ಸೋಮವಾರ, ಜುಲೈ 13, 2020
25 °C
ಕುಸ್ತಿ: ಪುರುಷರ ವಿಭಾಗದಲ್ಲಿ ಸುಲಭವಾಗಿ ಗೆದ್ದ ಭಾರತದ ‍ಪೈಲ್ವಾನರು; ಬಬಿತಾ ಫೊಗಟ್‌ಗೆ ಬೆಳ್ಳಿ, ಕಂಚು ಗೆದ್ದು ಮಿಂಚಿದ ಕಿರಣ್‌

ಸುಶೀಲ್‌ ಹ್ಯಾಟ್ರಿಕ್‌; ರಾಹುಲ್‌ಗೆ ಮೊದಲ ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

ಸುಶೀಲ್‌ ಹ್ಯಾಟ್ರಿಕ್‌; ರಾಹುಲ್‌ಗೆ ಮೊದಲ ಚಿನ್ನ

ಗೋಲ್ಡ್ ಕೋಸ್ಟ್‌, ಆಸ್ಟ್ರೇಲಿಯಾ: ಅಮೋಘ ಪಟ್ಟುಗಳನ್ನು ಹಾಕಿದ ಭಾರತದ ಪೈಲ್ವಾನರು ಕಾಮನ್‌ವೆಲ್ತ್ ಕ್ರೀಡಾಕೂಟದ ಕುಸ್ತಿಕಣದಲ್ಲಿ ಮಿಂಚು ಹರಿಸಿದರು. ಎದುರಾಳಿಗಳ ನಿರೀಕ್ಷೆಗಳನ್ನು ಬುಡಮೇಲು ಮಾಡಿದ ಸುಶೀಲ್ ಕುಮಾರ್ ಮತ್ತು ರಾಹುಲ್‌ ಅವಾರೆ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದರೆ ಮಹಿಳೆಯರ ವಿಭಾಗದಲ್ಲಿ ಬಬಿತಾ ಫೊಗಟ್‌ ಬೆಳ್ಳಿ ಮತ್ತು ಕಿರಣ್‌ ಕಂಚಿನ ಪದಕ ಕೊರಳಿಗೇರಿಸಿಕೊಂಡರು.

74 ಕೆ.ಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಕಣಕ್ಕೆ ಇಳಿದ ಸುಶೀಲ್ ಕುಮಾರ್‌ ಒಂದು ನಿಮಿಷ ಮತ್ತು 20 ಸೆಕೆಂಡುಗಳಲ್ಲಿ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬೋಥಾ ಅವರನ್ನು ಮಣಿಸಿದರು. ಈ ಮೂಲಕ ಕಾಮನ್‌ವೆಲ್ತ್ ಕೂಟದಲ್ಲಿ ನಿರಂತರ ಮೂರನೇ ಬಾರಿ ಚಿನ್ನ ಗೆದ್ದ ಸಾಧನೆ ಮಾಡಿದರು.

ಇದಕ್ಕೂ ಮೊದಲು ಕಣಕ್ಕೆ ಇಳಿದ ರಾಹುಲ್‌ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚೊಚ್ಚಲ ಚಿನ್ನ ಗೆದ್ದು ಸಂಭ್ರಮಿಸಿದರು. ಕೆನಡಾದ ಸ್ಟೀವನ್ ಟಕಹಾಶಿ ಅವರ ವಿರುದ್ಧದ ಸೆಣಸಾಟದಲ್ಲಿ ಗೆದ್ದ ಕೂಡಲೇ ಭಾವುಕರಾಗಿ ಆನಂದ ಭಾಷ್ಪ ಸುರಿಸಿದ ಅವರು ಪದಕ ಪ್ರದಾನ ಸಮಾರಂಭದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗುವಾಗಲೂ ಅವರು ಭಾವುಕರಾದರು.

