ಅಲ್ಪಸಂಖ್ಯಾತರಿಗೆ ಆದ್ಯತೆ ಅನಿವಾರ್ಯ

7
ಬಳ್ಳಾರಿ ನಗರ ಕ್ಷೇತ್ರಕ್ಕೆ ಇಕ್ಬಾಲ್‌ ಅಹ್ಮದ್‌ ಆಯ್ಕೆ: ಕುಮಾರಸ್ವಾಮಿ ಸಮರ್ಥನೆ

ಅಲ್ಪಸಂಖ್ಯಾತರಿಗೆ ಆದ್ಯತೆ ಅನಿವಾರ್ಯ

Published:
Updated:

ಬಳ್ಳಾರಿ: ನಗರ ಕ್ಷೇತ್ರದಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಇಲ್ಲಿ ಅದೇ ಸಮುದಾಯದ ಇಕ್ಬಾಲ್ ಅಹ್ಮದ್‌ ಅವರಿಗೆ ಟಿಕೆಟ್‌ ಘೋಷಿಸುವುದು ಅನಿವಾರ್ಯವಾಯಿತು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಇತರೆ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಿವೆ.  ಅಲ್ಲಿ ಅವರು ಸ್ಪರ್ಧಿಸುವುದು ಸಾಧ್ಯವಿಲ್ಲ. ಹೀಗಾಗಿ ನಗರ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್‌ ಘೋಷಿಸಬೇಕಾಯಿತು’ ಎಂದರು.

ಲಘು ಮಾತು ಸಲ್ಲದು: ‘ಇಕ್ಬಾಲ್‌ ಅಹ್ಮದ್‌ ಅವರಿಗೆ ಟಿಕೆಟ್‌ ಘೋಷಿಸಿದ್ದಕ್ಕೆ ಕುಡತಿನಿ ಶ್ರೀನಿವಾಸ್‌ ಅಸಮಾಧಾನಗೊಂಡು ಗುರುವಾರ ವಿಕಾಸ ಪರ್ವ ಕಾರ್ಯ

ಕ್ರಮದಿಂದ ನಿರ್ಗಮಿಸಿದರು. ಆಗ ಸುದ್ದಿವಾಹಿನಿಗಳೊಂದಿಗೆ ಮಾತನಾಡಿದ ಅವರು, ಹಣಕ್ಕಾಗಿ ಟಿಕೆಟ್‌ ಮಾರಿಕೊಳ್ಳಲಾಗಿದೆ ಎಂದು ಆರೋಪಿಸಿದ್ದು ಸರಿಯಲ್ಲ’ ಎಂದರು.

‘ಚಿತ್ರದುರ್ಗದಲ್ಲಿ ಪಕ್ಷದ ನಿಷ್ಠಾವಂತರಾದ ಯಶೋದರ ಎಂಬುವವರಿಗೆ ಟಿಕೆಟ್‌ ನೀಡಲಾಗುವುದು. ಆದರೆ ಅವರ ಬಳಿ ನಯಾಪೈಸೆ ಇಲ್ಲ. ಎಲ್ಲ ವೆಚ್ಚವನ್ನು ನಾನೇ ಭರಿಸಲು ನಿರ್ಧರಿಸಿರುವೆ. ಮಳವಳ್ಳಿಯಲ್ಲಿ ಡಾ.ಅಂದಾನಿ ಅವರ ಚುನಾವಣಾ ವೆಚ್ಚವನ್ನೂ ನಾನೇ ಭರಿಸುವೆ. ಹಣಕ್ಕಾಗಿ ಚುನಾವಣಾ ರಾಜಕೀಯ ಮಾಡುವುದಾಗಿದ್ದರೆ ಈ ಇಬ್ಬರಿಗೂ ಟಿಕೆಟ್‌ ನೀಡುತ್ತಿರಲಿಲ್ಲ’ ಎಂದು ಪ್ರತಿಪಾದಿಸಿದರು.

