ಮಂಗಳವಾರ, ಆಗಸ್ಟ್ 4, 2020
26 °C
ಚಳ್ಳಕೆರೆ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಆರೋಪ

ಖಜಾನೆ ಹಣ ದುರ್ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಜಾನೆ ಹಣ ದುರ್ಬಳಕೆ

ಚಳ್ಳಕೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಖಜಾನೆಯ ಹಣವನ್ನು ದುರ್ಬಳಕೆ ಮಾಡುವುದರಲ್ಲಿಯೇ ಐದು ವರ್ಷ ಕಳೆದಿದೆ ಎಂದು ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಇಲ್ಲಿನ ಬಿಸಿನೀರು ಮುದ್ದಪ್ಪ ಪ್ರೌಢಶಾಲೆ ಆವರಣದಲ್ಲಿ ಜೆಡಿಎಸ್ ತಾಲ್ಲೂಕು ಘಟಕ ಗುರುವಾರ ಹಮ್ಮಿಕೊಂಡಿದ್ದ ‘ಕುಮಾರ ಪರ್ವ’ ಮತ್ತು ಪಕ್ಷದ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ₹ 1.48 ಲಕ್ಷ ಕೋಟಿ ಸಾಲ ಮಾಡಿದೆ. ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ಸಾಲ ಮಾಡಿದ ಸರ್ಕಾರ ಇದಾಗಿದೆ. ಇದೇ ಹಣದಲ್ಲಿ ರಾಜ್ಯದ ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಅವಕಾಶವಿತ್ತು. ಆ ಕೆಲಸವನ್ನು ಅದು ಮಾಡಲಿಲ್ಲ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಹಣ ನೀರಿನಂತೆ ಪೋಲಾಗಿದೆ. ಸಹಕಾರ ಸಂಘಗಳಲ್ಲಿರುವ ರೈತರ ₹ 50 ಸಾವಿರ ಸಾಲಮನ್ನಾ ಬರಿ ಹೇಳಿಕೆಯಾಗಿಯೇ ಉಳಿದಿದೆ, ಹೊರತು ಅದು ಕಾರ್ಯಗತವಾಗಿಲ್ಲ. ಈ ಬಗ್ಗೆ ರೈತರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಾತನಾಡಿ, ‘ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ, ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ. ಈ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಆಡಳಿತ ಪಕ್ಷ ಕಮಿಷನ್ ದಂಧೆಯಲ್ಲಿ ತೊಡಗಿದೆ. ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ’ ಎಂದು ದೂರಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಟಿ.ಮುತ್ತುರಾಜ್ ಮಾತನಾಡಿದರು.

ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ಚಿತ್ರದುರ್ಗ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ (ಪಪ್ಪಿ), ವಿಧಾನ ಪರಿಷತ್ ಸದಸ್ಯರಾದ ಚೌಡರೆಡ್ಡಿ, ಟಿ.ಎ. ಸರವಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಕವಿತಾ ರಾಮಣ್ಣ, ಮಾಜಿ ಉಪಾಧ್ಯಕ್ಷೆ ಸುವರ್ಣಮ್ಮ ವೀರೇಂದ್ರಪ್ಪ, ನಗರಸಭೆ ಸದಸ್ಯರಾದ ವಿ.ವೈ.ಪ್ರಮೋದ್, ಟಿ.ವಿಜಯ್ ಕುಮಾರ್, ಮುಖಂಡರಾದ ಮೀರಾಸಾಬಿಹಳ್ಳಿ ಭೀಮಣ್ಣ, ಎಚ್.ಆನಂದಪ್ಪ, ಟಿ.ಕರಣ್‌ರಾಜ್, ಕೆಜಿಎನ್ ಮುಜೀಬುಲ್ಲಾ, ಎಂ.ಅನಾಸ್, ಟಿ.ಜೆ.ತಿಪ್ಪೇಸ್ವಾಮಿ, ಹೊಸಮನೆ ಪ್ರಭು, ಅಬ್ದುಲ್ ಖಾದರ್ ಜಿಲಾನ್ ಇದ್ದರು.

