ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಗುಣಮಟ್ಟ: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

Last Updated 12 ಏಪ್ರಿಲ್ 2018, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಈಗಲೂ ವಿಷಯವಾರು ಶಿಕ್ಷಕರ (ಸಬ್‌ಜೆಕ್ಟ್‌ ಟೀಚರ್ಸ್‌) ಕೊರತೆ ಪ್ರಮುಖವಾಗಿದೆ. ಪ್ರತಿ ಶಾಲೆಗಳಲ್ಲಿ ಆರೂ ವಿಷಯಗಳ ಶಿಕ್ಷಕರ ನೇಮಕ ಆಗಬೇಕು ಎಂಬ ಆಶಯ ಇಲ್ಲಿಯವರೆಗೂ ಈಡೇರಿಲ್ಲ. ಇದರ ಪರಿಣಾಮ ಬೇರೆ ವಿಷಯಗಳನ್ನು ಓದಿದವರು ಮತ್ಯಾವುದೋ ವಿಷಯದ ಪಾಠ ಮಾಡಬೇಕಾದ ಪರಿಸ್ಥಿತಿ ಇದೆ.

ಬಿ.ಇಡಿಯಲ್ಲಿ ರಾಸಾಯನ ವಿಜ್ಞಾನ, ಜೀವ ವಿಜ್ಞಾನ, ಪ್ರಾಣಿಶಾಸ್ತ್ರ (ಸಿಬಿಜಡ್‌) ವಿಷಯಗಳನ್ನು ಓದಿರುವ ಶಿಕ್ಷಕರು ಶಾಲೆಗಳಲ್ಲಿ ಈ ವಿಷಯಗಳ ಜತೆಗೆ ಇಂಗ್ಲಿಷ್‌ ಪಾಠವನ್ನೂ ಮಾಡುತ್ತಿದ್ದಾರೆ. ಇನ್ನೂ ಕೆಲ ಶಾಲೆಗಳಲ್ಲಿ ಸಿಬಿಜಡ್‌ ಶಿಕ್ಷಕರು ಗಣಿತದ ಪಾಠವನ್ನೂ ಮಾಡುತ್ತಿದ್ದಾರೆ. ಅದೇ ರೀತಿ ಕೆಲವೆಡೆ ಇತಿಹಾಸ ವಿಷಯದ ಶಿಕ್ಷಕರು ಸಮಾಜ ವಿಜ್ಞಾನದ ಜತೆಗೆ ಕನ್ನಡದ ಪಾಠವನ್ನು, ಇನ್ನೂ ಕೆಲವೆಡೆ ಹಿಂದಿಯ ಶಿಕ್ಷಕರು ಇಂಗ್ಲಿಷ್‌ ಪಾಠವನ್ನೂ ಮಾಡುತ್ತಿರುವುದುಂಟು.

ಶಿಕ್ಷಣ ತರಬೇತಿ ಕೋರ್ಸ್‌ನಲ್ಲಿ ಓದದೇ ಇದ್ದರೂ, ವಿಷಯದ ಬಗ್ಗೆ ಆಳವಾದ ಜ್ಞಾನವಿಲ್ಲದೇ ಇದ್ದರೂ ನಿರ್ದಿಷ್ಟ ವಿಷಯದ ಪಾಠವನ್ನೂ ಮಾಡಲೇ ಬೇಕಾದ ಅನಿವಾರ್ಯತೆ ಶಿಕ್ಷಕರಿಗೆ ಎದುರಾಗಿದೆ. ಆದರೆ ಇದರ ದುಷ್ಪರಿಣಾಮ ಬೀರುತ್ತಿರುವುದು ನೇರವಾಗಿ ವಿದ್ಯಾರ್ಥಿಗಳ ಮೇಲೆ!

ಇಂಗ್ಲಿಷ್‌ ಅಥವಾ ಕನ್ನಡ ವ್ಯಾಕರಣವೇ ಸರಿಯಾಗಿ ಗೊತ್ತಿಲ್ಲದ ಶಿಕ್ಷಕರು ಮಕ್ಕಳಿಗೆ ಈ ಕುರಿತು ಪಾಠ ಮಾಡಿದರೆ, ಅದರ ಪರಿಣಾಮವನ್ನು ವಿದ್ಯಾರ್ಥಿಗಳು ಜೀವನ ಪೂರ್ತಿ ಅನುಭವಿಸಬೇಕಾಗುತ್ತದೆ ಎಂಬುದು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಅಸಮಾಧಾನದ ನುಡಿ.

ಇವುಗಳ ಜತೆಗೆ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಸೈಕಲ್‌ ವಿತರಣೆ, ಶೂ ಮತ್ತು ಸಾಕ್ಸ್‌ ವಿತರಣೆ, ಜಂತು ಹುಳುವಿನ ಗುಳಿಗೆಗಳ ವಿತರಣೆ, ಶಾಲೆಯ ಸ್ವಚ್ಛತಾ ಕಾರ್ಯ, ಪ್ರತಿ ತಿಂಗಳು ಮಕ್ಕಳ ಹಾಜರಾತಿಯ ದತ್ತಾಂಶವನ್ನು ‘ಸ್ಟೂಡೆಂಟ್‌ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಂ’ಗೆ (ಎಸ್‌ಎಟಿಎಸ್‌) ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡುವುದು, ಕಿರು ಪರೀಕ್ಷೆ, ಮಧ್ಯ ವಾರ್ಷಿಕ, ವಾರ್ಷಿಕ ಪರೀಕ್ಷೆಗಳ ಅಂಕಗಳು ಮತ್ತು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಪ್ರತಿ ಸವಲತ್ತುಗಳ ದತ್ತಾಂಶವನ್ನು ಅಪ್‌ಲೋಡ್‌ ಮಾಡುವುದೂ ಸೇರಿದಂತೆ ಕ್ಲರ್ಕ್‌ಗಳು ಮಾಡಬೇಕಾದ ಬಹುತೇಕ ಕೆಲಸವನ್ನೂ ಸಹ ಶಿಕ್ಷಕರೇ ಮಾಡಬೇಕಾಗಿದೆ. ಇದು ಅವರಲ್ಲಿನ ಬೋಧನಾ ಆಸಕ್ತಿಯನ್ನೇ ಕುಂದಿಸುತ್ತಿದೆ ಎನ್ನುತ್ತಾರೆ ಅವರು.

‘ಬಿ.ಇಡಿಯಲ್ಲಿ ನಿರ್ದಿಷ್ಟ ವಿಷಯವನ್ನು ಮಾತ್ರ ಓದುವ ಅಭ್ಯರ್ಥಿಗಳು ಸರ್ಕಾರಿ ಅಥವಾ ಖಾಸಗಿ ಶಾಲೆಗೆ ಶಿಕ್ಷಕರಾಗಿ ನೇಮಕ ಆದ ನಂತರ ಭ್ರಮ ನಿರಸನ ಆಗುವುದೇ ಹೆಚ್ಚು. ರಾಜ್ಯದ ಶೇ 60ಕ್ಕೂ ಹೆಚ್ಚು ಶಾಲೆಗಳಲ್ಲಿ ಕ್ಲರ್ಕ್‌ಗಳ ನೇಮಕಾತಿ ಆಗಿಲ್ಲ. ಎಲ್ಲ ಶಾಲೆಗಳಲ್ಲೂ ಆರೂ ವಿಷಯಗಳ ಶಿಕ್ಷಕರಿರಬೇಕು. ಆದರೆ ಗ್ರಾಮೀಣ ಭಾಗದ ಬಹುತೇಕ ಶಾಲೆಗಳಲ್ಲಿ ಮೂರು ಅಥವಾ ನಾಲ್ಕು ವಿಷಯಗಳ ಶಿಕ್ಷಕರು ಮಾತ್ರ ಇದ್ದಾರೆ. ಉಳಿದ ವಿಷಯಗಳನ್ನು ಬೋಧಿಸುವ ಕೆಲಸ ಈ ಶಿಕ್ಷಕರ ಹೆಗಲ ಮೇಲೆಯೇ ಬೀಳುತ್ತಿದೆ’ ಎಂಬುದು ಅವರು ನೀಡುವ ವಿವರಣೆ.