(ಪುರುಷರ 57 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತದ ರಾಹುಲ್ ಅವಾರೆ ಭಾವುಕರಾದ ಕ್ಷಣ ಎಎಫ್‌ಪಿ ಚಿತ್ರ)

ಮಹಿಳೆಯರ 53 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಕಳೆದ ಬಾರಿಯ ಚಾಂಪಿಯನ್‌ ಬಬಿತಾ ಫೊಗಟ್‌ ಕೆನಡಾದ ಡಯಾನ ವೀಕರ್‌ ಎದುರು 2–5ರಿಂದ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಗ್ಲಾಸ್ಗೊದಲ್ಲಿ ಕಳೆದ ಬಾರಿ ಚಿನ್ನ ಗೆದ್ದಿದ್ದ ಅವರು 2010ರಲ್ಲಿ ಬೆಳ್ಳಿ ಗೆದ್ದಿದ್ದರು. ಫೈನಲ್‌ಗೂ ಮೊದಲು ಅವರು ನೈಜೀರಿಯಾದ ಸ್ಯಾಮ್ಯುಯೆಲ್ ಬಾಸ್, ಶ್ರೀಲಂಕಾದ ದೀಪಿಕಾ ದಿಲ್ಹಾನಿ ಮತ್ತು ಆಸ್ಟ್ರೇಲಿಯಾದ ಕರಿಸಾ ಹಾಲೆಂಡ್ ಅವರ ವಿರುದ್ಧ ಗೆದ್ದಿದ್ದರು.

ಇದೇ ಮೊದಲ ಬಾರಿ ಕೂಟದಲ್ಲಿ ಪಾಲ್ಗೊಂಡ ಕಿರಣ್‌ 76 ಕೆ.ಜಿ ಫ್ರೀಸ್ಟೈಲ್ ವಿಭಗದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಮಾರಿಷಸ್‌ನ ಕಟಾಸ್ಕಿಯ ಪರಿಯಾಧವನ್‌ ಅವರನ್ನು ಕಿರಣ್‌ ಫೈನಲ್‌ನಲ್ಲಿ ಮಣಿಸಿದರು. ಇದು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಸ್ಪರ್ಧೆಯೊಂದರಲ್ಲಿ ಅವರು ಗಳಿಸಿದ ಮೊದಲ ಪದಕವಾಗಿದೆ.

(ಮಹಿಳೆಯರ 76 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕ್ಯಾಮರಾನ್‌ನ ಸಿನೊ ಗಿಮ್ಡೆ ವಿರುದ್ಧ ಸೆಣಸಿದ ಭಾರತದ ಕಿರಣ್‌ ರಾಯಿಟರ್ಸ್ ಚಿತ್ರ)

ಸಾಟಿಯಾಗದ ಬೋತಾ ತಂತ್ರಗಳು: ಸುಶೀಲ್‌ ಕುಮಾರ್ ಅವರ ಯೋಜನೆಗಳ ಮುಂದೆ ಜೊಹಾನ್ಸ್ ಬೋತಾ ಅವರ ತಂತ್ರಗಳು ಫಲಿಸಲಿಲ್ಲ. ಕಾಲುನೋವಿನಿಂದ ಬಳಲುತ್ತಿದ್ದ ಬೋತಾ ಅವರಿಗೆ ಯಾವುದೇ ಸಂದರ್ಭದಲ್ಲಿ ಮೇಲುಗೈ ಸಾಧಿಸಲು ಸುಶೀಲ್‌ ಅವಕಾಶ ನೀಡಲಿಲ್ಲ. ಫೈನಲ್‌ಗೂ ಮೊದಲು ಅವರು ಕೆನಡಾದ ಜೆವಾನ್‌ ಬಲ್ಫೋರ್‌, ಪಾಕಿಸ್ತಾನದ ಮಹಮ್ಮದ್‌ ಅಸಾದ್‌ ಬಟ್‌ ಮತ್ತು ಆಸ್ಟ್ರೇಲಿಯಾದ ಕ್ಯಾನರ್ ಇವಾನ್ಸ್‌ ಎದುರು ಗೆದ್ದಿದ್ದರು. 

