ಭಾನುವಾರ, ಡಿಸೆಂಬರ್ 15, 2019
25 °C

ಕಠುವಾ ಅತ್ಯಾಚಾರ ಪ್ರಕರಣ: ಒತ್ತಡಗಳ ನಡುವೆಯೂ ಪ್ರಕರಣ ಭೇದಿಸಿದ ಕಾಶ್ಮೀರ ಪೊಲೀಸರು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಠುವಾ ಅತ್ಯಾಚಾರ ಪ್ರಕರಣ: ಒತ್ತಡಗಳ ನಡುವೆಯೂ ಪ್ರಕರಣ ಭೇದಿಸಿದ ಕಾಶ್ಮೀರ ಪೊಲೀಸರು

ಶ್ರೀನಗರ: ಪೊಲೀಸ್ ಅಧಿಕಾರಿಯೊಬ್ಬರ ವಿರೋಧ ಮತ್ತು ರಾಜಕೀಯ ಒತ್ತಡಗಳ ನಡುವೆಯೂ ಎಂಟು ವರ್ಷದ ಬಾಲಕಿ ಆಸೀಫಾ ಬಾನು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದಾರೆ.

ದೇಶದಾದ್ಯಂತ ಬಾರಿ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿ ತನಿಖೆ ನಡೆಸಿ ಏಪ್ರಿಲ್‌ 10ರಂದು ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ.

ಆರ್‌.ಕೆ.ಜಲ್ಲಾ ನೇತೃತ್ವದ ಪೋಲೀಸ್‌ ತಂಡ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಒತ್ತಡದ ನಡುವೆಯೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪ ಪಟ್ಟಿಯಲ್ಲಿ ನಾಲ್ವರು ಪೊಲೀಸ್‌ ಅಧಿಕಾರಿಗಳು ಮತ್ತು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರನ್ನು ಹೆಸರಿಸಲಾಗಿದೆ ಎಂದು ಏಷ್ಯಾ ಟೈಮ್ಸ್ ನ್ಯೂಸ್‌ ಪೋರ್ಟಲ್‌ ವರದಿ ಮಾಡಿದೆ. 

ಆರೋಪಿ ಸಾಂಜಿಯ ಪರವಾಗಿ ಜಮ್ಮು ಮತ್ತು ಕಾಶ್ಮೀರದ ಬಿಜೆಪಿಯ ಕೆಲವು ನಾಯಕರು ಪ್ರತಿಭಟನೆ ನಡೆಸಿದ್ದಾರೆ. ತನಿಖಾ ತಂಡದಲ್ಲಿ ಮುಸ್ಲಿಮರಿದ್ದಾರೆ, ಅವರು ಮುಗ್ಧ ಹಿಂದೂಗಳ ಮೇಲೆ ಆರೋಪ ಹೊರೆಸಿ, ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ತಕ್ಷಣವೇ ಸಿಬಿಐಗೆ ವಹಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ’ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

ಹಿಂದೂ ಏಕ್ತಾ ಮಂಚ್‌ ಆರೋಪಿಗಳ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಸಚಿವರಾದ ಚೌದರಿ ಲಾಲ್‌ ಸಿಂಗ್‌ ಮತ್ತು ಚಂದ್ರ ಪ್ರಕಾಶ್‌ ಗಂಗಾ ಅವರು ಆರೋಪಿಗಳ ಪರವಾಗಿ ಏರ್ಪಡಿಸಿದ್ದ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.

ಆರೋಪಿಗಳು, ರಸ್ಸಾನಾ ಬಳಿಯ ಹುಲ್ಲುಗಾವಲಿನಲ್ಲಿ ತನ್ನ ಕುದುರೆಯನ್ನು ಮೇಯಿಸುತ್ತಿದ್ದ ಬಾಲಕಿಯನ್ನು ಜನವರಿ 10ರಂದು ಅಪಹರಿಸಿ ಸಮೀಪದ ಕಾಡಿಗೆ ಕರೆತಂದಿದ್ದರು. ಅಲ್ಲಿ ಆಕೆಗೆ ಬಲವಂತದಿಂದ ನಿದ್ದೆಯ ಮಾತ್ರೆ ನುಂಗಿಸಿದ್ದರು. ನಂತರ ಆಕೆಯನ್ನು ಊರಿನ ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿ ಕೂಡಿ ಹಾಕಲಾಗಿತ್ತು ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.

ಅಲ್ಲಿ ಆಕೆಯ ಮೇಲೆ ಏಳೂ ಆರೋಪಿಗಳು ನಾಲ್ಕು ದಿನ ಸತತ ಅತ್ಯಾಚಾರ ನಡೆಸಿದ್ದರು. ನಿತ್ರಾಣವಾಗಿದ್ದ ಆಕೆಯನ್ನು ಕೊಲ್ಲಲು  ಮುಂದಾಗಿದ್ದರು. ಬಾಲಕಿ ಮೇಲೆ ಕೊನೆಯ ಬಾರಿ ಅತ್ಯಾಚಾರ ನಡೆಸಿದ್ದ ಪೊಲೀಸ್ ಕಾನ್‌ಸ್ಟೆಬಲ್ ಕತ್ತು ಹಿಸುಕಿ ಆಕೆಯನ್ನು  ಕೊಂದಿದ್ದನು ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.

ಪ್ರತಿಕ್ರಿಯಿಸಿ (+)