‘ಇದು ನಿನ್ನೆ ಮೊನ್ನೆಯಿಂದ ಎದುರಾಗಿರುವ ಸಮಸ್ಯೆ ಅಲ್ಲ. ದಶಕಗಳಿಂದ ಹಾಗೆಯೇ ಉಳಿದಿರುವ ಸಮಸ್ಯೆ. ಇಂದಿಗೂ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್, ವಿಜ್ಞಾನ, ಗಣಿತದಲ್ಲಿ ಹಿಂದುಳಿಯಲು ಇವುಗಳೇ ಪ್ರಮುಖ ಕಾರಣ. ಈ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನಗಳೂ ಇಲ್ಲಿಯವರೆಗೆ ಆಗಿಲ್ಲ’ ಎನ್ನುತ್ತಾರೆ ಅವರು.

ಟಿಇಟಿಯಲ್ಲಿ ಕಳಪೆ ಸಾಧನೆ:
ಗುಣಮಟ್ಟದ ಶಿಕ್ಷಕರನ್ನು ನೇಮಿಸುವ ಉದ್ದೇಶದಿಂದ ಸರ್ಕಾರ ಶಿಕ್ಷಕರ ಪ್ರವೇಶ ಪರೀಕ್ಷೆಯನ್ನು (ಟಿಇಟಿ)  ಕೆಲ ವರ್ಷದಿಂದ ನಡೆಸುತ್ತಿದೆ. ಇದನ್ನು ಪಾಸಾದವರು ಮಾತ್ರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಅರ್ಹರು. ಡಿಪ್ಲೊಮಾ ಇನ್‌ ಎಲಿಮೆಂಟ್ರಿ ಎಜುಕೇಷನ್‌ (ಡಿ.ಇಎಲ್‌.ಇಡಿ) ಮತ್ತು ಬಿ.ಇಡಿ ಪೂರ್ಣಗೊಳಿಸಿದವರು ಈ ಪರೀಕ್ಷೆ ಬರೆಯಬಹುದು. ಆದರೆ ಈ ಪರೀಕ್ಷೆಯಲ್ಲಿ ಪಾಸಾಗುವವರ ಸಂಖ್ಯೆ ಶೇ 20 ದಾಟುತ್ತಿಲ್ಲ. ಇದು ಶಿಕ್ಷಕ ತರಬೇತಿಯ ಗುಣಮಟ್ಟದತ್ತ ಬೆರಳುಮಾಡುತ್ತದೆ.
‘ಟಿಇಟಿಯ ಫಲಿತಾಂಶ ಗಮನಿಸಿದರೆ, ಅಭ್ಯರ್ಥಿಗಳಿಗೆ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ ಸರಿಯಾದ ಶಿಕ್ಷಣ ಮತ್ತು ತರಬೇತಿ ದೊರೆಯುತ್ತಿಲ್ಲ ಎನಿಸುತ್ತದೆ’ ಎಂಬುದು ಹಲವು ಶಿಕ್ಷಣ ತಜ್ಞರ ಅಭಿಪ್ರಾಯ ಮತ್ತು ಆತಂಕವಾಗಿದೆ.

ಬದಲಾಗದ ಬೋಧನಾ ಕಲೆ :
ಕಾಲಕ್ಕೆ ತಕ್ಕಂತೆ ಬೋಧನಾ ಕಲೆಯೂ ಬದಲಾಗಬೇಕು. ಅದನ್ನು ಡಿ.ಇಎಲ್‌.ಇಡಿ (ಹಿಂದಿನ ಡಿ.ಇಡಿ), ಬಿ.ಇಡಿ, ಎಂ.ಇಡಿ ಪಠ್ಯದಲ್ಲಿ ಅಳವಡಿಸಬೇಕು. ಆದರೆ ಈಗಿರುವ ಪಠ್ಯದಲ್ಲಿ ಹಳೆ ಬೋಧನಾ ಕಲೆಯೇ ಇದೆ. ಇದು ತುರ್ತಾಗಿ ಬದಲಾಗಬೇಕು ಎನ್ನುವುದು ಶಿಕ್ಷಣ ತಜ್ಞ ಶ್ರೀಪಾದ ಭಟ್‌ ಅವರ ಅಭಿಪ್ರಾಯ.‌