ಚಳ್ಳಕೆರೆಗೆ ಭರವಸೆಗಳ ಮಹಾಪೂರ

ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ ತಾಲ್ಲೂಕಿನ ಎಲ್ಲಾ 51 ಕೆರೆಗಳಿಗೆ ನೀರನ್ನು ಹರಿಸಲಾಗುತ್ತದೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು. ಚಳ್ಳಕೆರೆ ನಗರ ಅನೇಕ ದಶಕಗಳ ಕಾಲ ಆಯಿಲ್ ಸಿಟಿ ಎಂಬ ಖ್ಯಾತಿಗೆ ಒಳಗಾಗಿತ್ತು. ಆದರೆ, ಕಳೆದ ಹತ್ತು ವರ್ಷಗಳಿಂದ ಎಣ್ಣೆ ಮಿಲ್‌ಗಳು ನಷ್ಟಕ್ಕೆ ಒಳಗಾಗಿವೆ. ಅದಕ್ಕೆ ತಾಲ್ಲೂಕಿನಲ್ಲಿ ಆವರಿಸಿರುವ ನಿರಂತರ ಬರಗಾಲ ಕಾರಣ. ಆದ್ದರಿಂದ ಅವುಗಳ ಪುನಶ್ಚೇತನಕ್ಕೆ ವಿಶೇಷ ಯೋಜನೆ ರೂಪಿಸಲಾಗುವುದು. ಜತೆಗೆ ಶೇಂಗಾ, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳಿಗೆ ಪ್ರೋತ್ಸಾಹ ಮತ್ತು ಸಹಾಯ ಧನ ನೀಡುವ ಮೂಲಕ ರೈತರ ಭವಿಷ್ಯ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೊಳಕಾಲ್ಮುರು ಮತ್ತು ಚಳ್ಳಕೆರೆಯಲ್ಲಿ ನಿರ್ಮಾಣವಾಗಿರುವ ಸೋಲಾರ್ ಪಾರ್ಕ್‌ಗಳಿಗೆ ಹೊರ ದೇಶಗಳಿಂದ ಕಚ್ಚಾ ವಸ್ತುಗಳನ್ನು ತರಿಸಲಾಗುತ್ತಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ಥಳೀಯವಾಗಿ ಸೋಲಾರ್‌ಗೆ ಬಳಸುವ ಕಚ್ಚಾ ವಸ್ತುಗಳ ಕಾರ್ಖಾನೆಗಳನ್ನು ಸ್ಥಾಪಿಸಲಾಗುತ್ತದೆ. ಈ ಯೋಜನೆಯಿಂದ ಇಲ್ಲಿನ 4 ಸಾವಿರಕ್ಕೂ ಹೆಚ್ಚು ಯುವಕ– ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಕುಮಾರಸ್ವಾಮಿ ಹೇಳಿದ್ದು...

4ರಾಜ್ಯದಲ್ಲಿ 3,700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ. 4ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ 51 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲಾಗುವುದು. 4ಜೆಡಿಎಸ್‍ನಿಂದ ಮಾತ್ರ ರಾಜ್ಯದ ವಿಕಾಸ. ರೈತರ ಪರ ಆಡಳಿತ ನೀಡಲು ಜೆಡಿಎಸ್‌ ಸದಾ ಸಿದ್ಧ.

ಉತ್ಸಾಹ ತುಂಬಿದ ಎಚ್‌ಡಿಕೆ

ಸಮಾವೇಶಕ್ಕೆ ಕುಮಾರಸ್ವಾಮಿ ಬರುತ್ತಿದ್ದಂತೆ ಅಭಿಮಾನಿಗಳು, ಕಾರ್ಯಕರ್ತರು ಶಿಳ್ಳೆ, ಕೇಕೆ, ಚಪ್ಪಾಳೆಗಳ ಮೂಲಕ ಸ್ವಾಗತಿಸಿದರು. ಬೆಳಿಗ್ಗೆಯಿಂದಲೇ ನೂರಾರು ಕಾರ್ಯಕರ್ತರು ಗುಂಪು, ಗುಂಪಾಗಿ ಸಮಾವೇಶಕ್ಕೆ ಬಂದರು. 20 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. 40 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದು, ಪಕ್ಷದ ಮುಖಂಡರಲ್ಲಿ ಉತ್ಸಾಹ ತಂದಿತು. ಕೆಲ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು.

**

ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತ, ಹಿಂದುಳಿದ ಸೇರಿ ಎಲ್ಲ ವರ್ಗಕ್ಕೂ ಅನುಕೂಲವಾಗುವಂಥ ಯೋಜನೆಗಳನ್ನು ಜಾರಿಗೊಳಿಸಿ, ಅನುಷ್ಠಾನಕ್ಕೆ ತರಲಾಗುವುದು – ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ. 

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.