ಭಾನುವಾರ, ಡಿಸೆಂಬರ್ 15, 2019
25 °C
ಪ್ರಧಾನಿ ಉಪವಾಸ ಕರೆಗೆ ಸಾಥ್ ನೀಡಿದ ಸಂಸದ ಸಿದ್ದೇಶ್ವರ

ಅಧಿವೇಶನ ಹಾಳುಗೆಡವಿದ ವಿರೋಧ ಪಕ್ಷಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿವೇಶನ ಹಾಳುಗೆಡವಿದ ವಿರೋಧ ಪಕ್ಷಗಳು

ದಾವಣಗೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉಪವಾಸ ಸತ್ಯಾಗ್ರಹದ ಕರೆಯ ಮೇರೆಗೆ ಸಂಸದ ಜಿ.ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಗುರುವಾರ ಮಧ್ಯಾಹ್ನದವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತು ಸಾಥ್‌ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದೇಶ್ವರ, ‘ಬಜೆಟ್‌ ಅಧಿವೇಶನದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ನೀಡದೆ ಇಡೀ ಅಧಿವೇಶನವನ್ನು ಹಾಳು ಮಾಡಿವೆ. ಇದರಿಂದ ಇಡೀ ದೇಶಕ್ಕೆ ನಷ್ಟವಾಗಿದೆ. ಇದರ ಹೊಣೆಯನ್ನು ಪ್ರತಿಪಕ್ಷಗಳೇ ಹೊರಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ಬೇರೆ ಪಕ್ಷಗಳನ್ನು ಛೂ ಬಿಟ್ಟ ಕಾಂಗ್ರೆಸ್‌ ಸಂಸತ್‌ ಕಲಾಪ ನಡೆಯದಂತೆ ಮಾಡಿದೆ. ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆ ಬಗ್ಗೆ ಚರ್ಚೆ ನಡೆಸಲು ಪಕ್ಷ ಸಿದ್ಧವಾಗಿತ್ತು. ಆದರೆ, ಚರ್ಚೆಗೆ ಅವಕಾಶ ನೀಡದೆ ಸದನದ ವೇಳೆಯನ್ನು ವಿರೋಧ ಪಕ್ಷಗಳು ಹಾಳು ಮಾಡಿದವು ಎಂದು ದೂರಿದರು.

ದಿನನಿತ್ಯದ ಚಟುವಟಿಕೆಗೆ ಅಡ್ಡಿಯಾಗದ ರೀತಿಯಲ್ಲಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಸತ್ಯಾಗ್ರಹ ನಡೆಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಹುಬ್ಬಳ್ಳಿಯಲ್ಲಿ, ಸಚಿವರಾದ ಅನಂತಕುಮಾರ್, ಸದಾನಂದಗೌಡ ಹಾಗೂ ಸಂಸದ ಪಿ.ಸಿ. ಮೋಹನ್‌ ಬೆಂಗಳೂರಿನಲ್ಲಿ ಧರಣಿ ನಡೆಸಿದರು ಎಂದರು.

ಈ ಕಲಾಪದ ಅವಧಿಯಲ್ಲಿನ ಸಂಭಾವನೆಯನ್ನು ಯಾರೂ ತೆಗೆದುಕೊಳ್ಳಬಾರದು ಎಂದು ಮೋದಿ ಸೂಚನೆ ನೀಡಿದ್ದಾರೆ. ಅದರಂತೆ ಸಂಸದರು ಯಾರೂ ಕಲಾಪ ಅವಧಿಯ ಸಂಭಾವನೆ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ, ಅದು ಉದ್ಧಟತನವಾಗಬಾರದು. ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕು. ವಿರೋಧ ಪಕ್ಷಗಳಿಗೆ ಈ ಸಹನೆ ಇಲ್ಲದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ ಎಂದು ಮುಖಂಡ ಎಸ್.ಎ. ರವೀಂದ್ರನಾಥ್‌ ವಿಷಾದಿಸಿದರು.

ಸತ್ಯಾಗ್ರಹದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಡಾ.ಎ.ಎಚ್‌.ಶಿವಯೋಗಿ ಸ್ವಾಮಿ, ಪ್ರೊ. ಲಿಂಗಣ್ಣ, ಬಿ.ಪಿ. ಹರೀಶ್, ಆನಂದಪ್ಪ, ಎಚ್‌.ಸಿ. ಜಯಮ್ಮ, ಎಚ್‌. ಜಯಮ್ಮ, ನಾಗರತ್ನ ನಾಯ್ಕ, ಜಯಪ್ರಕಾಶ್ ಅಂಬರ್‌ಕರ್, ಭಾಗ್ಯ ಪಿಸಾಳೆ, ರಾಜನಹಳ್ಳಿ ಶಿವಕುಮಾರ್ ಅವರೂ ಇದ್ದರು.

**

ಲಿಂಗಾಯತ ಪ್ರತ್ಯೇಕ ಧರ್ಮ ವಿಷಯ ಕುರಿತಂತೆ ನಾನು ಈ ಹಿಂದೆಯೂ ಪ್ರತಿಕ್ರಿಯಿಸಿಲ್ಲ; ಈಗಲೂ ಪ್ರತಿಕ್ರಿಯಿಸುವುದಿಲ್ಲ – ಎಸ್‌.ಎ. ರವೀಂದ್ರನಾಥ್‌, ಬಿಜೆಪಿ ಮುಖಂಡ.

**

ಪ್ರತಿಕ್ರಿಯಿಸಿ (+)