ಬುಧವಾರ, ಜುಲೈ 15, 2020
22 °C

ಬಿಸಿಲು ಬೆಳದಿಂಗಳ ನಡುವೆ ಅಭಿಮಾನದ ಹೊಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸಿಲು ಬೆಳದಿಂಗಳ ನಡುವೆ ಅಭಿಮಾನದ ಹೊಳೆ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರಾಜಕುಮಾರ್‍ ಅಭಿಮಾನಿಗಳ ಪಾಲಿಗೆ ಏಪ್ರಿಲ್‍ ಬಿರುಬಿಸಿಲಿನ ಗುರುವಾರ ಬೆಳದಿಂಗಳಾಗಿ ಪರಿಣಮಿಸಿದಂತಿತ್ತು. ಮೆಚ್ಚಿನ ನಟನ 12ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನೆನಪುಗಳ ಮರುಕಳಿಕೆಯಾಗಿ, ಹಬ್ಬವಾಗಿ, ಸೆಲ್ಫಿ ಸಂಭ್ರಮವಾಗಿ, ಜಯಘೋಷವಾಗಿ ಪರಿಣಮಿಸಿತ್ತು.

ಪ್ರತಿ ವರ್ಷ ಏ. 12ರ ಪುಣ್ಯಸ್ಮರಣೆ ಹಾಗೂ ಏ. 24ರ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಕಂಠೀರವ ಸ್ಟುಡಿಯೊ ಪರಿಸರದಲ್ಲಿನ ರಾಜ್‍ ಸಮಾಧಿ ಸ್ಥಳ ಅಭಿಮಾನಿಗಳ ಪಾಲಿಗೆ ಹಬ್ಬದ ತಾಣವಾಗಿ ಬದಲಾಗುತ್ತಿತ್ತು. ಅನ್ನದಾನ, ರಕ್ತದಾನ, ನೇತ್ರದಾನಗಳ ಮೂಲಕ ರಾಜ್‍ ಸ್ಮರಣೆಯ ಸಂದರ್ಭಕ್ಕೆ ಅರ್ಥಪೂರ್ಣ ಆಯಾಮ ದೊರಕುತ್ತಿತ್ತು. ಆದರೆ, ಈ ಬಾರಿ ವಿಧಾನಸಭೆ ಚುನಾವಣೆ ಕಾರಣದಿಂದಾಗಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಕಂಠೀರವ ಸ್ಟುಡಿಯೊದ ಅಧಿಕಾರಿಗಳು ನಿರ್ಧರಿಸಿದ್ದರು.

ಸರಳತೆಯ ಸೊಬಗು: ಕಾರ್ಯಕ್ರಮ ಸರಳವಾಗಿತ್ತು. ತಿಂಗಳ ಹಿಂದೆಯೇ ಸುಣ್ಣಬಣ್ಣದ ಅಲಂಕಾರ ಹೊಂದಿದ್ದ ಸಮಾಧಿಗೆ ಕಣ್ಮನ ಸೆಳೆಯುವ ಹೂವಿನ ಅಲಂಕಾರ ಮಾಡಲಾಗಿತ್ತು. ಊಟದ ಏರ್ಪಾಡು ಹಾಗೂ ಶಾಮಿಯಾನ ಇರಲಿಲ್ಲ. 'ರಾಜಕೀಯದಿಂದ ದೂರ ಉಳಿದಿದ್ದ ಅಣ್ಣಾವ್ರ ಪುಣ್ಯತಿಥಿಗೆ ಚುನಾವಣಾ ನೀತಿಸಂಹಿತೆ ಅನ್ವಯಿಸುವುದು ಸರಿಯಲ್ಲ' ಎನ್ನುವ ಕೆಲವರ ದೂರುಗಳ ನಡುವೆಯೂ, ಅಭಿಮಾನಿಗಳ ಪಾಲಿಗೆ ಯಾವುದೂ ಕೊರತೆಯೆನಿಸಲಿಲ್ಲ.

