ಶನಿವಾರ, ಡಿಸೆಂಬರ್ 14, 2019
20 °C
ಕಠುವಾ ಅತ್ಯಾಚಾರ ಪ್ರಕರಣ: ಪೈಶಾಚಿಕ ಕೃತ್ಯ ಬಿಚ್ಚಿಟ್ಟ ಆರೋಪಪಟ್ಟಿ

ಅಲೆಮಾರಿಗಳ ಓಡಿಸಲು ಬಾಲಕಿ ಮೇಲೆ ಅತ್ಯಾಚಾರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಅಲೆಮಾರಿಗಳ ಓಡಿಸಲು ಬಾಲಕಿ ಮೇಲೆ ಅತ್ಯಾಚಾರ

ಕಠುವಾ/ನವದೆಹಲಿ (ನ್ಯೂಯಾರ್ಕ್ ಟೈಮ್ಸ್‌): ‘ಜಮ್ಮುವಿನ ಕಠುವಾ ಜಿಲ್ಲೆಯ ರಸ್ಸಾನಾದಲ್ಲಿ ನೆಲೆಸಿದ್ದ ಬಕ್ರೆವಾಲಾ ಅಲೆಮಾರಿ ಜನರನ್ನು ಅಲ್ಲಿಂದ ಓಡಿಸುವ ಉದ್ದೇಶದಿಂದ, ಆ ಸಮುದಾಯಕ್ಕೆ ಸೇರಿದ 8 ವರ್ಷದ ಬಾಲಕಿ ಮೇಲೆ ಸ್ಥಳೀಯ ಗುಂಪು ಅತ್ಯಾಚಾರ ನಡೆಸಿ, ಆಕೆಯನ್ನು ಕೊಂದಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಗಳು ಬಾಲಕಿಗೆ ನೀಡಿದ್ದ ಹಿಂಸೆಯ ವಿವರಗಳನ್ನೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಮುಸ್ಲಿಮರಾದ ಬಕ್ರೆವಾಲಾಗಳನ್ನು ಹೆದರಿಸುವುದು ಪ್ರಮುಖ ಆರೋಪಿ ಸಾಂಜಿ ರಾಮ್‌ನ ಉದ್ದೇಶವಾಗಿತ್ತು. ಹೀಗಾಗಿ ಆ ಸಮುದಾಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲು ಸಾಂಜಿ ಸಂಚು ರೂಪಿಸಿದ್ದ. ಇದಕ್ಕಾಗಿ ಆತ ತನ್ನ ಮೂವರು ಸ್ನೇಹಿತರು, ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ತನ್ನ ಸೋದರಳಿಯನ ನೆರವು ಕೋರಿದ್ದ. ರಸ್ಸಾನಾ ಬಳಿಯ ಹುಲ್ಲುಗಾವಲಿನಲ್ಲಿ ತನ್ನ ಕುದುರೆಯನ್ನು ಮೇಯಿಸುತ್ತಿದ್ದ ಬಾಲಕಿಯನ್ನು, ಆತನ ಸೋದರಳಿಯ ಜನವರಿ 10ರಂದು ಸಮೀಪದ ಕಾಡಿಗೆ ಕರೆತಂದಿದ್ದ. ಅಲ್ಲಿ ಆಕೆಗೆ ಬಲವಂತದಿಂದ ನಿದ್ದೆಯ ಮಾತ್ರೆ ನುಂಗಿಸಿದ್ದ. ನಂತರ ಆಕೆಯನ್ನು ಊರಿನ ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿ ಕೂಡಿ ಹಾಕಲಾಗಿತ್ತು ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.

ಅಲ್ಲಿ ಆಕೆಯ ಮೇಲೆ ಏಳೂ ಆರೋಪಿಗಳು ನಾಲ್ಕು ದಿನ ಸತತ ಅತ್ಯಾಚಾರ ನಡೆಸಿದ್ದರು. ‘ಬಾಲಕಿ ಮೇಲೆ ಅತ್ಯಾಚಾರ ನಡೆಸುವುದಿದ್ದರೆ ಬಾ’ ಎಂದು ಸಾಂಜಿ ಸೋದರಳಿಯ, ಸಾಂಜಿಯ ಮಗನನ್ನು ಮೀರಠ್‌ನಿಂದ ಕರೆಸಿಕೊಂಡಿದ್ದ. ನಿತ್ರಾಣವಾಗಿದ್ದ ಆಕೆಯನ್ನು ಕೊಲ್ಲಲು ಸಾಂಜಿಯ ಸೋದರಳಿಯ ಮುಂದಾದಾಗ, ಮತ್ತೊಬ್ಬ ಅರೋಪಿ ಪೊಲೀಸ್ ಕಾನ್‌ಸ್ಟೆಬಲ್ ‘ನಾನು ಕೊನೆಯ ಬಾರಿ ಅತ್ಯಾಚಾರ ನಡೆಸುತ್ತೇನೆ’ ಎಂದು ಕೃತ್ಯವೆಸಗಿದ್ದ. ಅನಂತರ ಕತ್ತು ಹಿಸುಕಿ ಆಕೆಯನ್ನು ಕೊಲ್ಲಲಾಗಿತ್ತು ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.

‘ಆರೋಪಿಗಳ ಬೆಂಬಲಕ್ಕೆ ಬಿಜೆಪಿ’

‘ಆರೋಪಿ ಸಾಂಜಿಯ ಪರವಾಗಿ ಜಮ್ಮು ಮತ್ತು ಕಾಶ್ಮೀರದ ಬಿಜೆಪಿಯ ಕೆಲವು ನಾಯಕರು ಪ್ರತಿಭಟನೆ ನಡೆಸಿದ್ದಾರೆ. ತನಿಖಾ ತಂಡದಲ್ಲಿ ಮುಸ್ಲಿಮರಿದ್ದಾರೆ. ಅವರು ಮುಗ್ಧ ಹಿಂದೂಗಳ ಮೇಲೆ ಆರೋಪ ಹೊರೆಸಿ, ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ತಕ್ಷಣವೇ ಸಿಬಿಐಗೆ ವಹಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ’ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

* ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನಾವೆಲ್ಲರೂ ಮನುಷ್ಯರಾಗಿ ವಿಫಲರಾಗಿದ್ದೇವೆ. ಆದರೆ ಆಕೆಗೆ ನ್ಯಾಯ ಒದಗಿಸೋಣ

–ವಿ.ಕೆ.ಸಿಂಗ್, ವಿದೇಶಾಂಗ ವ್ಯಹಾರಗಳ ರಾಜ್ಯ ಸಚಿವ

ಪ್ರತಿಕ್ರಿಯಿಸಿ (+)