ಆರ್‌.ಆರ್‌. ನಗರ: ಜೆಡಿಎಸ್‌ ಟಿಕೆಟ್‌ಗೆ ಪೈಪೋಟಿ

7

ಆರ್‌.ಆರ್‌. ನಗರ: ಜೆಡಿಎಸ್‌ ಟಿಕೆಟ್‌ಗೆ ಪೈಪೋಟಿ

Published:
Updated:

ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಪ್ರಜ್ವಲ್‌ ರೇವಣ್ಣ ಸ್ಪರ್ಧಿಸದೇ ಇರುವ ಕಾರಣ ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ಆರಂಭವಾಗಿದೆ.

ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಬಿಎಂಪಿ ಮಾಜಿ ಸದಸ್ಯ ಜಿ.ಎಚ್‌.ರಾಮಚಂದ್ರ ಶುಕ್ರವಾರ ಜೆಡಿಎಸ್‌ಗೆ ಸೇರಲಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಹಗ್ಗಜಗ್ಗಾಟ ನಡೆದಿತ್ತು. ಇಲ್ಲಿ ಶಿಲ್ಪಾ ಗಣೇಶ್‌, ಯುವಮೋರ್ಚಾ ಮುಖಂಡ ಪಿ.ಎಂ. ಮುನಿರಾಜುಗೌಡ, ಜಿ.ಎಚ್‌. ರಾಮಚಂದ್ರ ಪೈಪೋಟಿ ನಡೆಸಿದ್ದರು. ಪಿ.ಎಂ.ಮುನಿರಾಜುಗೌಡ ಅವರಿಗೆ ಮಣೆ ಹಾಕಲಾಗಿತ್ತು.

‘20 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ್ದೇನೆ. ಸತತ ಮೂರನೇ ಸಲ ಟಿಕೆಟ್‌ ಕೈತಪ್ಪಿದೆ. ರಾಜರಾಜೇಶ್ವರಿನಗರದಲ್ಲಿ ಶುಕ್ರವಾರ ನಡೆಯುವ ಜೆಡಿಎಸ್‌ ಸಮಾವೇಶದಲ್ಲಿ ಸೇರ್ಪಡೆಯಾಗುತ್ತೇನೆ’ ಎಂದು ರಾಮಚಂದ್ರ ತಿಳಿಸಿದರು. ‘ನನಗೆ ಅಥವಾ ನಗರಸಭೆಯ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ಅವರಿಗೆ ಟಿಕೆಟ್‌ ಸಿಗುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.

ಬಿಬಿಎಂಪಿ ಸದಸ್ಯೆ ಮಂಜುಳಾ ಅವರ ಪತಿ ನಾರಾಯಣಸ್ವಾಮಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಸಹ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಇದೇ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಕಾರಣಕ್ಕೆ ಜೆಡಿಎಸ್‌ನ ಸ್ಥಳೀಯ ನಾಯಕರು ಒಗ್ಗಟ್ಟು ಪ್ರತಿಪಾದಿಸಿದ್ದರು. ಆದರೆ, ಈ ಬೇಡಿಕೆಯನ್ನು ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿರಸ್ಕರಿಸಿದ್ದರು. ಈ ಚುನಾವಣೆಯಲ್ಲಿ ಪ್ರಜ್ವಲ್‌ ಕಣಕ್ಕೆ ಇಳಿಯುವುದು ಬೇಡ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎರಡು ದಿನಗಳ ಹಿಂದೆ ಪ್ರಕಟಿಸಿದ್ದರು.

ಹನುಮಂತರಾಯಪ್ಪ ಅವರಿಗೆ ಕಣಕ್ಕೆ ಇಳಿಯಲು ಕಾರ್ಯಕರ್ತರು ಒತ್ತಡ ಹೇರಿದ್ದಾರೆ. ಒಕ್ಕಲಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಪಕ್ಷದಿಂದ ಪ್ರಬಲ ಅಭ್ಯರ್ಥಿ ಕಣಕ್ಕಳಿದರೆ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರಿಗೆ ಪ್ರಬಲ ಪೈಪೋಟಿ ನೀಡಬಹುದು ಎಂಬುದು ಜೆಡಿಎಸ್‌ ಕಾರ್ಯಕರ್ತರ ಅಭಿಪ್ರಾಯ. ‘ಕಾಂಗ್ರೆಸ್‌ ಶಾಸಕ ಮುನಿರತ್ನ ಮತ್ತು ಎಚ್‌.ಡಿ.ಕುಮಾರಸ್ವಾಮಿ ನಡುವಿನ ಬಾಂಧವ್ಯ ಉತ್ತಮವಾಗಿದೆ. ಯಾರನ್ನು ಕಣಕ್ಕಿಳಿಸಬಹುದು ಎಂಬುದನ್ನು ಈಗಲೇ ಹೇಳುವುದು ಕಷ್ಟ. ಇಲ್ಲಿ ಒಂದು ರೀತಿ ಫ್ರೆಂಡ್ಲಿ ಫೈಟ್‌ ನಡೆಯುತ್ತದೆ ಅಷ್ಟೇ’ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದರು. ‘ಪ್ರಜ್ವಲ್‌ ಸ್ಪರ್ಧಿಸಿದ್ದರೆ ಗೆಲ್ಲುವ ಅವಕಾಶವಿತ್ತು’ ಎಂದು ಅವರು ಹೇಳಿದರು.

‘ಶುಕ್ರವಾರ ನಡೆಯುವ ಸಮಾವೇಶದಲ್ಲಿ ಅಭ್ಯರ್ಥಿ ಹೆಸರನ್ನು ವರಿಷ್ಠರು ಪ್ರಕಟಿಸಲಿದ್ದಾರೆ. ನೀನೇ ಅಭ್ಯರ್ಥಿಯಾಗಬೇಕು ಎಂದು ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಯಾರಿಗೆ ಟಿಕೆಟ್‌ ಕೊಟ್ಟರೂ ಬೇಸರ ಇಲ್ಲ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ’ ಎಂದು ಆರ್‌. ಪ್ರಕಾಶ್‌ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry