‘ಎಲೆಮರೆಯ ಸಾಧಕರನ್ನು ಗುರುತಿಸಿ ಗೌರವಿಸಬೇಕು’

7
‘ಕಸಾಪ ನಡೆ ಸಾಧಕರ ಕಡೆ’ ಕಾರ್ಯಕ್ರಮದಲ್ಲಿ ಕೈವಾರ ಶ್ರೀನಿವಾಸ್ ಅಭಿಪ್ರಾಯ

‘ಎಲೆಮರೆಯ ಸಾಧಕರನ್ನು ಗುರುತಿಸಿ ಗೌರವಿಸಬೇಕು’

Published:
Updated:

ಚಿಂತಾಮಣಿ: ನಿಸ್ವಾರ್ಥದಿಂದ ಎಲೆಮರೆ ಕಾಯಿಯಂತೆ ಸಮಾಜಸೇವೆ ಮಾಡುತ್ತಿರುವವರನ್ನು ಗುರುತಿಸಿ ಸನ್ಮಾನಿಸುವುದು ಉತ್ತಮ ಬೆಳವಣಿಗೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್‌ ಅಭಿಪ್ರಾಯಪಟ್ಟರು.

ಪರಿಷತ್ತಿನ ತಾಲ್ಲೂಕು ಘಟಕವು ಗುರುವಾರ ಹಮ್ಮಿಕೊಂಡಿದ್ದ ‘ಕಸಾಪ ನಡೆ ಸಾಧಕರ ಕಡೆ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದ ಎನ್‌.ಆರ್‌.ಬಡಾವಣೆಯ ನಿವಾಸಿ ಪ್ರಭಾವತಕ್ಕ 30 ವರ್ಷಗಳಿಂದ ನಿತ್ಯ ಮಕ್ಕಳಿಗೆ, ಮಹಿಳೆಯರಿಗೆ ಭಗವದ್ಗೀತೆ, ಲಲಿತ ಸಹಸ್ರನಾಮ, ಗಾಯತ್ರಿ ಮಂತ್ರ, ವಿಷ್ಣು ಸಹಸ್ರನಾಮಗಳನ್ನು ಉಚಿತವಾಗಿ ಹೇಳಿಕೊಡುತ್ತಿದ್ದಾರೆ. ಅವರ ಮನೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

‘ಪ್ರತಿವರ್ಷ ಹೋಮ, ಹವನ, ಕೃಷ್ಣಜನ್ಮಾಷ್ಟಮಿ, ಏಕಾದಶಿ ಸೇರಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಮನೆಯಲ್ಲಿಯೇ ವಿಶೇಷವಾಗಿ ಆಚರಿಸಿ ಮಹಿಳೆಯರನ್ನು ಗೌರವಿಸುತ್ತಾರೆ. ಇಂತಹ ಮಹಿಳೆಯನ್ನು ಕಸಾಪ ಗೌರವಿಸುತ್ತಿರುವುದು ಉತ್ತಮ ಸಂಪ್ರದಾಯವಾಗಿದೆ’ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಕಾಗತಿ ವೆಂಕಟರತ್ನಂ ಮಾತನಾಡಿ, ಕೇವಲ ಪ್ರಚಾರಕ್ಕಾಗಿ ಅಥವಾ ಸ್ವಾರ್ಥಕ್ಕಾಗಿ ಸಮಾಜಸೇವೆ ಮಾಡುವುದರಿಂದ ಪ್ರಯೋಜನ ಇಲ್ಲ. ಆಸೆ, ಆಕಾಂಕ್ಷೆಗಳು ಇಲ್ಲದೆ ಮಹಿಳೆಯೊಬ್ಬರು ತಮ್ಮ ಸ್ವಂತ ಖರ್ಚಿನಿಂದ ಇಂತಹ ಸೇವೆ ಮಾಡುತ್ತಿರುವುದು ಅನನ್ಯವಾದುದು ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮು.ಪಾಪಣ್ಣ ಮಾತನಾಡಿ, ಪ್ರಭಾವತಕ್ಕ ಅಂತಹವರನ್ನು ಸನ್ಮಾನಿಸುವ ಅವಕಾಶ ದೊರೆತಿರುವುದು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪುಣ್ಯ ಎಂದು ಅವರು ಹೇಳಿದರು.

ಸನ್ಮಾನ ಸ್ವೀಕರಿಸಿದ ಪ್ರಭಾವತಕ್ಕ, ‘ಇದರಲ್ಲಿ ನನ್ನ ಪಾತ್ರವಿಲ್ಲ. ಭಗವಂತ ನನ್ನ ಮುಖಾಂತರ ಈ ಸೇವೆ ಮಾಡಿಸುತ್ತಿದ್ದಾರೆ. ನನ್ನ ಸೇವೆ ಗುರುತಿಸಿ ಇಷ್ಟೊಂದು ಜನ ಸೇರಿರುವುದನ್ನು ಕಂಡು ಆಶ್ಚರ್ಯವಾಗುತ್ತಿದೆ’ ಎಂದು ನುಡಿದರು.

ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಶಿವರಾಂ ಮಾತನಾಡಿದರು. ಶಶಿಕಲಾ ಪ್ರಸಾದ್‌, ಸ್ಮಿತವಾಣಿ ಸೀತಮ್ಮ, ಸ್ವರ್ಣಗೌರಿ, ರುಕ್ಮಣಿಯಮ್ಮ, ಮಂಜುಳಾ ಕಲ್ಯಾಣಕುಮಾರ್‌, ಬಾಲಾಜಿ, ಶ್ರೀನಿವಾಸರೆಡ್ಡಿ, ರವೀಂದ್ರ, ಜೈನ್‌ ಮಂಜುನಾಥ್‌, ಕಲ್ಯಾಣಕುಮಾರ್‌, ಗುರುಪ್ರಸಾದ್‌, ನಂಜುಂಡಪ್ಪ ಕವನ ವಾಚಿಸಿದರು.

ಮುಳ್ಳಹಳ್ಳಿ ನಂಜುಂಡೇಗೌಡ, ಗಿರೀಶ್‌, ಪೂಜಾರಿ ಜನಾರ್ದನ್‌, ಪ್ರಸಾದ್‌, ಮುನಿಕೃಷ್ಣ, ಸಾರಿಗೆ ನಿಗಮದ ಶ್ರೀನಿವಾಸರೆಡ್ಡಿ, ಶಂಕರರೆಡ್ಡಿ, ಕರವೇ ನಾಗರಾಜ್‌, ಸರಿತಾ, ಗಾಯತ್ರಿ, ಅಶ್ವತ್ಥಮ್ಮ, ರೇಖಾ, ಸುವರ್ಣ, ರಾಧಾ, ಪದ್ಮಾ, ಲಕ್ಷ್ಮಿದೇವಮ್ಮ, ಅರ್ಚನಾ, ರತ್ನಮ್ಮ, ನಿರ್ಮಲಾ, ಲಕ್ಷ್ಮಿ, ರಂಗಮ್ಮ ಸುಮಿತ್ರಮ್ಮ, ಮಂಜಮ್ಮ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry