ಶುಕ್ರವಾರ, ಡಿಸೆಂಬರ್ 13, 2019
19 °C

ಸಿದ್ದರಾಮಯ್ಯ ಒಂದೇ ಕಡೆ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದರಾಮಯ್ಯ  ಒಂದೇ ಕಡೆ ಸ್ಪರ್ಧೆ

ನವದೆಹಲಿ: ಮೈಸೂರಿನ ಚಾಮುಂಡೇಶ್ವರಿ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧೆ ಬಯಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದೇ ಕಡೆ ಸ್ಪರ್ಧಿಸುವಂತೆ ಹೈಕಮಾಂಡ್‌ ಸೂಚಿಸಿದೆ.

‘ಎರಡೂ ಕಡೆ ಸ್ಪರ್ಧಿಸಿದಲ್ಲಿ ವಿರೋಧಿಗಳಿಗೆ ತಪ್ಪು ಸಂದೇಶ ರವಾನಿಸಿದಂತಾಗಲಿದೆ. ಹಾಗಾಗಿ ನೀವು ಎರಡೂ ಕಡೆ ಸ್ಪರ್ಧಿಸುವುದು ಬೇಡ. ಚಾಮುಂಡೇಶ್ವರಿ ಅಥವಾ ಬಾದಾಮಿ ಕ್ಷೇತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ’ ಎಂದು ಪಕ್ಷ ಸೂಚಿಸಿದ್ದಾಗಿ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

‘ಜಿ.ಪರಮೇಶ್ವರ್‌ ಸಹ ಎರಡು ಕ್ಷೇತ್ರಗಳಿಂದ ಟಿಕೆಟ್‌ ಬಯಸಿದ್ದಾರೆ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಬ್ಬರೂ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದಲ್ಲಿ ಪಕ್ಷ ಸಾಕಷ್ಟು ಮುಜುಗರ ಎದುರಿಸಬೇಕಾಗುತ್ತದೆ’ ಎಂಬ ಕಾರಣದಿಂದಲೇ ಇಬ್ಬರೂ ಮುಖಂಡರಿಗೆ ವರಿಷ್ಠರು ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ಟಿಕೆಟ್‌ ಹಂಚಿಕೆ ನಿಟ್ಟಿನಲ್ಲಿ ಗುರುವಾರ ಮಧ್ಯರಾತ್ರಿವರೆಗೆ ಮತ್ತೆ ಸಭೆ ನಡೆಸಿದ ಮಧುಸೂದನ ಮಿಸ್ತ್ರಿ ನೇತೃತ್ವದ ಪಕ್ಷದ ಪರಿಶೀಲನಾ ಸಮಿತಿಯು, ರಾಜ್ಯ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿತು.

ಸಂಜೆ ದೆಹಲಿಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣು

ಗೋಪಾಲ್‌ ಅವರೊಂದಿಗೆ ಸಭೆಯಲ್ಲಿ ಭಾಗವಹಿಸಿ, ‘ಗೆಲ್ಲುವ’ ಅಭ್ಯರ್ಥಿಗಳಿಗೇ ಟಿಕೆಟ್‌ ನೀಡಬೇಕು ಎಂದು ತಿಳಿಸಿದರು.

ಇಂದು ಸಿಇಸಿ ಸಭೆ: ಶುಕ್ರವಾರ ಬೆಳಿಗ್ಗೆ 11ಕ್ಕೆ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸವಾದ ನಂಬರ್‌ 10– ಜನಪಥ್‌ನಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಮುಖಂಡರು ಸಭೆ ನಡೆಸಲಿದ್ದು, ಮತ್ತೊಂದು ಸುತ್ತಿನ ಮಾತುಕತೆಯ ನಂತರವೇ ಅಭ್ಯರ್ಥಿಗಳ ಅಂತಿಮ ಪಟ್ಟಿಗೆ ಅನುಮೋದನೆ ನೀಡಲಿದ್ದಾರೆ. ಸಂಜೆಯ ವೇಳೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಒಟ್ಟು 136 ಕ್ಷೇತ್ರಗಳ ಮೊದಲ ಪಟ್ಟಿ ಬಹುತೇಕ ಸಿದ್ಧಗೊಂಡಿದ್ದು, ಸಿದ್ದರಾಮಯ್ಯ ಅವರ ಆಪ್ತರಿಗೆ ಟಿಕೆಟ್‌ ದೊರೆಯುವುದು ಖಚಿತ ಎಂದು ತಿಳಿದುಬಂದಿದೆ.

ಬಾದಾಮಿಯಿಂದಲೂ ತಯಾರಿ

ಬೆಂಗಳೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ, ಮತ್ತೊಂದು ‘ಅತ್ಯಂತ ಸುರಕ್ಷಿತ’ ಕ್ಷೇತ್ರದಿಂದಲೂ ಅಖಾಡಕ್ಕಿಳಿಯಲು ಬಯಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದಲೂ ಕಣಕ್ಕಿಳಿಯಲು ಮನಸ್ಸು ಮಾಡಿದ್ದರು.

ಮುಖ್ಯಮಂತ್ರಿ ನಡೆಗೆ ತೀವ್ರ ಪ್ರತಿರೋಧ ತೋರಿದ್ದ ಹಾಲಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಹೈಕಮಾಂಡ್‌ಗೂ ದೂರು ಸಲ್ಲಿಸಿದ್ದರು.

ಆದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ನೇತೃತ್ವದಲ್ಲಿ ಸ್ಥಳೀಯ ಮುಖಂಡರೊಂದಿಗೆ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿಯಾದ ಚಿಮ್ಮನಕಟ್ಟಿ, ಬಾದಾಮಿಯಲ್ಲಿ ಕಣಕ್ಕಿಳಿಯುವಂತೆ ಅವರಿಗೆ ಆಹ್ವಾನ ನೀಡಿದರು. ಚಿಮ್ಮನಕಟ್ಟಿಗೆ ವಿಧಾನ ಪರಿಷತ್‌ ಸದಸ್ಯ ಸ್ಥಾನ ನೀಡುವ ಭರವಸೆ ನೀಡಲಾಗಿದೆ.

ಪ್ರತಿಕ್ರಿಯಿಸಿ (+)