‘ಟಿಕೆಟ್‌ ಖಚಿತವಿಲ್ಲದಿದ್ದರೇ ಪ್ರಚಾರ ಮಾಡಬಾರದು ಎಂದು ಶಾಸಕ ನಾಡಗೌಡರ ಮೂಲಕ ಶ್ರೀನಿವಾಸ್‌ ಅವರಿಗೆ ತಿಳಿಸಲಾಗಿತ್ತು. ಆದರೂ ಅವರು ಪ್ರಚಾರ ನಡೆಸಿದರೆ ನಮ್ಮ ತಪ್ಪೇನು? ಇಪ್ಪತ್ತು ವರ್ಷ ಪಕ್ಷದಲ್ಲಿದ್ದರೂ ಟಿಕೆಟ್‌ ಕೊಡಲಿಲ್ಲ ಎಂದು ಶ್ರೀನಿವಾಸ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿನ ಅವಧಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿಸಿದ್ದಾಗ ಅವರು ಹೇಗೆ ಪಕ್ಷ ಸಂಘಟನೆ ಮಾಡಿದ್ದರು ಎಂಬುದು ನನಗೆ ಗೊತ್ತಿದೆ’ ಎಂದರು.

ಶಾಸಕ ಟಿ.ಎಸ್‌.ಶರವಣ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ, ಮುಖಂಡರಾದ ಪ್ರತಾಪರೆಡ್ಡಿ, ಕೂಡ್ಲಿಗಿ ಅಭ್ಯರ್ಥಿ ಎನ್‌.ಟಿ.ಬೊಮ್ಮಣ್ಣ, ನಗರ ಕ್ಷೇತ್ರದ ಅಭ್ಯರ್ಥಿ ಇಕ್ಬಾಲ್‌ ಅಹ್ಮದ್ ವೇದಿಕೆಯಲ್ಲಿ ಇದ್ದರು.

‘ದುಡ್ಡು ಕೊಟ್ಟರೆ ಮುಂದಿನ ಸಾಲು’

ಬಳ್ಳಾರಿ: ‘ದುಡ್ಡು ಕೊಟ್ಟವರಿಗೆ ವೇದಿಕೆಯ ಮುಂದಿನ ಸಾಲು. ಇಲ್ಲದವರು ನಿಂತುಕೊಳ್ಳಬೇಕು. ಇದು ಕುಮಾರಸ್ವಾಮಿ ಅವರ ರಾಜಕಾರಣ’ ಎಂದು ನಗರ ಕ್ಷೇತ್ರದ ಜೆಡಿಎಸ್ ಟಿಕೆಟ್‌ ಆಕಾಂಕ್ಷಿ ಕುಡತಿನಿ ಶ್ರೀನಿವಾಸ್ ಆರೋಪಿಸಿದ್ದರು.

ಗುರುವಾರ ರಾತ್ರಿ ವಿಕಾಸಪರ್ವ ಕಾರ್ಯಕ್ರಮದಲ್ಲಿ ಇಕ್ಬಾಲ್‌ ಅಹ್ಮದ್‌ ಅವರಿಗೆ ಟಿಕೆಟ್‌ ಘೋಷಿಸುತ್ತಿದ್ದಂತೆ ವೇದಿಕೆಯಿಂದ ನಿರ್ಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಇಪ್ಪತ್ತು ವರ್ಷದಿಂದ ಪಕ್ಷದಲ್ಲಿರುವೆ. ನಗರ ಕ್ಷೇತ್ರದಿಂದ ಟಿಕೆಟ್ ಕೊಡುವುದಾಗಿ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆಶ್ವಾಸನೆ ನೀಡಿದ್ದರು. ಹೀಗಾಗಿಯೇ ಇಪ್ಪತ್ತು ದಿನದಿಂದ ಪ್ರಚಾರ ನಡೆಸುತ್ತಿದ್ದೆ. ಈಗ ಬೇರೆಯವರಿಗೆ ಟಿಕೆಟ್‌ ಘೋಷಿರುವುದು ನೋವು ತಂದಿದೆ. ಪ್ರಚಾರ ಸಂಕಲ್ಪ ಮುರಿದು ಮನೆಗೆ ಹೋಗುತ್ತಿದ್ದೇನೆ’ ಎಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry