ಮದ್ಯ ವಹಿವಾಟಿನ ಮೇಲೆ ಹದ್ದಿನ ಕಣ್ಣು

7
ಡಾಬಾಗಳಲ್ಲಿ ಕುಸಿದ ವ್ಯಾಪಾರ, ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳಲ್ಲಿ ಹೆಚ್ಚಿದ ವಹಿವಾಟು

ಮದ್ಯ ವಹಿವಾಟಿನ ಮೇಲೆ ಹದ್ದಿನ ಕಣ್ಣು

Published:
Updated:

ದಾವಣಗೆರೆ: ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮದ್ಯದ ವಹಿವಾಟಿನ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಜಿಲ್ಲೆಯಲ್ಲಿ ಸ್ಥಾಪಿಸಿರುವ 47 ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಯೂ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಇದರಿಂದಾಗಿ ಮದ್ಯ ಅಕ್ರಮ ಸಾಗಣೆಗೆ ತಡೆಬಿದ್ದಿದೆ.

ಹಳ್ಳಿಗಳಲ್ಲಿ ದಿನಸಿ ಅಂಗಡಿ, ಕ್ಯಾಂಟೀನ್‌, ಗೂಡಂಗಡಿಗಳಲ್ಲೂ ನಡೆಯುತ್ತಿದ್ದ ಮದ್ಯದ ವ್ಯವಹಾರಕ್ಕೆ ಬಿಸಿ ಮುಟ್ಟಿದೆ. ಡಾಬಾಗಳಲ್ಲೂ ‘ಎಣ್ಣೆ ಮಾರಾಟ’ಕ್ಕೆ ಬ್ರೇಕ್‌ ಬಿದ್ದಿದೆ.

ಹೆದ್ದಾರಿ ಬದಿಯ ಡಾಬಾಗಳ ಮೇಲೂ ಚುನಾವಣಾ ಅಧಿಕಾರಿಗಳು ಗಮನವಿಟ್ಟಿದ್ದು, ಮದ್ಯ ಮಾರದಂತೆ ಕಟ್ಟೆಚ್ಚರ ನೀಡಿದ್ದಾರೆ. ಬಾರ್ ಅಂಡ್‌ ರೆಸ್ಟೊರೆಂಟ್‌ಗಳಲ್ಲಿ ಮಾತ್ರ ಮದ್ಯ ಸೇವನೆಗೆ ಅವಕಾಶವಿದೆ. ವೈನ್‌ಸ್ಟೋರ್‌ಗಳ ಕೌಂಟರ್‌ನಲ್ಲಿ ಮದ್ಯ ಸೇವನೆಗೆ ವ್ಯವಸ್ಥೆ ಕಲ್ಪಿಸದಂತೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ 27 ಮದ್ಯ ಅಕ್ರಮ ಸಾಗಣೆ ಪ್ರಕರಣಗಳು ದಾಖಲಾಗಿವೆ. 283 ಲೀಟರ್‌ ಮದ್ಯ ವಶಕ್ಕೆ ಪಡೆಯಲಾಗಿದೆ.

ಡಾಬಾಗಳಲ್ಲಿ ವ್ಯಾಪಾರ ಕುಸಿತ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ–4 ಹಾದು ಹೋಗಿದೆ. ಪ್ರಮುಖ ರಾಜ್ಯ ಹೆದ್ದಾರಿಗಳೂ ಇವೆ. ವ್ಯಾಪಾರಿ ಕೇಂದ್ರವಾಗಿರುವುದರಿಂದ ಡಾಬಾಗಳ ಸಂಖ್ಯೆ ಹೆಚ್ಚಿದೆ. ಗ್ರಾಹಕರಿಂದ ಸದಾ ಗಿಜಿಗುಡುತ್ತಿದ್ದ ಡಾಬಾಗಳು ಈಗ ಭಣಗುಡುತ್ತಿವೆ. ಡಾಬಾಗಳಲ್ಲಿ ಮದ್ಯ ಸರಬರಾಜಿಗೆ, ಸೇವನೆಗೆ ಅವಕಾಶವಿಲ್ಲ. ಹೀಗಿದ್ದರೂ ಈ ಹಿಂದೆ ಮದ್ಯ ಮಾರಾಟಕ್ಕೆ ತೊಂದರೆಯಿರಲಿಲ್ಲ! ನೀತಿ ಸಂಹಿತೆ ಜಾರಿಯಾದ ಮೇಲೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಡಾಬಾಗಳಲ್ಲಿ ಮದ್ಯ ಮಾರಾಟಕ್ಕೆ ತಡೆಯೊಡ್ಡಿದ್ದಾರೆ.

‘ಡಾಬಾಗಳಿಗೆ ಊಟಕ್ಕೆ ಬರುವವ ರಲ್ಲಿ ಹೆಚ್ಚಿನ ಮಂದಿ ಕುಡಿಯಲು ಮದ್ಯ ಕೇಳುತ್ತಾರೆ. ಅಮಲೇರಿಸುವ ಪಾನೀಯಗಳು ಸಿಗದ ಕಾರಣ ಅವರೆಲ್ಲಾ ಇತ್ತೀಚೆಗೆ ಬಾರ್‌ ಅಂಡ್‌ ರೆಸ್ಟೊರೆಂಟ್‌ ಹಾದಿ ಹಿಡಿದಿದ್ದಾರೆ. ಡಾಬಾಗಳಲ್ಲಿ ವ್ಯಾಪಾರ ಇಳಿಮುಖವಾಗಿದೆ’ ಎಂದು ಹೇಳುತ್ತಾರೆ ಹರಿಹರದ ಶಿವಮೊಗ್ಗ ರಸ್ತೆಯ ಡಾಬಾವೊಂದರ ಮಾಲೀಕರು.

