ಶುಕ್ರವಾರ, ಅಕ್ಟೋಬರ್ 7, 2022
25 °C

ವಿನೋದ್‌ ಖನ್ನಾಗೆ ದಾದಾಸಾಹೇಬ್‌ ಫಾಲ್ಕೆ, ಶ್ರೀದೇವಿಗೆ ಅತ್ಯುತ್ತಮ ನಟಿ ಮರಣೋತ್ತರ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

ವಿನೋದ್‌ ಖನ್ನಾಗೆ ದಾದಾಸಾಹೇಬ್‌ ಫಾಲ್ಕೆ, ಶ್ರೀದೇವಿಗೆ ಅತ್ಯುತ್ತಮ ನಟಿ ಮರಣೋತ್ತರ ಪ್ರಶಸ್ತಿ

ನವದೆಹಲಿ: 65ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಿದ್ದು, ನಟ ವಿನೋದ್‌ ಖನ್ನಾ ಹಾಗೂ ನಟಿ ಶ್ರೀದೇವಿ ಅವರಿಗೆ ಮರಣೋತ್ತರವಾಗಿ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಗಿದೆ.

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅಭಿನಯ ತಾರೆ ವಿನೋದ್ ಖನ್ನಾ ಅವರಿಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು, ಅತ್ಯುತ್ತಮ ಅಭಿನಯಕ್ಕಾಗಿ ಈಚೆಗಷ್ಟೆ ನಿಧನರಾದ ಅಭಿನೇತ್ರಿ ಶ್ರೀದೇವಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಶ್ರೀದೇವಿ ಅವರ ಹೆಸರನ್ನು ಪ್ರಕಟಿಸಿದ ಮಂಡಳಿಯ ತೀರ್ಪುಗಾರ ಶೇಖರ್‌ ಕಪೂರ್‌, ಈ ಪ್ರಶಸ್ತಿಗೆ ಅರ್ಹ ವ್ಯಕ್ತಿ ಇವರು ಎಂದು ಹೇಳಿದ್ದಾರೆ.

ಶ್ರೀದೇವಿ ಅವರು 50 ವರ್ಷಗಳ ಜೀವನದುದ್ದಕ್ಕೂ ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಮಾಮ್‌’ನಲ್ಲಿ ತನ್ನ ಮಗಳಿಗೆ ನ್ಯಾಯಕ್ಕಾಗಿ ಕೋಪಗೊಂಡ ತಾಯಿ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ತೋರಿ ಗುರುತಿಸಿಕೊಂಡಿದ್ದಾರೆ.

ಶ್ರೀದೇವಿ ಇದೇ ಫೆಬ್ರುವರಿಯಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಅವರ ಸಾವಿನ ಸುದ್ದಿ ಇಡೀ ಚಿತ್ರರಂಗ ಹಾಗೂ ಅವರ ಅಭಿಮಾನಿಗಳಿಗೆ ಶಾಕ್‌ ನೀಡಿತ್ತು.

ಶ್ರೀದೇವಿ ಅವರಿಗೆ ಈ ಪ್ರಶಸ್ತಿ ಲಭಿಸಿರುವುದನ್ನು ಕೇಳಿದ ಪತಿ ಬೋನಿ ಕಪೂರ್‌ ಭಾವುಕರಾಗಿದ್ದಾರೆ. ‘ಅಭಿನಂದನೆಗಳು, ಈ ಪ್ರಶಸ್ತಿ ಮೂಲಕ ಅವರು ಇಂದು ಇಲ್ಲಿದ್ದಾರೆ ಎಂದು ನಾನು ಬಯಸುತ್ತೇನೆ’ ಎಂದು ಬೋನಿ ಕಪೂರ್‌ ಹೇಳಿದ್ದಾರೆ.

ಖನ್ನಾಗೆ ಅತ್ಯುತ್ತಮ ಗೌರವ

70 ಮತ್ತು 80ರ ದಶಕದಲ್ಲಿ ಹಿಂದಿ ಚಲನಚಿತ್ರರಂಗದಲ್ಲಿ ಅತಿದೊಡ್ಡ ತಾರೆ ಎನಿಸಿಕೊಂಡಿದ್ದ ಖನ್ನಾ ಅವರು ಭಾರತೀಯ ಸಿನಿಮಾದ ಅತ್ಯುತ್ತಮ ಗೌರವವಾದ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಾಯಶಃ ಪೃಥ್ವಿರಾಜ್‌ ಕಪೂರ್‌ ಅವರ ನಂತರ ಮರಣೋತ್ತರವಾಗಿ ಈ ಗೌರವಕ್ಕೆ ಹೆಸರಿಸಲ್ಪಟ್ಟ ಏಕೈಕ ನಟ ಖನ್ನಾ ಆಗಿದ್ದಾರೆ.

* ಇವನ್ನೂ ಓದಿ...

65ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಕನ್ನಡದ 'ಹೆಬ್ಬೆಟ್ಟು ರಾಮಕ್ಕ’ ಅತ್ಯುತ್ತಮ ಚಿತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.