ಬೆಳಿಗ್ಗೆ 9ರ ವೇಳೆಗಾಗಲೇ ಸಮಾಧಿ ಸ್ಥಳದ ಬಳಿ ಜನರ ಗುಂಪು ಸೇರತೊಡಗಿತ್ತು. ಹತ್ತು ಗಂಟೆ ವೇಳೆಗೆ ರಾಜ್‍ ಸಹೋದರಿ ನಾಗಮ್ಮ, ಪುತ್ರರಾದ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹಾಗೂ ಪುನೀತ್‍ ರಾಜ್‍ಕುಮಾರ್ ಪೂಜೆ ಸಲ್ಲಿಸಿದರು. ನಿರ್ಮಾಪಕ ಗೋವಿಂದರಾಜ್‌, ಲಕ್ಷ್ಮೀ ಗೋವಿಂದ ರಾಜ್‌, ಪೂರ್ಣಿಮಾ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಪುಷ್ಪನಮನ ಸಲ್ಲಿಸಿದವರಲ್ಲಿ ಸೇರಿದ್ದರು.

ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಜನ ರಾಜ್‍ ಸ್ಮರಣೆಯಲ್ಲಿ ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಸ್ಮಾರಕದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ನೋವಿನ ಯುಗಳ: ಕಳೆದ ಹನ್ನೊಂದು ವರ್ಷಗಳಿಂದ ಪಾರ್ವತಮ್ಮ ರಾಜ್‍ಕುಮಾರ್‍ ಅವರ ಹಾಜರಿಯಲ್ಲಿ ರಾಜ್‍ ಸ್ಮರಣೆ ನಡೆಯುತ್ತಿತ್ತು. ಆದರೆ, ಈ ಬಾರಿ ಅಭಿಮಾನಿಗಳ ಪಾಲಿನ ಅಣ್ಣಾವ್ರು ಸ್ಮರಣೆಯ ಜೊತೆಗೆ ಅಕ್ಕಾವ್ರ ಅಗಲಿಕೆಯ ನೋವು ಸೇರಿಕೊಂಡಿತ್ತು.

ಕಳೆದ ವರ್ಷದ ಮೇ 31ರಂದು ಪಾರ್ವತಮ್ಮನವರು ನಿಧನರಾಗಿದ್ದರು. ಈ ಸಾವಿಗೆ ವರ್ಷ ತುಂಬದ ಕಾರಣ, ಸದಾಶಿವನಗರದ ಮನೆಯಲ್ಲಿ ಪ್ರತಿವರ್ಷ ನಡೆಯುತ್ತಿದ್ದ ರಾಜ್‍ ಪುಣ್ಯತಿಥಿಯ ಸಾಂಪ್ರದಾಯಿಕ ವಿಧಿಗಳು ಈ ಬಾರಿ ನಡೆಯಲಿಲ್ಲ.

ಚುನಾವಣೆ ಪ್ರಚಾರಕ್ಕಿಲ್ಲ...

ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ನಟ ಶಿವರಾಜ್‍ಕುಮಾರ್‍ ಹೇಳಿದರು. ತಂದೆಯ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಚಿತ್ರೀಕರಣದಲ್ಲಿ ಬಿಜಿಯಾಗಿರುವುದರಿಂದ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದಿಲ್ಲ. ಆದರೆ, ನನ್ನ ಪತ್ನಿ ಗೀತಾ ಅವರು ಪಕ್ಷದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಾರೆ' ಎಂದರು.

ಹೊಸದುರ್ಗದಿಂದ ರಾಜ್‍ ಕುಟುಂಬದ ಅಭಿಮಾನಿ ದಂಪತಿಯೊಬ್ಬರು ನೆರವು ಕೋರಿ ಬಂದಿದ್ದರು. ಕಾಯಿಲೆಯಿಂದ ಬಳಲುತ್ತಿದ್ದ ಅವರ ಮಗನಿಗೆ ಶಿವರಾಜ್‌ಕುಮಾರ್ ಧನಸಹಾಯ ಮಾಡಿದರು.

* ಅಪ್ಪಾಜಿ-ಅಮ್ಮನ ಸ್ಮಾರಕದ ಪರಿಸರದಲ್ಲಿ ಯೋಗಕೇಂದ್ರ ನಿರ್ಮಾಣ ಮಾಡುತ್ತೇವೆ. ವಿಶ್ವದಲ್ಲಿ ಈವರೆಗೆ ಎಲ್ಲಿಯೂ ಇಲ್ಲದಂತಹ ಯೋಗಕೇಂದ್ರ ಇದಾಗಲಿದೆ.

-ರಾಘವೇಂದ್ರ ರಾಜ್‍ಕುಮಾರ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.