‘ಹಳ್ಳಿಗಳ ಅಂಗಡಿಗಳಲ್ಲಿ ಮದ್ಯ ಸಿಗದ ಕಾರಣ ಬಹಳಷ್ಟು ಮಂದಿ ನಗರ, ಪಟ್ಟಣಗಳ ಬಾರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಹೆದ್ದಾರಿ ಬದಿಯ ಡಾಬಾಗಳಿಗೆ ಹೋಗುತ್ತಿದ್ದವರು ಈಗ ಬಾರ್‌ಗಳಿಗೆ ಬರುತ್ತಿದ್ದಾರೆ. ಹೀಗಾಗಿ ಸಂಜೆ ಮತ್ತು ರಾತ್ರಿ ವೇಳೆ ಬಾರ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ’ ಎನ್ನುತ್ತಾರೆ ಅವರು.

‘ಚುನಾವಣಾ ಅಕ್ರಮ ತಡೆಯುವು ದಕ್ಕಾಗಿ ಮದ್ಯ ಮಾರಾಟದ ಮೇಲೆ ನಿಗಾ ಇಡಲಾಗಿದೆ. ಮದ್ಯದ ಅಂಗಡಿಗಳು ಕಳೆದ ವರ್ಷ ಇದೇ ತಿಂಗಳು ಎಷ್ಟು ಮದ್ಯ ಖರೀದಿಸಿದ್ದರೋ ಅಷ್ಟು ಮಾತ್ರ ಈ ಬಾರಿ ಖರೀದಿಸಲು ಅವಕಾಶ ನೀಡಲಾಗಿದೆ. ವೈನ್‌ಸ್ಟೋರ್‌ಗಳಿಂದ ಹೆಚ್ಚು ಮದ್ಯ ಖರೀದಿಸಿ ಒಯ್ಯುವ ಗ್ರಾಹಕರ ಮೇಲೂ ನಿಗಾ ಇಡಲಾಗಿದೆ’ ಎಂದು ತಿಳಿಸುತ್ತಾರೆ ಅಬಕಾರಿ ಇಲಾಖೆ ಉಪ ಆಯುಕ್ತ ಮೋಹನ್‌.

ಕಾರ್ಯಕರ್ತರಿಗೆ ಟೋಕನ್ ವ್ಯವಸ್ಥೆ

ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾಮೂಹಿಕವಾಗಿ ಊಟದ ವ್ಯವಸ್ಥೆ ಮಾಡಲೂ ಅನುಮತಿ ಪಡೆಯಬೇಕು. ಹೀಗಾಗಿ ಸಕ್ರಿಯವಾಗಿ ಪ್ರಚಾರ ಮಾಡುವ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲು ಕೆಲವು ನಾಯಕರ ಹಿಂಬಾಲಕರು ರಂಗೋಲಿ ಕೆಳಗೆ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲ ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳನ್ನು ನಿಗದಿಪಡಿಸಿಕೊಂಡು ಕಾರ್ಯಕರ್ತರಿಗೆ ಮಾಂಸದ ಊಟ, ಮದ್ಯಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಕಾರ್ಯಕರ್ತರಿಗೆ ದಿನವೂ ಟೋಕನ್‌ಗಳನ್ನು ನೀಡಿ, ಊಟ ಹಾಕಿಸುತ್ತಿದ್ದಾರೆ. ಹೀಗಾಗಿ ಬಾರ್‌ಗಳಲ್ಲಿ ಹೆಚ್ಚು ಮದ್ಯ ಬಿಕರಿಯಾಗುತ್ತಿದೆ ಎನ್ನುತ್ತಾರೆ ಪಕ್ಷದ ಮುಖಂಡರೊಬ್ಬರು.

‘ವ್ಯಾಪಾರ ಕಳೆದ ವರ್ಷಕ್ಕಿಂತ ಹೆಚ್ಚಾಗಿಲ್ಲ’

‘ಕಳೆದ ವರ್ಷ ಮಾರ್ಚ್‌ ವೇಳೆ ಆದ ಮಾರಾಟಕ್ಕಿಂತ ಈ ಬಾರಿ ಹೆಚ್ಚು ಮದ್ಯ ವ್ಯಾಪಾರವಾಗಿಲ್ಲ. ಈ ವರ್ಷದ ಮದ್ಯ ಮಾರಾಟದ ಗುರಿ ಇನ್ನೂ ಸಾಧಿಸಿಲ್ಲ. ದಾಸ್ತಾನು ಮಾಡುವವರಿಗೆ ಮದ್ಯ ಮಾರದಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಅಕ್ರಮ ನಡೆಸಿದರೆ ಅಂಗಡಿ ಮಾಲೀಕರ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಮೋಹನ್‌ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry