ಗುರುವಾರ , ಆಗಸ್ಟ್ 13, 2020
21 °C
l ಸಂಸತ್‌ ಕಲಾಪಕ್ಕೆ ಕಾಂಗ್ರೆಸ್‌ ಸದಸ್ಯರ ಅಡ್ಡಿ– ಆರೋಪ- -l ಬಿಜೆಪಿಯ 60ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿ

ಸಂಸದ ಭಗವಂತ ಖೂಬಾ ಉಪವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸದ ಭಗವಂತ ಖೂಬಾ ಉಪವಾಸ

ಬೀದರ್‌: ಸಂಸತ್ತಿನಲ್ಲಿ ಕಾಂಗ್ರೆಸ್‌ ಸದಸ್ಯರು ಕೋಲಾಹಲ ಸೃಷ್ಟಿಸಿ 23 ದಿನಗಳ ಕಾಲ ಸದನದ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿ ಸಂಸದ ಭಗವಂತ ಖೂಬಾ ಹಾಗೂ ಬಿಜೆಪಿ ಮುಖಂಡರು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಒಂದು ದಿನ ಉಪವಾಸ ಸತ್ಯಾಗ್ರಹ ಮಾಡಿದರು.

ಸಂಸದರು ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸತ್ಯಾಗ್ರಹ ಆರಂಭಿಸಿದರು. ನೆತ್ತಿ ಸುಡುವ ಬಿಸಿಲು ಇದ್ದ ಕಾರಣ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಟೆಂಟ್‌ ಹಾಕಲಾಗಿತ್ತು. ಟೆಂಟ್‌ ನೆರಳಲ್ಲಿ ಕುಳಿತು ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್‌ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದ ಹಿರಿಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

‘ಯಾವುದೇ ಸಮಸ್ಯೆಗಳು ಉದ್ಭವವಾದಾಗ ಚರ್ಚೆಯ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಆದರೆ, ಸಂಸತ್ತಿನಲ್ಲಿ ಕಾಂಗ್ರೆಸ್‌ ಸದಸ್ಯರು ಮುಕ್ತ ಚರ್ಚೆಗೆ ಮುಂದೆ ಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ‘ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ದೇಶದ ಪರಿಸ್ಥಿತಿ ಗೊತ್ತಿಲ್ಲ. ಕಾಂಗ್ರೆಸ್‌ನವರು ಭೂಮಿ ಕೆಳಗೆ, ಭೂಮಿ ಮೇಲೆ ಹಾಗೂ ಆಕಾಶದಲ್ಲಿದ್ದರೂ ಹಣ ಪಡೆಯುವ ಪ್ರವೃತ್ತಿವುಳ್ಳವರಾಗಿದ್ದಾರೆ. ಕಾಂಗ್ರೆಸ್‌ ಅಧಿಕಾರ ಅವಧಿಯಲ್ಲಿ ನಡೆದ ಹಗರಣಗಳೇ ಇದಕ್ಕೆ ಸಾಕ್ಷಿಯಾಗಿವೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್‌ ಠಾಕೂರ್ ಮಾತನಾಡಿ, ‘ಕಾಂಗ್ರೆಸ್‌ ಸ್ವಾತಂತ್ರ್ಯ ಬಂದಾಗಿನಿಂದಲೂ ದ್ವಿಮುಖ ನೀತಿಯನ್ನು ಅನುಸರಿಸುತ್ತ ಬಂದಿದೆ. ಇದರಿಂದ ದೇಶದ ಜನ ತೊಂದರೆ ಅನುಭವಿಸುತ್ತ ಬಂದಿದ್ದಾರೆ’ ಎಂದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಲವು ಸಮಸ್ಯೆಗಳು ನಿವಾರಣೆಯಾಗಿವೆ. ದೇಶ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಇದನ್ನು ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಆರೋಪಿಸಿದರು.

‘ಸದನದಲ್ಲಿ ಚರ್ಚೆ ನಡೆಸುವ ಮೂಲಕ ದೇಶದ ಸಮಸ್ಯೆಗಳ ನಿವಾರಣೆಗೆ ಕಾಂಗ್ರೆಸ್‌ ಸಹಕಾರ ನೀಡಬೇಕಿತ್ತು. ಆದರೆ, ವಿನಾಕಾರಣ ಗದ್ದಲ ಎಬ್ಬಿಸಿ ಸದನ ನಡೆಯದಂತೆ ಮಾಡಿದೆ. ಇದರಿಂದ ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದೆ. ದೇಶದ ಜನ ಕಾಂಗ್ರೆಸ್‌ ಅನ್ನು ಕ್ಷಮಿಸುವುದಿಲ್ಲ’ ಎಂದು ಹೇಳಿದರು.

‘ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಬಿಜೆಪಿ ಸಂಕಲ್ಪ ಮಾಡಿದೆ. ಇದು ಕರ್ನಾಟಕದಿಂದ ಆರಂಭವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡರಾದ ಸಂಜಯ ಖೇಣಿ, ಡಿ.ಕೆ.ಸಿದ್ರಾಮ, ಬಾಬು ವಾಲಿ, ಬಾಬುರಾವ್ ಮದಕಟ್ಟಿ, ರೇವಣಸಿದ್ದಪ್ಪ ಜಲಾದೆ, ದತ್ತಾತ್ರೇಯ, ಮೊಂಟಿ, ಪದ್ಮಾಕರ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಲಕ್ಷ್ಮಿ ದೇಶಪಾಂಡೆ ಸೇರಿದಂತೆ ಇತರರು ಇದ್ದರು.

**

ಸಂಸತ್ತಿನಲ್ಲಿ ಕಾಂಗ್ರೆಸ್‌ ಸದಸ್ಯರು ಅಧಿವೇಶನಕ್ಕೆ ಅಡ್ಡಿ ಪಡಿಸಿದ್ದನ್ನು ಖಂಡಿಸಿ ಬಿಜೆಪಿ ಸದಸ್ಯರು ಭತ್ಯೆ ಪಡೆದಿಲ್ಲ. ಕಾಂಗ್ರೆಸ್‌ ಸದಸ್ಯರು ಒಂದು ರೂಪಾಯಿಯನ್ನೂ ಬಿಟ್ಟಿಲ್ಲ –  ಪ್ರಕಾಶ ಖಂಡ್ರೆ, ಮಾಜಿ ಶಾಸಕ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.