ಭಾನುವಾರ, ಡಿಸೆಂಬರ್ 8, 2019
25 °C

‘ಸುಪ್ರೀಂ’ ಕಾರ್ಯನಿರ್ವಹಣೆ: ಚೆಲಮೇಶ್ವರ್‌ ಕಳವಳ

ಪಿಟಿಐ Updated:

ಅಕ್ಷರ ಗಾತ್ರ : | |

‘ಸುಪ್ರೀಂ’ ಕಾರ್ಯನಿರ್ವಹಣೆ: ಚೆಲಮೇಶ್ವರ್‌ ಕಳವಳ

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವ್ಯವಹಾರಗಳ ಬಗ್ಗೆ ಅತ್ಯಂತ ಹಿರಿಯ ನ್ಯಾಯಮೂರ್ತಿ ಜೆ. ಚೆಲಮೇಶ್ವರ್‌ ಅವರು ಮತ್ತೆ ಕಳವಳ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ವಿಚಾರಣೆಯನ್ನು ನ್ಯಾಯಪೀಠಗಳಿಗೆ ಹಂಚಿಕೆ ಮಾಡುವುದಕ್ಕೆ ಮಾರ್ಗದರ್ಶಿಸೂತ್ರಗಳು ಬೇಕು ಎಂದು ಕೋರಿ ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿಭೂಷಣ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಚೆಲಮೇಶ್ವರ್‌ ನಿರಾಕರಿಸಿದ್ದಾರೆ. 

ಅರ್ಜಿಯ ತುರ್ತು ವಿಚಾರಣೆಗೆ ಚೆಲಮೇಶ್ವರ್‌ ಅವರು ನಿರಾಕರಿಸಿದ್ದರಿಂದಾಗಿ ವಕೀಲ ಪ್ರಶಾಂತ್‌ ಭೂಷಣ್‌ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ಬಳಿಗೆ ಧಾವಿಸಿದರು. ತಮ್ಮ ತಂದೆಯ (ಶಾಂತಿಭೂಷಣ್‌) ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಕೋರಿದರು. ‘ಅದನ್ನು ಪರಿಶೀಲಿಸಲಾಗುವುದು’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

‘ಪ್ರಶಾಂತ್‌ ಭೂಷಣ್‌ ಅವರು ಚೆಲಮೇಶ್ವರ್‌ ಅವರ ಮುಂದೆ ಅರ್ಜಿ ಸಲ್ಲಿಸಿದ್ದರು. ಇದೊಂದು ತುರ್ತು ಸ್ಥಿತಿ ಎಂದು ಹೇಳಿದ್ದರು. ವಿಚಾರಣೆಗಾಗಿ ಪ್ರಕರಣಗಳನ್ನು ನ್ಯಾಯಪೀಠಗಳಿಗೆ ಹಂಚುವ ಮುಖ್ಯ ನ್ಯಾಯಮೂರ್ತಿಯ ಅಧಿಕಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಲಾಗಿದೆ. ಹಾಗಾಗಿ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಚಾರಣೆಗೆ ಎತ್ತಿಕೊಳ್ಳಬಾರದು’ ಎಂದು ಪ್ರಶಾಂತ್‌ ಭೂಷಣ್‌ ಹೇಳಿದ್ದರು.

‘ಈ ವಿಚಾರವನ್ನು ಕೈಗೆತ್ತಿಕೊಳ್ಳಲು ಬಯಸುವುದಿಲ್ಲ. ಅದಕ್ಕೆ ಕಾರಣ ಏನು ಎಂಬುದು ಬಹಳ ಸ್ಪಷ್ಟವಾಗಿಯೇ ಎಲ್ಲರಿಗೂ ತಿಳಿದಿದೆ’ ಎಂದು ಚೆಲಮೇಶ್ವರ್‌ ಹೇಳಿದರು. 

‘ನನ್ನ ಇನ್ನೊಂದು ಆದೇಶ 24 ತಾಸುಗಳಲ್ಲಿ ರದ್ದಾಗುವುದನ್ನು ಬಯಸುವುದಿಲ್ಲ. ಹಾಗಾಗಿಯೇ ಈ ಅರ್ಜಿಯನ್ನು ವಿಚಾರಣೆ ಮಾಡುವುದಿಲ್ಲ’ ಎಂದರು. ಚೆಲಮೇಶ್ವರ್‌ ನೇತೃತ್ವದ ಪೀಠವು ನೀಡಿದ್ದ ತೀರ್ಪನ್ನು ಕಳೆದ ನವೆಂಬರ್‌ 10ರಂದು ಮುಖ್ಯ ನ್ಯಾಯಮೂರ್ತಿ ಅವರ ಪೀಠವು ರದ್ದು ಮಾಡಿತ್ತು.

‘ವಾಗ್ದಂಡನೆ ‍ಪ್ರಸ್ತಾವ ಕೈಬಿಟ್ಟಿಲ್ಲ’: ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆ ಪಾತಾಳ ತಲುಪಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್‌  ಮಿಶ್ರಾ ವಿರುದ್ಧ ವಾಗ್ದಂಡನೆಯ ಅವಕಾಶ ಈಗಲೂ ಮುಕ್ತವಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಕುರಿಯನ್‌ ಜೋಸೆಫ್‌ ಪತ್ರ

ಸುಪ್ರೀಂ ಕೋರ್ಟ್‌ ಕೊಲಿಜಿಯಂನ ಶಿಫಾರಸುಗಳನ್ನು ಅನುಷ್ಠಾನ ಮಾಡಲು ಕೇಂದ್ರ ಸರ್ಕಾರ ವಿಳಂಬ ಮಾಡುವ ಮೂಲಕ ಅಧಿಕಾರದ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ಅವರು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.

ಹಿರಿಯ ವಕೀಲೆ ಇಂದೂ ಮಲ್ಹೋತ್ರಾ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆ ನೀಡುವಂತೆ ಮತ್ತು ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಅವರನ್ನು ಉತ್ತರಾಖಂಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸುವಂತೆ ಕೊಲಿಜಿಯಂ ಫೆಬ್ರುವರಿಯಲ್ಲಿ ಶಿಫಾರಸು ಮಾಡಿದೆ. ಈ ಶಿಫಾರಸು ಜಾರಿಗೆ ಬಂದಿಲ್ಲ.

‘ಸಿಜೆಐ ವಿರುದ್ಧ ವಾಗ್ದಂಡನೆ ‍ಪ್ರಸ್ತಾವ ಕೈಬಿಟ್ಟಿಲ್ಲ’

ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆ ಪಾತಾಳ ತಲುಪಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್‌  ಮಿಶ್ರಾ ವಿರುದ್ಧ ವಾಗ್ದಂಡನೆಯ ಅವಕಾಶ ಈಗಲೂ ಮುಕ್ತವಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಇತ್ತೀಚೆಗೆ ಸಮಾರೋಪಗೊಂಡ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಸಿಜೆಐ ವಿರುದ್ಧ ವಾಗ್ದಂಡನೆ ಅರ್ಜಿ ಸಲ್ಲಿಕೆಯ ನೇತೃತ್ವವನ್ನು ಕಾಂಗ್ರೆಸ್‌ ಪಕ್ಷ ವಹಿಸಿಕೊಂಡಿತ್ತು. ಆದರೆ ಪಕ್ಷದ ಈ ಕ್ರಮವನ್ನು ಕೆಲವು ಮುಖಂಡರು ವಿರೋಧಿಸಿದ್ದರಿಂದ ಅದು ನನೆಗುದಿಗೆ ಬಿದ್ದಿತ್ತು.

ನ್ಯಾಯಮೂರ್ತಿಗಳ ನೇಮಕದ ವಿಚಾರದಲ್ಲಿ ಯಾವುದೇ ಪಕ್ಷದ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ಹಸ್ತಕ್ಷೇಪದ ಪ್ರಯತ್ನ ನಡೆದರೆ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ಹಿರಿಯ ನ್ಯಾಯಮೂರ್ತಿಗಳು ಅದಕ್ಕೆ ಪ್ರತಿರೋಧ ಒಡ್ಡಬೇಕು ಕಾಂಗ್ರೆಸ್‌ ಮುಖಂಡ ಕಪಿಲ್ ಸಿಬಲ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)