ಶುಕ್ರವಾರ, ಡಿಸೆಂಬರ್ 13, 2019
19 °C

ಅಕ್ಷರ ತಪ್ಪಾಗಿ ಬೇಂದ್ರೆ ಕವನ ಉಲ್ಲೇಖಿಸಿ ಸಿದ್ದರಾಮಯ್ಯ ವಿರುದ್ಧ ಅಮಿತ್‌ ಶಾ ಟ್ವೀಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಷರ ತಪ್ಪಾಗಿ ಬೇಂದ್ರೆ ಕವನ ಉಲ್ಲೇಖಿಸಿ ಸಿದ್ದರಾಮಯ್ಯ ವಿರುದ್ಧ ಅಮಿತ್‌ ಶಾ ಟ್ವೀಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಬಲದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಾಡಿರುವ ಟ್ವೀಟ್‌ಗೆ ವ್ಯಂಗ್ಯಭರಿತ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ವರಕವಿ ದ.ರಾ. ಬೇಂದ್ರೆಯವರ ‘ಕುರುಡು ಕಾಂಚಾಣ’ ಕವನದ ಸಾಲನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಅವರ ವಿರುದ್ಧ ಶಾ ಟ್ವೀಟ್ ಮಾಡಿದ್ದಾರೆ.

ಅಮಿತ್‌ ಶಾ ಅವರು ಮಾಡಿರುವ ಟ್ವೀಟ್ ಹೀಗಿದೆ:

‘‘ಕುರುಡು ಕಾಂಚನ ಕುಣಿಯುತ್ತಲಿತ್ತು

ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು ||

ಹಣವೇ ಪ್ರಮುಖವಾಗಿರುವ ಸಿದ್ದರಾಮಯ್ಯರ ಭ್ರಷ್ಟ ಆಡಳಿತವನ್ನು ವರಕವಿ ದ.ರಾ. ಬೇಂದ್ರೆಯವರ ಕವನದ ಈ ಸಾಲಗಳು ಎಷ್ಟು ಸೂಕ್ತವಾಗಿ ವರ್ಣಿಸುತ್ತದೆ!

ಹಣಬಲದ ರಾಜಕಾರಣ ಮುಕ್ತಾಯಮಾಡಿ, ಕರ್ನಾಟಕವನ್ನು ಮತ್ತೆ ಮೌಲ್ಯಾಧಾರಿತ ರಾಜಕಾರಣದ ಆಧಾರದ ಮೇಲೆ ನಿರ್ಮಿಸಬೇಕಿದೆ.’’ ಎಂದು ಶಾ ಟ್ವೀಟ್ ಮಾಡಿದ್ದಾರೆ.

ನಿಜವಾಗಿ, ಬೇಂದ್ರೆಯವರ ಕವನದ ಸಾಲುಗಳು ‘‘ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೋ’’
ಎಂದಾಗಬೇಕು. ಅಲ್ಲದೆ, ‘ಬೇಂದ್ರೆಯವರ ಕವನದ ಈ ಸಾಲಗಳು ಎಷ್ಟು ಸೂಕ್ತವಾಗಿ ವರ್ಣಿಸುತ್ತದೆ!’ ಎಂಬ ವಾಕ್ಯದಲ್ಲಿ ಕೊನೆಯ ಶಬ್ದ ವ್ಯಾಕರಣ ಪ್ರಕಾರ ‘ವರ್ಣಿಸುತ್ತವೆ’ ಆಗಬೇಕು.

ಇದನ್ನು ಗುರುತಿಸಿ ಗುರು ಕುಲಕರ್ಣಿ ಎಂಬುವವರು #ಸರಿ–ಬರಿ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.

‘ಮೊದಲಿಗೆ ಹಿಂದಿಯಲ್ಲೇ ಸರಿ ಮಾತನಾಡಲು ಬರುವುದಿಲ್ಲ, ಇನ್ನು ಕನ್ನಡದಲ್ಲಿ ಟ್ವೀಟ್ ಮಾಡುವುದಾ? ಏನು ತಮಾಷಾ ಇದು, LOL ಹೋಗಲೇ’ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

‘ಕನ್ನಡದಲ್ಲಿ ಟ್ವೀಟ್ ಮಾಡಿದರೆ ವೋಟ್ ಸಿಗಲಾರದು ಅಂಕಲ್. ಅಚ್ಛೇದಿನ ಬರಲಿದೆ. ಮೋದಿಜಿ ಬರಲಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಪ್ರತಿಕ್ರಿಯಿಸಿ (+)