ಈಗಿರುವ ಪಠ್ಯಕ್ರಮದ ರಚನೆ, ಪಠ್ಯಕ್ರಮದ ಆಯ್ಕೆ, ಬೋಧನಾ ಕ್ರಮ ಮತ್ತು ಕಲಿಕಾ ಕ್ರಮ ಸರಿಯಿಲ್ಲ. ಪಠ್ಯಕ್ರಮದ ಆಯ್ಕೆ ಮತ್ತು ರಚನೆಯಲ್ಲಿ ಸ್ಥಳೀಯ, ಪ್ರಾದೇಶಿಕ ಸಂಸ್ಕೃತಿಗೆ ಒತ್ತು ನೀಡಬೇಕು. ಬೋಧನಾ ಕ್ರಮ ಮತ್ತು ಕಲಿಕಾ ಕ್ರಮದಲ್ಲಿ ಸಧಾರಣೆಗಳಾಗಬೇಕು. ಹೊಸ ಪ್ರಯೋಗಗಳು ನಡೆಯುತ್ತಿರಬೇಕು. ಸ್ಮಾರ್ಟ್‌ ಕ್ಲಾಸ್‌, ಡಿಜಿಟಲ್‌ ತರಗತಿಗಳು, ಆನ್‌ಲೈನ್‌ ಕೋರ್ಸ್‌ಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಬೋಧನಾ ಕಲೆಯಲ್ಲಿ ಪರಿಷ್ಕರಣೆಗಳಾಗಬೇಕು.

ಪಠ್ಯ ಪರಿಷ್ಕರಣೆ ವಿಷಯವನ್ನು ರಾಜಕೀಯಗೊಳಿಸಬಾರದು. ಯಾವುದೇ ಸಿದ್ಧಾಂತಕ್ಕೆ ಜೋತು ಬಿದ್ದವರಿಂದ ಪಠ್ಯ ಪರಿಷ್ಕರಣೆ ಆಗಬಾರದು. ಸರ್ಕಾರಗಳು ಬಂದಾಗೆಲ್ಲ ಪಠ್ಯ ಬದಲಿಸುವುದು ಅಥವಾ ಪರಿಷ್ಕರಿಸುವುದೂ ಒಳ್ಳೆಯದಲ್ಲ. ಒಮ್ಮೆ ರಚನೆಯಾದ ಪಠ್ಯವನ್ನು 10 ವರ್ಷದ ನಂತರವಷ್ಟೇ ಬದಲಿಸಲು ಅವಕಾಶ ಇರಬೇಕು. ಬೇಕಾದರೆ ಸಣ್ಣ ಪುಟ್ಟ ತಿದ್ದುಪಡಿಗೆ ಅವಕಾಶ ಕೊಡಬಹುದು ಎನ್ನುವುದು ಅವರ ಪ್ರತಿಪಾದನೆ.

ಗುಣಮಟ್ಟ ಕುಸಿತಕ್ಕೆ ಕಾರಣವೇನು?:

ರಾಜ್ಯದಲ್ಲಿ ದಶಕದ ಹಿಂದೆ ನಾಯಿಕೊಡೆಗಳಂತೆ ಶಿಕ್ಷಕ ತರಬೇತಿ ಸಂಸ್ಥೆಗಳು ಹುಟ್ಟಿಕೊಂಡಿದ್ದೇ ಶಿಕ್ಷಕರ ಗುಣಮಟ್ಟದಲ್ಲಿ ಕುಸಿಯಲು ಪ್ರಮುಖ ಕಾರಣ ಎಂಬುದು ಆರ್‌.ವಿ.ಟೀಚರ್ಸ್‌ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್‌. ಶ್ರೀಕಂಠಸ್ವಾಮಿ ಅವರ ಅಭಿಪ್ರಾಯ.

