ಶುಕ್ರವಾರ, ಡಿಸೆಂಬರ್ 6, 2019
25 °C

ಉನ್ನಾವ್: ಬೆಳಿಗ್ಗೆ ಎಫ್‌ಐಆರ್, ಸಂಜೆ ನಿರ್ದೋಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉನ್ನಾವ್: ಬೆಳಿಗ್ಗೆ ಎಫ್‌ಐಆರ್, ಸಂಜೆ ನಿರ್ದೋಷಿ

ಲಖನೌ: ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಗುರುವಾರ ಬೆಳಿಗ್ಗೆ ಎಫ್‌ಐಆರ್ ದಾಖಲಿಸಿದ್ದ ಉತ್ತರ ಪ್ರದೇಶ ಪೊಲೀಸರು, ಸಂಜೆ ವೇಳೆಗೆ ಶಾಸಕ ನಿರ್ದೋಷಿ ಎಂದು ಘೋಷಿಸಿದ್ದಾರೆ.

ಉತ್ತರ ಪ್ರದೇಶ ಪೊಲೀಸರ ಈ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಮತ್ತು ಆರೋಪಿ ಶಾಸಕನನ್ನು ತಕ್ಷಣವೇ ಬಂಧಿಸಬೇಕು ಎಂದು ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಸದಸ್ಯರು ಒತ್ತಾಯಿಸುತ್ತಿದ್ದರು. ಹೀಗಾಗಿ ತನಿಖೆಯನ್ನು ಸಿಬಿಐಗೆ ವಹಿಸಲಾಗುವುದು ಎಂದು ಸರ್ಕಾರ ಗುರುವಾರ ಬೆಳಿಗ್ಗೆ ಘೋಷಿಸಿತು. ಈ ಘೋಷಣೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಸೆಂಗರ್ ವಿರುದ್ಧ ಎಸ್‌ಐಟಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದರು.

ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ ಸೆಂಗರ್‌ರನ್ನು ಬಂಧಿಸಿರಲಿಲ್ಲ. ಆದರೆ ಪ್ರಕರಣ ಸಿಬಿಐಗೆ ಹಸ್ತಾಂತರವಾಗಿರಲಿಲ್ಲ.

‘ಮಾನ್ಯ ಶಾಸಕರ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳಿಲ್ಲ. ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದಾಗಲೂ ಸಂತ್ರಸ್ತೆ ಶಾಸಕರ ಹೆಸರನ್ನು ಪ್ರಸ್ತಾಪಿಸಿಲ್ಲ. ಪ್ರಕರಣದ ತನಿಖೆ ನಡೆಸಿರುವ ಎಸ್‌ಐಟಿ ಬುಧವಾರ ರಾತ್ರಿಯೇ ವರದಿ ನೀಡಿದೆ. ಶಾಸಕರ ಹೆಸರೇ ಅದರಲ್ಲಿಲ್ಲ’ ಎಂದು ಉತ್ತರ ಪ್ರದೇಶ ಗೃಹ ಇಲಾಖೆಯ ಕಾರ್ಯದರ್ಶಿ ಅರವಿಂದ್ ಕುಮಾರ್ ಹೇಳಿಕೆ ನೀಡಿದ್ದಾರೆ.

‘ಆರೋಪಿಯಿಂದ ನನಗೆ ಮತ್ತು ನನ್ನ ಕುಟುಂಬದವರ ಜೀವಕ್ಕೆ ಅಪಾಯವಿದೆ’ ಎಂದು ಸಂತ್ರಸ್ತೆ ಹೇಳಿದ್ದಾರೆ. ಅವರ ಕುಟುಂಬಕ್ಕೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಬಿಜೆಪಿಯಲ್ಲೇ ಆಕ್ರೋಶ: ‘ಕುಲದೀಪ್ ಸಿಂಗ್ ಸೆಂಗರ್‌ನನ್ನು ಬಂಧಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿರ್ಧರಿಸಿದ್ದರು. ಹೀಗಾಗಿಯೇ ಸೆಂಗರ್‌ನನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದರು. ಆದರೆ ಅಷ್ಟರಲ್ಲೇ ಪಕ್ಷದ ಹಿರಿಯ ನಾಯಕರೊಬ್ಬರು ನಡೆಸಿದ ರಾಜಿಯ ಕಾರಣ ಬಂಧನದ ನಿರ್ಧಾರ ಬದಲಾಯಿತು’ ಎಂದು ಬಿಜೆಪಿಯ ಹಿರಿಯ ನಾಯಕ ಐ.ಪಿ.ಸಿಂಗ್ ಟ್ವೀಟ್ ಮಾಡಿದ್ದಾರೆ.

ಹೈಕೋರ್ಟ್ ಛೀಮಾರಿ

ಅಲಹಾಬಾದ್ (ಪಿಟಿಐ): ‘ಅತ್ಯಾಚಾರ ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ನನ್ನು ಬಂಧಿಸಲು ಕ್ರಮ ತೆಗೆದುಕೊಳ್ಳುತ್ತೀರೋ ಇಲ್ಲವೋ’ ಎಂದು ಅಲಹಾಬಾದ್ ಹೈಕೋರ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ವಹಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೀಠ ನಡೆಸಿತು. ‘ಎಫ್‌ಐಆರ್ ದಾಖಲಾಗಿದ್ದರೂ, ಆರೋಪಿಯನ್ನು ಬಂಧಿಸದಿದ್ದರೆ ನಿಮ್ಮ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ನಾವು ಭಾವಿಸಬೇಕಾಗುತ್ತದೆ’ ಎಂದು ಪೀಠ ಸರ್ಕಾರಕ್ಕೆ ಎಚ್ಚರಿಸಿತು.

ಪ್ರಕರಣವನ್ನು ಉನ್ನತ ತನಿಖೆಗೆ ವಹಿಸುವ ಬಗ್ಗೆ ಪೀಠವು ತನ್ನ ತೀರ್ಪನ್ನು ಶುಕ್ರವಾರ ನೀಡಲಿದೆ.

ಪ್ರತಿಕ್ರಿಯಿಸಿ (+)