ಸೋಮವಾರ, ಜುಲೈ 13, 2020
25 °C

ವಿದ್ವತ್‌ ಹಲ್ಲೆ ಪ್ರಕರಣ: ಗುರು ರಾಜ್‌ಕುಮಾರ್‌ ಹೇಳಿಕೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ವತ್‌ ಹಲ್ಲೆ ಪ್ರಕರಣ: ಗುರು ರಾಜ್‌ಕುಮಾರ್‌ ಹೇಳಿಕೆ ದಾಖಲು

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್‌ ಮೇಲೆ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮೊಹಮದ್‌ ನಲಪಾಡ್‌ ಯು.ಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವರನಟ ಡಾ.ರಾಜ್‌ಕುಮಾರ್ ಮೊಮ್ಮಗ ಗುರು ರಾಜ್‌ ಕುಮಾರ್ ಹಾಗೂ ವೈದ್ಯರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಹಲ್ಲೆ ನಡೆದ ನಂತರ ವಿದ್ವತ್‌ ಅವರನ್ನು ಆಸ್ಪತ್ರೆಗೆ ಕರೆತಂದಾಗ ನಡೆದ ವಿವರಗಳನ್ನು ದಾಖಲಿಸಿಕೊಂಡಿರುವ ವಿಡಿಯೊ ದೃಶ್ಯಾವಳಿಗಳನ್ನು ನಟ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಗುರು ರಾಜ್‌ಕುಮಾರ್ ತನಿಖಾಧಿಕಾರಿಗಳಿಗೆ ನೀಡಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ಕುರಿತಂತೆ ಸಿಸಿಬಿ ಪೊಲೀಸರಿಗೆ ಹೇಳಿಕೆ ನೀಡಿರುವ ಗುರು ರಾಜ್‌ಕುಮಾರ್, ‘ವಿದ್ವತ್‌ ಮೇಲೆ ಹಲ್ಲೆ ನಡೆದಿದೆ ಎಂದು ಗೊತ್ತಾದ ತಕ್ಷಣ ನಾನು ಮಲ್ಯ ಆಸ್ಪತ್ರೆಗೆ ಧಾವಿಸಿದೆ. ಆಗ ಅಲ್ಲಿಗೆ ಬಂದಿದ್ದ ಮೊಹಮದ್‌ ನಲಪಾಡ್ ಮತ್ತು ಆತನ ಗೆಳೆಯರು ವಿದ್ವತ್‌ನನ್ನು ತೀವ್ರವಾಗಿ ನಿಂದಿಸಿದರು’ ಎಂದಿದ್ದಾರೆ.

‘ಆಸ್ಪತ್ರೆಗೆ ಬಂದಾಗ ವಿದ್ವತ್‌ನ ಅಣ್ಣ ಸಾತ್ವಿಕ್‌ನನ್ನೂ ನಲಪಾಡ್‌ ನಿಂದಿಸಿ ಹಲ್ಲೆಗೆ ಮುಂದಾದರು. ಆಗ ನಲಪಾಡ್‌ ಅವರನ್ನು ತಡೆಯಲು ಗುರು ಪ್ರಯತ್ನಿಸಿದರು’ ಎಂದು ಮೂಲಗಳು ಹೇಳಿವೆ.

‘ಅಲ್ಲಿದ್ದ ಕೆಲವರು ನಲಪಾಡ್‌ಗೆ ಗುರು ಅವರನ್ನು ತೋರಿಸಿ ಇವರು ಡಾ.ರಾಜ್‌ಕುಮಾರ್ ಮೊಮ್ಮಗ. ರಾಘವೇಂದ್ರ ರಾಜ್‌ಕುಮಾರ್‌ ಅವರ ಮಗ ಎಂದರು. ಇದಕ್ಕೆ ನಲಪಾಡ್‌, ಓಹೊ, ಹೋಗಿ ನಿನ್ನ ಅಂಕಲ್‌ ಪುನೀತ್‌ ಅವರನ್ನು ಕೇಳು. ನಲಪಾಡ್‌ ಯಾರು ಎಂದು ಗೊತ್ತಾಗುತ್ತದೆ’ ಎಂದೂ ಕೆಣಕಿದ್ದಾಗಿ ಮೂಲಗಳು ವಿವರಿಸಿವೆ.

ವೈದ್ಯರ ಹೇಳಿಕೆ: ಆಸ್ಪತ್ರೆಯಲ್ಲಿ ವಿದ್ವತ್‌ಗೆ ಚಿಕಿತ್ಸೆ ನೀಡಿದ ವೈದ್ಯರು, ಸಹಾಯಕರು ಹಾಗೂ ತುರ್ತು ಚಿಕಿತ್ಸಾ ಘಟಕದಲ್ಲಿ ಕರ್ತವ್ಯದ ಮೇಲಿದ್ದ ವಾರ್ಡ್‌ ಬಾಯ್‌ಗಳ ಹೇಳಿಕೆಯನ್ನೂ ಸಿಸಿಬಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ವಾರ್ಡ್‌ ಬಾಯ್‌ ಹೇಳಿಕೆ ಪ್ರಕಾರ, ವಿದ್ವತ್ ಮಲಗಿದ್ದ ಹಾಸಿಗೆಯನ್ನು ಸಾತ್ವಿಕ್‌ಗೆ ತೋರಿಸಿದ ನಲಪಾಡ್, ನೋಡು; ನೀನೂ ಇದೇ ಹಾಸಿಗೆ ಪಕ್ಕ ಮಲಗುತ್ತೀಯಾ ಎಂದು ಆತನ ಅಂಗಿ ಹಿಡಿದು ದಬಾಯಿಸಿದರು ಎಂದು ಮೂಲಗಳು ಹೇಳಿವೆ.

‘ಕೆಲವು ದಿನಗಳ ಹಿಂದೆ ಫರ್ಜಿ ಕೆಫೆಯಲ್ಲಿ ವಿದ್ವತ್‌ ಪರ್ಸ್ ಕಳೆದುಕೊಂಡಿದ್ದರು. ಅದು ಅವರ ಗೆಳತಿಗೆ ಸಿಕ್ಕಿತ್ತು. ಅದನ್ನು ಪಡೆಯಲು ವಿದ್ವತ್‌ ಫೆಬ್ರುವರಿ 17ರಂದು ಕೆಫೆಗೆ ಹೋಗಿದ್ದರು. ಆಗ ಈ ಹಲ್ಲೆ ನಡೆದಿದೆ ಎಂದು ವಿದ್ವತ್‌ ಗೆಳತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಹಲ್ಲೆ ನಡೆಸಿದ ಎಂಟು ಜನರಲ್ಲಿ ಆರು ಜನರನ್ನು ಈಕೆ ಗುರುತಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ಬಂಧನದಲ್ಲಿರುವ ಮೊಹಮದ್‌ ನಲಪಾಡ್‌ ಜಾಮೀನು ಅರ್ಜಿಯನ್ನು ಹೈಕೋರ್ಟ್ ಈಗಾಗಲೇ ವಜಾ ಮಾಡಿದ್ದು ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲೇ ಪ್ರಶ್ನಿಸಬೇಕಿದೆ. ಆದರೆ, ನಲಪಾಡ್‌ ಇದನ್ನು ಇನ್ನೂ ಪ್ರಶ್ನಿಸಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.