ರಾಜ್ಯದಲ್ಲಿ 2003ರವರೆಗೆ ಕೆಲವೇ ಸಂಖ್ಯೆಯಲ್ಲಿದ್ದ ಶಿಕ್ಷಣ ತರಬೇತಿ ಸಂಸ್ಥೆಗಳು 2004ರ ನಂತರ ಒಮ್ಮೆಗೆ ಹೆಚ್ಚಾದವು. 2004ರಲ್ಲಿ ಸರ್ಕಾರವೇ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಶಿಕ್ಷಣ ತರಬೇತಿ ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡಿತು. ಇದರ ಪರಿಣಾಮ ಒಮ್ಮೆಗೆ ನೂರಾರು ಸಂಖ್ಯೆಯಲ್ಲಿ ಡಿ.ಇಡಿ ಮತ್ತು ಬಿ.ಇಡಿ ಕಾಲೇಜುಗಳು ಆರಂಭವಾದವು. ವಿದ್ಯಾರ್ಥಿಗಳನ್ನು ಸೆಳೆದುಕೊಳ್ಳಲು ಕಾಲೇಜುಗಳ ನಡುವೆ ಅನೈತಿಕ ಪೈಪೋಟಿ ನಡೆಯಿತು. ಆದರೆ ಹೊಸ ಸಂಸ್ಥೆಗಳಲ್ಲಿ ಅರ್ಹ ಬೋಧಕರು ಮತ್ತು ಮೂಲ ಸೌಕರ್ಯ ಇಲ್ಲದ ಕಾರಣ ಗುಣಮಟ್ಟ ಕುಸಿಯಿತು ಎನ್ನುತ್ತಾರೆ ಅವರು.

ಇದರ ನಡುವೆಯೇ 10 ತಿಂಗಳ ಬಿ.ಇಡಿ ಕೋರ್ಸ್‌ ಅನ್ನು ಎರಡು ವರ್ಷಕ್ಕೆ ವಿಸ್ತರಿಸಲಾಯಿತು. ಎರಡು ಬ್ಯಾಚ್‌ ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಬೋಧಕರು, ಕೊಠಡಿಗಳೂ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವುದು ಒಮ್ಮೆಗೆ ಒದಗಿಸುವುದು ಈ ಕಾಲೇಜುಗಳಿಗೆ ಇನ್ನೂ ಕಷ್ಟವಾಗಿದೆ. ಇದರಿಂದ ತರಬೇತಿ ಮೌಲ್ಯ ಮತ್ತಷ್ಟು ಕುಸಿದಿದೆ ಎಂದು ಅವರು ವಿವರಿಸುತ್ತಾರೆ.

ಬಿ.ಇಡಿ ಕೋರ್ಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶದಿಂದ ಬಿ.ಕಾಂ, ಬಿ.ಇ, ಎಂ.ಬಿ.ಬಿ.ಎಸ್‌ ಪದವೀಧರರಿಗೂ ಪ್ರವೇಶಕ್ಕೆ ಅವಕಾಶ ಒದಗಿಸಲಾಗಿದೆ. ಇದರ ಜತೆಗೆ ಪಿಯುಸಿ ಉಪನ್ಯಾಸಕರಾಗಲೂ ಬಿ.ಇಡಿ ಕಡ್ಡಾಯ ಮಾಡಲಾಗಿದೆ. ಇವೆಲ್ಲದರ ಪರಿಣಾಮ ಇತ್ತೀಚೆಗೆ ಬಿ.ಇಡಿ ಕೋರ್ಸ್‌ ಸೇರುವವರ ಸಂಖ್ಯೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಆದರೆ ಗುಣಮಟ್ಟದ ಸಮಸ್ಯೆ ಮುಂದುವರೆದಿದೆ. ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಬಹುತೇಕ ಡಿ.ಇಡಿ ಕಾಲೇಜುಗಳು ತೆರೆದಷ್ಟೇ ವೇಗವಾಗಿ ಬಾಗಿಲು ಹಾಕಿವೆ ಎನ್ನುತ್ತಾರೆ ಅವರು. 2012–13ರಲ್ಲಿ ರಾಜ್ಯದಲ್ಲಿದ್ದ 963 ಡಿಇಡಿ ಕಾಲೇಜುಗಳ ಪೈಕಿ ಈಗ ಕಾರ್ಯ ನಿರ್ವಹಿಸುತ್ತಿರುವುದು 220 ಮಾತ್ರ. ಪ್ರಸ್ತುತ 398 ಬಿ.ಇಡಿ ಕಾಲೇಜುಗಳು ಇವೆ.

