ಶುಕ್ರವಾರ, ಡಿಸೆಂಬರ್ 6, 2019
23 °C

ಮುಖ್ಯ ಕಾರ್ಯದರ್ಶಿ ವಿಫಲ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯ ಕಾರ್ಯದರ್ಶಿ ವಿಫಲ: ಎಚ್‌ಡಿಕೆ

ಬಳ್ಳಾರಿ: ‘ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ರೈತರ ಸಂಕಷ್ಟ ಕೇಳುವವರಿಲ್ಲ. ಪರಿಸ್ಥಿತಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ವಿಫಲರಾಗಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

‘ಚುನಾವಣೆಯನ್ನು ಹೇಗಾದರೂ ನಡೆಸಲೇಬೇಕು. ಹಾಗೆಂದು ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಕಾರ್ಯದರ್ಶಿ ಸಮಸ್ಯೆಗಳ ಕುರಿತು ಮಾಹಿತಿ ತರಿಸಿಕೊಳ್ಳಬೇಕು. ಸಾಧ್ಯವಾದರೆ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ನಿವೃತ್ತಿ ನಂತರವೂ ತಮ್ಮ ಸೇವೆಯನ್ನು ವಿಸ್ತರಿಸಿದ ರಾಜ್ಯ ಸರ್ಕಾರಕ್ಕೆ ಮುಖ್ಯ ಕಾರ್ಯದರ್ಶಿಯು ಋಣ ತೀರಿಸುವ ಪ್ರಯತ್ನದಲ್ಲಿ ಇದ್ದಾರೆ. ಆದರೆ, ಮುಖ್ಯಮಂತ್ರಿ ಹೇಳಿದಂತೆ ಹೆಬ್ಬೆಟ್ಟು ಒತ್ತಿಕೊಂಡು ಕುಳಿತುಕೊಳ್ಳುವುದಕ್ಕೆ ಸೇವೆಯಲ್ಲಿ ಮುಂದುವರಿದಿಲ್ಲ ಎಂಬುದನ್ನು ಅವರು ಅರಿಯಲಿ’ ಎಂದು ಹೇಳಿದರು.

ಪಕ್ಷಾಂತರ ಮಾಮೂಲಿ: ‘ಚುನಾವಣೆ ಸಂದರ್ಭದಲ್ಲಿ ಆಕಾಂಕ್ಷಿಗಳು ಪಕ್ಷಾಂತರ ಮಾಡುವುದು ಮಾಮೂಲಿಯಾಗಿದೆ. ಯಾರಿಂದಲೂ ನಾವು ಪಕ್ಷನಿಷ್ಠೆಯನ್ನು ನಿರೀಕ್ಷಿಸುವಂತಿಲ್ಲ. ಕೆಲವು ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್‌ನ ಎರಡನೇ ಹಂತದ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ನಮ್ಮ ಪಕ್ಷದವರಿಗೂ ಇತರೆ ಪಕ್ಷಗಳು ಆಹ್ವಾನ ನೀಡಿರುವುದೂ ತಿಳಿದಿದೆ’ ಎಂದರು.

‘ಟಿಕೆಟ್‌ ನೀಡಲಿಲ್ಲ ಎಂದು ನನ್ನ ಸಹೋದರನ ಮಗನಿಗೂ ಅಸಮಾಧಾನವಿದೆ. ಟಿಕೆಟ್‌ ದೊರಕದೇ ಇರುವವರು ಉತ್ಸಾಹ ಕಳೆದುಕೊಳ್ಳಬಾರದು. ಒಂದು ವಾರದೊಳಗೆ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು’ ಎಂದರು.

ಪತ್ರ: ‘ನೀತಿ ಸಂಹಿತೆ ನೆಪದಲ್ಲಿ ಜನರಿಗೆ ವಿನಾಕಾರಣ ತೊಂದರೆ ಕೊಡಬಾರದು ಎಂದು ಚುನಾವಣಾ ಆಯೋಗಕ್ಕೆ ಪಕ್ಷದ ವಕೀಲರ ಮೂಲಕ ಪತ್ರ ರವಾನಿಸಲಾಗುವುದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಪೊಲೀಸ್‌ ವಾಹನದಲ್ಲಿ ಅಡುಗೆ ಸಾಮಗ್ರಿ ಸಾಗಿಸಿದ್ದ ಬಗ್ಗೆ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ’ ಎಂದರು.

ಪ್ರಚಾರ: ‘ಪ್ರಜಾಪ್ರಭುತ್ವ ಉಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿಯ ಎಲ್ಲ ಸಂಸದರು ಪ್ರತಿಭಟನೆ ಮಾಡಿರುವುದು ಪ್ರಚಾರಕ್ಕಷ್ಟೇ’ ಎಂದು ಲೇವಡಿ ಮಾಡಿದರು.

ಪ್ರತಿಕ್ರಿಯಿಸಿ (+)