗೊಳ್ಳುತ್ತೇನೆ’ ಎನ್ನುತ್ತಾರೆ ಪ್ರಜ್ಜು.

ಸವಾಲಿನ ಪಾತ್ರಗಳು ಇಷ್ಟ

ಗ್ಲ್ಯಾಮರ್‌ ಬೆಡಗಿ ಪ್ರಜ್ಜುಗೆ ಸವಾಲಿನ ಪಾತ್ರಗಳೆಂದರೆ ಬಲು ಇಷ್ಟವಂತೆ. ಅದರಲ್ಲೂ ಮೈಥಲಾಜಿಕಲ್ ಹಾಗೂ ರಗಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಹಂಬಲ ಅವರಿಗಿದೆ.

‘ಕಲಾವಿದರಿಗೆ ಸಾಮಾನ್ಯ ಬಯಕೆಯಂತೆ, ನನಗೂ ಸವಾಲಿನ ಪಾತ್ರಗಳನ್ನು ಮಾಡಬೇಕೆಂಬ ಇರಾದೆ. ಜತೆಗೆ, ಪ್ರಯೋಗಾತ್ಮಕ ಪಾತ್ರಗಳು ಇಷ್ಟ. ಚಿತ್ರ ಸೋತರೂ, ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವ ಪಾತ್ರದಲ್ಲಿ ನಟಿಸಬೇಕು. ಜತೆಗೆ, ಸ್ತ್ರೀ ಪ್ರಧಾನ ಕೇಂದ್ರಿತ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮಹದಾಸೆ ಇದೆ’ ಎಂದು ತಮ್ಮ ಡ್ರೀಮ್ ರೋಲ್‌ಗಳ ಬಗ್ಗೆ ಪ್ರಜ್ಜು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.