ಮಂಗಳವಾರ, ಆಗಸ್ಟ್ 11, 2020
26 °C
ಮಿಸ್ತ್ರಿಗೆ ಹಿರಿಯ ನಾಯಕರಿಂದ ಅಭ್ಯರ್ಥಿಗಳ ಪ್ರತ್ಯೇಕ ಪಟ್ಟಿ?

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕಗ್ಗಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕಗ್ಗಂಟು

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡರ ಪೈಕಿ ಕೆಲವರು ತಮ್ಮ ಆಪ್ತರನ್ನೇ ಕಣಕ್ಕೆ ಇಳಿಸುವಂತೆ ಪಟ್ಟು ಹಿಡಿದಿರುವುದರಿಂದ, ವಿಧಾನಸಭಾ ಚುನಾವಣೆ ಟಿಕೆಟ್‌ ಹಂಚಿಕೆ ತೀವ್ರ ಕಗ್ಗಂಟಾಗಿ ಪರಿಣಮಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ವೀರಪ್ಪ ಮೊಯಿಲಿ, ಕೆ.ಎಚ್‌. ಮುನಿಯಪ್ಪ ಸೇರಿ ಹಲವು ಹಿರಿಯ ನಾಯಕರು ಟಿಕೆಟ್‌ ಹಂಚಿಕೆ ವಿಷಯದಲ್ಲಿ ಹಟಕ್ಕೆ ಬಿದ್ದಿರುವುದು ಗೊಂದಲಕ್ಕೆ ಕಾರಣವಾಗಿದೆ.

ಖರ್ಗೆ, ಮುನಿಯಪ್ಪ, ರೆಹಮಾನ್‌ ಖಾನ್‌, ರೋಷನ್‌ ಬೇಗ್‌ ತಮ್ಮ ಸಮುದಾಯದವರಿಗೆ ಟಿಕೆಟ್‌ ನೀಡುವಂತೆ ಆಗ್ರಹಿಸಿ ಚುನಾವಣಾ ಪರಿಶೀಲನಾ ಸಮಿತಿ ಮುಖ್ಯಸ್ಥ ಮಧುಸೂದನ್‌ ಮಿಸ್ತ್ರಿ ಅವರಿಗೆ ಅಭ್ಯರ್ಥಿಗಳ ಪ್ರತ್ಯೇಕ ಪಟ್ಟಿ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಜನಾಶೀರ್ವಾದ ಯಾತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜೊತೆ ಒಗ್ಗಟ್ಟಿನಿಂದ ಹೆಜ್ಜೆ ಹಾಕಿದ ನಾಯಕರು, ಟಿಕೆಟ್‌ ಹಂಚಿಕೆ ವಿಷಯದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಪಿಸಿಸಿ ಚುನಾವಣಾ ಸಮಿತಿಯು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ಹಲವು ಕ್ಷೇತ್ರಗಳಿಗೆ 2–3 ಆಕಾಂಕ್ಷಿಗಳನ್ನು ಪಟ್ಟಿ ಮಾಡಿ ಮಿಸ್ತ್ರಿ ನೇತೃತ್ವದ ಸಮಿತಿಗೆ ಒಪ್ಪಿಸಿತ್ತು.

ದೆಹಲಿಯಲ್ಲಿ ಮೂರು ದಿನ ಸಭೆ ಸೇರಿದ್ದ ಮಿಸ್ತ್ರಿ ನೇತೃತ್ವದ ಸಮಿತಿ, ಈ ಪಟ್ಟಿ ಪರಿಶೀಲಿಸಿ ಅಭ್ಯರ್ಥಿಗಳ ಹೆಸರುಗಳನ್ನು ಬಹುತೇಕ ಅಂತಿಮಗೊಳಿಸಿದೆ. ಇದಕ್ಕೆ ಕೇಂದ್ರ ಚುನಾವಣಾ ಸಮಿತಿ ಅನುಮೋದನೆ ನೀಡುವುದು ಬಾಕಿ ಇದೆ.

ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಖರ್ಗೆ, ಈಗಾಗಲೇ ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿರುವ ಕೆಲವು ಮೂಲ ಕಾಂಗ್ರೆಸ್‌ ನಾಯಕರು ದೆಹಲಿಯಲ್ಲಿ ಖರ್ಗೆಯವರನ್ನು ಭೇಟಿ ಮಾಡಿದ್ದಾರೆ. ಪಕ್ಷದೊಳಗಿನ ಬೆಳವಣಿಗೆ ಹಾಗೂ ವಲಸಿಗರ ಮೇಲುಗೈ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ ಎಂದೂ ಹೇಳಲಾಗಿದೆ.

ಮಹದೇವಪ್ಪ ಅಸಮಾಧಾನ: ಒಂದು ಕುಟುಂಬದ ಇಬ್ಬರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೈಕಮಾಂಡ್‌ ಸೂಚನೆ ನೀಡಿದ್ದರಿಂದ ಅಸಮಾಧಾನಗೊಂಡಿರುವ ಮಹದೇವಪ್ಪ, ಸ್ವಕ್ಷೇತ್ರವನ್ನು ಪುತ್ರ ಸುನೀಲ್‌ ಬೋಸ್‌ಗೆ ಬಿಟ್ಟುಕೊಟ್ಟು ತಾವು ಸ್ಪರ್ಧೆಯಿಂದಲೇ ಹಿಂದೆ ಸರಿಯುವುದಾಗಿ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.

ರಾಜ್ಯಸಭೆಗೆ ಎರಡು ಬಾರಿ ನಡೆದ ಚುನಾವಣೆಗಳಲ್ಲೂ ಪಕ್ಷದ ಕೈ ಹಿಡಿದ ಹಗರಿಬೊಮ್ಮನಹಳ್ಳಿ ಜೆಡಿಎಸ್ ಶಾಸಕರಾಗಿದ್ದ ಭೀಮಾನಾಯ್ಕಗೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿದೆ. ಅದೇ ರೀತಿ ಅಶೋಕ್ ಖೇಣಿ ಅವರಿಗೆ ಮಣೆ ಹಾಕುತ್ತಿರುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ. ಕೆಲವು ಹಿರಿಯ ನಾಯಕರೂ ಇದಕ್ಕೆ ದನಿಗೂಡಿಸಿದ್ದಾರೆ.

ಕಾರ್ಕಳ ಕ್ಷೇತ್ರಕ್ಕೆ ಗುತ್ತಿಗೆದಾರ ಉದಯಕುಮಾರ ಶೆಟ್ಟಿ ಅವರ ಹೆಸರನ್ನು ಮುಖ್ಯಮಂತ್ರಿ ಮತ್ತು ಪರಮೇಶ್ವರ ಸೂಚಿಸಿದ್ದಾರೆ. ಆದರೆ, ವೀರಪ್ಪ ಮೊಯಿಲಿ ಅವರು ಮಾಜಿ ಶಾಸಕ ಗೋಪಾಲ ಪೂಜಾರಿ ಅವರಿಗೆ ಟಿಕೆಟ್‌ ನೀಡುವಂತೆ ಒತ್ತಡ ಹೇರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.