ಮಂಗಳವಾರ, ಆಗಸ್ಟ್ 4, 2020
26 °C

‘ಸುಪ್ರೀಂ’ ತೀರ್ಪಿನಿಂದ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸುಪ್ರೀಂ’ ತೀರ್ಪಿನಿಂದ ಹಾನಿ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ‘ದುರ್ಬಲ’ಗೊಳಿಸಿ ನೀಡಿದ ತೀರ್ಪನ್ನು ಹಿಂದಕ್ಕೆ ಪಡೆಯಬೇಕು ಎಂದು ಸುಪ್ರೀಂ ಕೋರ್ಟನ್ನು ಕೇಂದ್ರ ಸರ್ಕಾರ ಕೋರಿದೆ. ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಿಂದಾಗಿ ದೇಶಕ್ಕೆ ‘ಅಪಾರ ಹಾನಿ’ ಉಂಟಾಗಿದೆ ಎಂದು ಕೇಂದ್ರ ಹೇಳಿದೆ.

‘ಅತ್ಯಂತ ಸೂಕ್ಷ್ಮ ಸ್ವರೂಪದ ವಿಚಾರವೊಂದರ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಆ ತೀರ್ಪು ಬಹಳಷ್ಟು ಗಲಭೆ, ಸಿಟ್ಟು ಮತ್ತು ಅತೃಪ್ತಿಗೆ ಕಾರಣವಾಗಿದೆ. ಸೌಹಾರ್ದ ಕದಡಿದೆ’ ಎಂದು ಕೇಂದ್ರ ತಿಳಿಸಿದೆ.

ಮಾರ್ಚ್‌ 20ರಂದು ನೀಡಲಾಗಿದ್ದ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಇದೇ 3ರಂದು ಕೇಂದ್ರವು ಮನವಿ ಮಾಡಿತ್ತು. ಆ ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ತೀರ್ಪನ್ನು ಅಮಾನತಿನಲ್ಲಿ ಇರಿಸಲು ನಿರಾಕರಿಸಿತ್ತು. ಈ ಕಾಯ್ದೆಯಿಂದಾಗಿ ತೊಂದರೆಗೆ ಒಳಗಾಗುವ ನಿರಪರಾಧಿಗಳನ್ನು ರಕ್ಷಿಸುವ ಉದ್ದೇಶದಿಂದ ಈ ತೀರ್ಪು ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಸರ್ಕಾರಿ ಅಧಿಕಾರಿಗಳು ಮತ್ತು ಸಾಮಾನ್ಯ ಜನರ ಮೇಲೆ ಎಸ್‌ಸಿ, ಎಸ್‌ಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಾದಾಗ ಅವರನ್ನು ಬಂಧಿಸುವ ಮೊದಲು ಸೂಕ್ತ ಪ್ರಾಧಿಕಾರದಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಮಾರ್ಚ್‌ 20ರಂದು ತೀರ್ಪು ನೀಡಿತ್ತು. ಈ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿರುವ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ದೂರು ದಾಖಲಾದ ಕೂಡಲೇ ಬಂಧನಕ್ಕೆ ಇರುವ ಅವಕಾಶವೇ ಕಾಯ್ದೆಯ ಶಕ್ತಿ ಎಂದು ಹೇಳಿದ್ದಾರೆ.

ಕಾಯ್ದೆಯಲ್ಲಿ ಇರುವ ಲೋಪಗಳನ್ನು ಸರಿಪಡಿಸುವ ಕೆಲಸವನ್ನು ಮಾಡುವ ಬದಲಿಗೆ ನ್ಯಾಯಾಲಯವು ಕಾಯ್ದೆಯನ್ನೇ ತಿದ್ದುಪಡಿ ಮಾಡಿದೆ. ಈ ಮೂಲಕ ಕಾಯ್ದೆಯ ಉಪಯುಕ್ತತೆಯನ್ನೇ ವಿಫಲಗೊಳಿಸಿದೆ ಎಂದು ಅವರು ವಾದಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿರ್ದೇಶನಗಳ ಉಲ್ಲಂಘನೆಗೆ ಶಿಸ್ತು ಕ್ರಮದ ಜತೆಗೆ ನ್ಯಾಯಾಂಗ ನಿಂದನೆಯನ್ನೂ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಘೋಷಿಸಿದೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಗೊಂದಲಮಯವಾಗಿದೆ ಎಂದು ವೇಣುಗೋಪಾಲ್ ವಾದಿಸಿದ್ದಾರೆ.