ಐಐಟಿ/ಐಐಎಂ ಮಾದರಿಯಾಗಬೇಕು:
ರಾಜ್ಯದಲ್ಲಿ ಶೇ 92ರಷ್ಟು ಶಿಕ್ಷಣ ತರಬೇತಿ ಸಂಸ್ಥೆಗಳು ಖಾಸಗಿಯವರ ಹಿಡಿತದಲ್ಲಿವೆ. ಇವುಗಳನ್ನು ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವ ಕಾರ್ಯದಲ್ಲಿ ಸರ್ಕಾರ ವಿಫಲವಾಗಿದೆ. ಹಾಗಾಗಿ ಐಐಟಿ ಅಥವಾ ಐಐಎಂ ಮಾದರಿಯಲ್ಲಿ ಪ್ರತಿ ಜಿಲ್ಲೆಗಳಲ್ಲಿ ಒಂದೊಂದು ಸರ್ಕಾರಿ ಶಿಕ್ಷಣ ತರಬೇತಿ ಸಂಸ್ಥೆಗಳು ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಡಯಟ್‌ಗಳ ಕಾರ್ಯವೈಖರಿಯನ್ನು ಪುನರ್‌ರಚಿಸಬೇಕು ಎಂಬುದು ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ಅವರ ಪ್ರತಿಪಾದನೆ.

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
‘ಶಿಕ್ಷಕರಿಗೆ ಗುಣಾತ್ಮಕ ತರಬೇತಿ ನೀಡುವಲ್ಲಿ ವಿಫಲವಾಗಿರುವ ಸರ್ಕಾರ, ಆ ಶಿಕ್ಷಕರನ್ನು ವಿವಿಧ ಕಾರ್ಯಗಳಿಗೆ ಬಳಸಿಕೊಂಡು ಶಿಕ್ಷಣ ವ್ಯವಸ್ಥೆಯನ್ನೇ ಹದಗೆಡಿಸುತ್ತಿದೆ. ಇದರಿಂದ ಶಿಕ್ಷಕ ಮತ್ತು ವಿದ್ಯಾರ್ಥಿ ಸಮೂಹವೆರಡೂ ವಂಚನೆಗೆ ಒಳಗಾಗುತ್ತಿವೆ. ಸಾಕಷ್ಟು ಶಿಕ್ಷಣ ಸಂಸ್ಥೆಗಳ ಮಾಲೀಕರಾಗಿರುವ ರಾಜಕಾರಣಿಗಳು ನಿಯಮಗಳನ್ನು ಗಾಳಿಗೆ ತೂರಿ ಶಿಕ್ಷಣ ವ್ಯವಸ್ಥೆಯ ಕತ್ತು ಹಿಸುಕುತ್ತಿದ್ದಾರೆ. ಸಮಾಜ ಸೇವೆಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿರುವ ಈ ರಾಜಕಾರಣಿಗಳು ನಿಸ್ವಾರ್ಥ ಸೇವೆ ಮಾಡುತ್ತಿಲ್ಲ. ಹೀಗಿರುವಾಗ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂಬುದು ಇತಿಹಾಸ ವಿಷಯದ ಉಪನ್ಯಾಸಕ ಹಂ.ಗು.ರಾಜೇಶ್‌ ಅವರ ಪ್ರಶ್ನೆ.
 


ರಾಜ್ಯದಲ್ಲಿರುವ ಶಿಕ್ಷಕರ ಹುದ್ದೆ ಮತ್ತು ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು (2016–17ರ ಮಾಹಿತಿ)

ಶಾಲೆಗಳು ಮಂಜೂರಾದ ಹುದ್ದೆಗಳು ಕಾರ್ಯ ನಿರ್ವಹಿಸುತ್ತಿರುವವರು
ಕಿರಿಯ ಪ್ರಾಥಮಿಕ ಶಾಲೆ 48,988 42,117
ಹಿರಿಯ ಪ್ರಾಥಮಿಕ ಶಾಲೆ 1,45,720 1,24,019
ಪ್ರೌಢಶಾಲೆ 54,176 46,704
–––––––––––––––

ರಾಜಕೀಯ ಪಕ್ಷಗಳ ಮುಖಂಡರು ಏನಂತಾರೆ?