ಅವಾರೆ ಕೂಡ ಎದುರಾಳಿಯನ್ನು ಸುಲಭವಾಗಿ ಮಣಿಸಿದರು. ನಿಗದಿತ ಅವಧಿ ಮುಗಿಯಲು ಒಂದು ನಿಮಿಷ ಬಾಕಿ ಇರುವಂತೆಯೇ ಅವರು 15–7ರಿಂದ ಮೇಲುಗೈ ಸಾಧಿಸಿದರು. ಇದಕ್ಕೂ ಮೊದಲು ಅವರು ಇಂಗ್ಲೆಂಡ್‌ನ ಜಾರ್ಜ್ ರಾಮ್‌, ಆಸ್ಟ್ರೇಲಿಯಾದ ಥಾಮಸ್‌ ಸಿಚಿನಿ ಮತ್ತು ಪಾಕಿಸ್ತಾನದ ಮಹಮ್ಮದ್ ಬಿಲಾಲ್ ಅವರನ್ನು ಸೋಲಿಸಿದ್ದರು.

**

ಒಂದು ದಶಕದ ನಿರೀಕ್ಷೆ ಕೈಗೂಡಿದಾಗ...

‘ಈ ಪದಕದಕ್ಕಾಗಿ ನಾನು ಹತ್ತು ವರ್ಷಗಳಿಂದ ಕಾಯುತ್ತಿದ್ದೆ. ಹೀಗಾಗಿ ಸಂಭ್ರಮವನ್ನು ವರ್ಣಿಸಲು ಆಗುತ್ತಿಲ್ಲ. ಕಳೆದ ಎರಡು ಕೂಟಗಳಲ್ಲಿ ಟ್ರಯಲ್ಸ್ ನಡೆಸದೇ ತಂಡವನ್ನು ಕಳುಹಿಸಲಾಗಿತ್ತು. ಈ ಬಾರಿ ಟ್ರಯಲ್ಸ್ ನಡೆಸಲಾಗಿತ್ತು. ನಾನು ಆಯ್ಕೆಯಾದೆ. ಚಿನ್ನವನ್ನೂ ಗೆದ್ದೆ’ ಎಂದು ರಾಹುಲ್‌ ಅವಾರೆ ಹೇಳಿದರು.

‘ಕಣಕ್ಕೆ ಇಳಿಯುವಾಗ ಕಾಲು ನೋಯುತ್ತಿತ್ತು. ಆದರೂ ಛಲ ಬಿಡಲಿಲ್ಲ. ಕಷ್ಟಪಟ್ಟು ಗಳಿಸಿದ ಈ ಚಿನ್ನವನ್ನು ನನ್ನ ಗುರು, 2011ರಲ್ಲಿ ತೀರಿಹೋದ ಹರಿಶ್ಚಂದ್ರ ಬಿರಜದಾರ್‌ ಅವರಿಗೆ ಸಮರ್ಪಿಸುತ್ತೇನೆ’ ಎಂದು ಹೇಳಿ ಅವರು ಭಾವುಕರಾದರು.

ನೋವು ಇತ್ತು; ಆದರೂ ಕಾದಾಡಿದೆ:

ನನಗೆ ಕಾಲು ನೋವು ಕಾಡುತ್ತಿತ್ತು. ನೋವು, ಕುಸ್ತಿ‍ಪಟುವಿಗೆ ಆಭರಣ ಇದ್ದಂತೆ. ಆದರೆ ಅದನ್ನು ಲೆಕ್ಕಿಸದೆ ಕಾದಾಡಿದೆ ಎಂದು ಬಬಿತಾ ಫೊಗಟ್ ತಿಳಿಸಿದರು.

**

‘ಡಂಗಲ್‌’ ಅಲ್ಲ; ಇದು ವಾಸ್ತವ

ಗೋಲ್ಡ್ ಕೋಸ್ಟ್‌: ಕುಸ್ತಿಯನ್ನೇ ವಸ್ತುವಾಗಿರಿಸಿಕೊಂಡ ಸಿನಿಮಾ ’ಡಂಗಲ್‌’ ಅನ್ನು ಹೋಲುವ ಘಟನೆ ಬಬಿತಾ ಫೊಗಟ್ ಅವರ ಫೈನಲ್ ಸಂದರ್ಭದಲ್ಲೂ ನಡೆಯಿತು. ಗುರುವಾರ ನಡೆದ ಫೈನಲ್ ಹಣಾಹಣಿಯ ಸಂದರ್ಭದಲ್ಲಿ ಬಬಿತಾ ಅವರ ತಂದೆ ಮಹಾವೀರ್ ಫೊಗಟ್ ಅವರಿಗೆ ಒಳಗೆ ಪ್ರವೇಶ ಸಿಗಲಿಲ್ಲ. ಟಿಕೆಟ್ ಅಥವಾ ಪಾಸ್ ಸಿಗದೇ ಇದ್ದದ್ದು ಇದಕ್ಕೆ ಕಾರಣ.

(ಮಹಿಳೆಯರ 53 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ನೈಜೀರಿಯಾದ ಬೋಸ್ ಸ್ಯಾಮ್ಯುಯೆಲ್ಸ್ ವಿರುದ್ಧ ಸೆಣಸಿದ ಭಾರತದ ಬಬಿತಾ ಫೊಗಟ್‌ ಪಿಟಿಐ ಚಿತ್ರ)

ಕ್ಯಾರರಾ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯ ಸಂದರ್ಭದಲ್ಲಿ ಮಹಾವೀರ ಅವರು ಹೊರಗೆ ನಿಂತುಕೊಂಡಿದ್ದರು. ಕೊನೆಗೆ ಆಸ್ಟ್ರೇಲಿಯಾ ಕುಸ್ತಿ ತಂಡದವರು ಅವರಿಗೆ ತಮ್ಮಲ್ಲಿದ್ದ ಟಿಕೆಟ್ ನೀಡಿದರು. ಆದರೆ ಒಳಗೆ ಬರುವಷ್ಟರಲ್ಲಿ ಬಬಿತಾ ಅವರ ಸ್ಪರ್ಧೆ ಮುಗಿದಿತ್ತು.

‘ಇದೇ ಮೊದಲ ಬಾರಿ ನನ್ನ ತಂದೆ ಸ್ಪರ್ಧೆ ನೋಡಲು ಬಂದಿದ್ದರು. ಆದರೆ ಬೆಳಿಗ್ಗೆಯಿಂದ ಕಾದರೂ ಅವರಿಗೆ ಟಿಕೆಟ್ ಸಿಗಲಿಲ್ಲ. ಇದು ನನಗೆ ಬೇಸರ ತರಿಸಿದೆ’ ಎಂದು ಬಬಿತಾ ಹೇಳಿದರು.

**

ನಿರೀಕ್ಷೆಗೆ ತಕ್ಕಂತೆ ಆಕ್ರಮಣ ನಡೆಸಲು ಸಾಧ್ಯವಾಗಲಿಲ್ಲ. ಇಲ್ಲಿ ಪೂರ್ಣ ಸಾಮರ್ಥ್ಯದಿಂದ ಪಟ್ಟುಗಳನ್ನು ಹಾಕಲು ಆಗಲಿಲ್ಲ. ಹೀಗಾಗಿ ಚಿನ್ನ ಗೆಲ್ಲಲಾಗಲಿಲ್ಲ.

-ಬಬಿತಾ ಫೊಗಟ್‌, ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಪೈಲ್ವಾನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.