ಈ ಕಾಯ್ದೆಯ ಸೆಕ್ಷನ್‌ 18ರ ಸಿಂಧುತ್ವವನ್ನು 1995ರಲ್ಲಿನ ರಾಮ ಕೃಷ್ಣ ಬಲೋಟಿಯಾ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ ಎತ್ತಿ ಹಿಡಿದಿದೆ. ದೌರ್ಜನ್ಯ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅವಕಾಶ ಇಲ್ಲ ಎಂದು ಆಗಲೇ ಸ್ಪಷ್ಟಪಡಿಸಲಾಗಿದೆ ಎಂಬುದನ್ನು ಅವರು ನ್ಯಾಯಪೀಠದ ಗಮನಕ್ಕೆ ತಂದರು.

ಸರ್ಕಾರಕ್ಕೆ ಆಗಸ್ಟ್‌ 15ರ ಗಡುವು

ಪರಿಶಿಷ್ಟ ಜಾತಿ, ಪಂಗಡಗಳ ವಿರುದ್ಧದ ದೌರ್ಜನ್ಯ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ದಲಿತ ಸಂಘಟನೆಗಳು ಸರ್ಕಾರಕ್ಕೆ ಆಗಸ್ಟ್‌ 15ರವರೆಗೆ ಗಡುವು ನೀಡಿವೆ. ಈ ಪರಿಚ್ಛೇದಕ್ಕೆ ಸೇರ್ಪಡೆಯಾದ ಕಾನೂನುಗಳನ್ನು ಪರಿಶೀಲನೆಗೆ ಒಳಪಡಿಸಲು ನ್ಯಾಯಾಂಗಕ್ಕೆ ಅವಕಾಶ ಇಲ್ಲ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಅಥವಾ ಕಾಯ್ದೆಯ ಯಥಾಸ್ಥಿತಿ ಕಾಯ್ದುಕೊಳ್ಳುವುದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು. ಅದರ ಪರಿಣಾಮವನ್ನು ಎನ್‌ಡಿಎ ಸರ್ಕಾರ ಎದುರಿಸಬೇಕಾದೀತು ಎಂದು ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿವೆ.

ದಲಿತ ಮುಖಂಡ ಪ್ರಕಾಶ್‌ ಅಂಬೇಡ್ಕರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದಲಿತ ಶೋಷಣ್‌ ಮುಕ್ತಿ ಮಂಚ್‌ನ ಪಿ. ಶ್ರೀನಿವಾಸ ರಾವ್‌, ದಲಿತ ಮತ್ತು ಆದಿವಾಸಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಮುಖ್ಯಸ್ಥ ಅಶೋಕ್‌ ಭಾರ್ತಿ, ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಆಂದೋಲನದ ವಿ.ಎ. ರಮೇಶ್‌ನಾಥನ್‌, ದಲಿತ ಹಕ್ಕುಗಳ ವೇದಿಕೆಯ ಆನಂದ ರಾವ್‌ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಇದೇ 14ರ ಅಂಬೇಡ್ಕರ್‌ ಜಯಂತಿಯನ್ನು ‘ಸಂವಿಧಾನ ರಕ್ಷಣಾ ದಿನ’ವನ್ನಾಗಿ ಆಚರಿಸಲು ದಲಿತ ಸಂಘಟನೆಗಳು ನಿರ್ಧರಿಸಿವೆ.

ಘಟನಾವಳಿ

* ಮಾರ್ಚ್‌ 20: ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ‘ದುರ್ಬಲ’ಗೊಳಿಸಿ ಸುಪ್ರೀಂ ಕೋರ್ಟ್‌ ತೀರ್ಪು

* ಏಪ್ರಿಲ್‌ 2: ದಲಿತ ಸಂಘಟನೆಗಳಿಂದ ಉತ್ತರ ಭಾರತದಾದ್ಯಂತ ಬಂದ್‌, ವ್ಯಾಪಕ ಹಿಂಸಾಚಾರ, 9 ಸಾವು

* ಏಪ್ರಿಲ್‌ 2: ತೀರ್ಪು ಮರು ಪರಿಶೀಲಿಸುವಂತೆ ಕೇಂದ್ರದಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

* ಏಪ್ರಿಲ್‌ 3: ತೀರ್ಪು ಅಮಾನತಿನಲ್ಲಿ ಇರಿಸಲು ಸುಪ್ರೀಂ ಕೋರ್ಟ್‌ ನಕಾರ

ತೀರ್ಪನ್ನು ಮರುಪರಿಶೀಲಿಸಿ, ನೀಡಿರುವ ನಿರ್ದೇಶನ ಹಿಂದಕ್ಕೆ ಪಡೆಯುವ ಮೂಲಕ ತೀರ್ಪಿನಿಂದ ಸೃಷ್ಟಿಯಾದ ಗೊಂದಲವನ್ನು ಬಗೆಹರಿಸಬೇಕು –ಕೆ.ಕೆ. ವೇಣುಗೋಪಾಲ್‌, ಅಟಾರ್ನಿ ಜನರಲ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.