ಬಸವರಾಜ ಹೊರಟ್ಟಿ (ಜೆಡಿಎಸ್‌–ಶಾಸಕ)

ನಮ್ಮ ಸರ್ಕಾರ ಬಂದರೆ ಶಿಕ್ಷಕರ ತರಬೇತಿ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ಮಾಡುತ್ತೇವೆ. ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹಂತ ಹಂತವಾಗಿ ಅನುದಾನಕ್ಕೊಳಪಡಿಸುತ್ತೇವೆ. ವ್ಯವಸ್ಥೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಮಾತ್ರ ಇರುವಂತೆ ನೋಡಿಕೊಳ್ಳುತ್ತೇವೆ. ಎಲ್ಲ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ನೇಮಕ ಆಗಬೇಕು. ಇದಕ್ಕಾಗಿ ಪ್ರತಿ ವರ್ಷ ನೇಮಕಾತಿ ಮಾಡುತ್ತೇವೆ. ದೈಹಿಕ ಶಿಕ್ಷಣಕ್ಕೆ ಒತ್ತು ನೀಡುತ್ತೇವೆ.

ಬಿಜೆಪಿ– ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ– ಶಾಸಕ)

ಶಿಕ್ಷಕರ ತರಬೇತಿ, ಪಠ್ಯಕ್ರಮ ರಚನೆ ಸೇರಿದಂತೆ ಆಮೂಲಾಗ್ರ ಬದಲಾವಣೆ ಆಗಬೇಕಿದೆ. ನಮ್ಮ ಸರ್ಕಾರ ಬಂದರೆ ಮಕ್ಕಳನ್ನು ಕೇಂದ್ರೀಕರಿಸಿ ಈ ಕಾರ್ಯಕ್ರಗಳು ರೂಪಿಸುತ್ತೇವೆ.

ಕಾಂಗ್ರೆಸ್‌– ಕಿಮ್ಮನೆ ರತ್ನಾಕರ (ಕಾಂಗ್ರೆಸ್‌– ಶಾಸಕ)

ಬೋಧನಾ ವಿಧಾನ, ಪಠ್ಯಕ್ರಮ, ಶಿಕ್ಷಕರ ಕಾರ್ಯಶೈಲಿಯನ್ನು ಬದಲಿಸಬೇಕಿದೆ. ಗ್ರಾಮ ಪಂಚಾಯ್ತಿಗೊಂದು ಮಾದರಿ ಶಾಲೆಗಳನ್ನು ನಿರ್ಮಿಸಿ, ಅಲ್ಲಿಯೇ ಎಲ್ಲ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು. ವಿಷಯವಾರು ಶಿಕ್ಷಕರ ನೇಮಕದ ಜತೆಗೆ ಕಲೆ, ಸಂಗೀತ ವಿಷಯಗಳ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಇದಕ್ಕೆ ಆದ್ಯತೆ ನೀಡಲಾಗುವುದು.


ಶಿಕ್ಷಣ ತಜ್ಞರ ಪ್ರಕಾರ ತುರ್ತಾಗಿ ಆಗಬೇಕಿರುವ ಕೆಲಸಗಳು
* ಕಾಲೇಜು ಬೋಧಕರಿಗೂ ಬೇಕು ತರಬೇತಿ: ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಬೋಧಕರಿಗೆ ಯಾವುದೇ ನಿರ್ದಿಷ್ಟ ಶಿಕ್ಷಕ ತರಬೇತಿ ಕೋರ್ಸ್‌ನ ಅರ್ಹತೆಯನ್ನು ನಿಗದಿ ಮಾಡಿಲ್ಲದಿರುವುದು ಸರಿಯಲ್ಲ. ಅವರಲ್ಲಿ ವೃತ್ತಿಪರವಾಗಿ ಬೋಧಿಸುವ ಕೌಶಲ ಇರಬೇಕು ಎಂದರೆ ಇಂಥಹ ತರಬೇತಿ ಅತ್ಯಗತ್ಯ. ಪಿಎಚ್‌.ಡಿ ಅಥವಾ ಎಂ.ಫಿಲ್‌ಗಳು ಸಂಶೋಧನಾ ಕೌಶಲ ತಿಳಿಸಿಕೊಡುತ್ತವೆಯೇ ಹೊರತು ಬೋಧನಾ ಕೌಶಲವನ್ನಲ್ಲ. ಹಾಗಾಗಿ ಅವರಿಗೆ ಬೋಧನಾ ಕಲೆಗೆ ಸಂಬಂಧಿಸಿದಂತೆ ಅಲ್ಪಾವಧಿ ಅಥವಾ ಡಿಪ್ಲೊಮಾ ಕೋರ್ಸ್‌ಗಳನ್ನು ಜಾರಿಗೊಳಿಸಿ, ಅದನ್ನು ಕಡ್ಡಾಯಗೊಳಿಸುವುದು ಸೂಕ್ತ.
* ದೈಹಿಕ ಶಿಕ್ಷಣಕ್ಕೆ ಬೇಕು ಆದ್ಯತೆ: ಭವಿಷ್ಯದ ಪೀಳಿಗೆ ದೈಹಿಕ ಮತ್ತು ಆರೋಗ್ಯದ ದೃಷ್ಟಿಯಿಂದ ದೈಹಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಶಾಲೆ, ಕಾಲೇಜು, ವಿ.ವಿ ಹಂತದಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಗೊಳಿಸಬೇಕು. 10ನೇ ತರಗತಿ ವಿದ್ಯಾರ್ಥಿಗಳಿಗೆ 5ರ ಜತೆಗೆ 6ನೇ ವಿಷಯವಾಗಿ ದೈಹಿಕ ಶಿಕ್ಷಣವನ್ನು ಕಡ್ಡಾಯ ಪತ್ರಿಕೆಯಾಗಿ ಅಳವಡಿಸಬೇಕು.
* ಶಿಕ್ಷಕರ ಸಂವಾದಕ್ಕೆ ವೆಬ್‌ಸೈಟ್‌/ಆ್ಯಪ್‌ ಬೇಕು: ತರಗತಿ ಕೊಠಡಿಯಲ್ಲಿ ಉದ್ಭವವಾಗುವ ಹಲವು ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ಕೂಡಲೇ ಕಂಡುಕೊಳ್ಳುವ ಅವಶ್ಯಕತೆ ಇರುತ್ತದೆ. ಆದ್ದರಿಂದ ಪ್ರತಿ ವಿಷಯಗಳಿಗೆ ಸಂಬಂಧಿಸಿದಂತೆ ಸಂಶಯ ಪರಿಹರಿಸಿಕೊಳ್ಳಲು ಪ್ರತ್ಯೇಕವಾದ ವೆಬ್‌ಸೈಟ್‌ ಅಥವಾ ಆ್ಯಪ್‌ ಇದ್ದರೆ ಅನುಕೂಲ. ಇಲ್ಲಿ ಕೇಳಲಾಗುವ ಸಮಸ್ಯೆ, ಪ್ರಶ್ನೆಗಳಿಗೆ ಸಂಪನ್ಮೂಲ ಅಥವಾ ತಜ್ಞರಿಂದ ಉತ್ತರಗಳು ದೊರೆಯುವಂತೆ ಸರ್ಕಾರ ಮಾಡಬೇಕು.
* ಎರಡು ಅಂಗಬೇಕು: 1ರಿಂದ 12ನೇ ತರಗತಿವರೆಗೆ ಒಂದೇ ಆವರಣದಲ್ಲಿ ತರಗತಿ ತೆರೆಯಲು ಸರ್ಕಾರ ಮುಂದಾಗಿದೆ. ಹೀಗಾಗಿ ಶಾಲಾ ಶಿಕ್ಷಣದಲ್ಲಿ ತುರ್ತಾಗಿ ಬೋಧನಾಂಗ ಮತ್ತು ಆಡಳಿತಾಂಗ ಎಂಬ ಎರಡು ಅಂಗಗಳನ್ನು ರೂಪಿಸಬೇಕಾದ ಅಗತ್ಯ ಇದೆ. ಈ ಮೂಲಕ ಶಿಕ್ಷಕರನ್ನು ಶಿಕ್ಷಣೇತರ ಕೆಲಸಗಳಿಂದ ಮುಕ್ತಿಗೊಳಿಸಬೇಕು.
* ಕಾಲಕಾಲಕ್ಕೆ ನೇಮಕಾತಿ ಆಗಬೇಕು. ಹೊಸ ವ್ಯವಸ್ಥೆ ಜಾರಿಗೊಳಿಸುವುದಕ್ಕೂ ಮುನ್ನ ಅದರ ಸಾಧಕ–ಬಾಧಕಗಳ ವಿಸ್ತೃತ ಅಧ್ಯಯನವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT