ನಾಳೆವರೆಗೆ ಮತದಾರರ ನೋಂದಣಿ

7

ನಾಳೆವರೆಗೆ ಮತದಾರರ ನೋಂದಣಿ

Published:
Updated:

ಹಾಸನ: ರಾಜ್ಯದಲ್ಲಿ ನಡೆದ ಮಿಂಚಿನ ನೋಂದಣಿಯಲ್ಲಿ 6.5 ಲಕ್ಷಕ್ಕೂ ಅಧಿಕ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಅವು ಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಎಲ್ಲರಿಗೂ ಗುರುತಿನ ಚೀಟಿ ವಿತರಿಸಬೇಕು ಹಾಗೂ ಏಪ್ರಿಲ್ 14ರವರೆಗೆ ಮತದಾರರ ನೋಂದಣಿಗೆ ಅವಕಾಶ ಇರುವುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್   ಹೇಳಿದರು.

ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು ಸಹಾಯಕ ಜಿಲ್ಲಾ ಚುನಾವಣಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ವೆಚ್ಚ ವೀಕ್ಷಕರು ಹಾಗೂ ಇತರೆ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು, ಚುನಾವಣಾ ಪ್ರಕ್ರಿಯೆ ಅತ್ಯಂತ ಸೂಕ್ಷ್ಮ ಹಾಗೂ ಮಹತ್ತರ ವಿಚಾರ. ಪ್ರತಿಯೊಬ್ಬ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗೆ ಎಲ್ಲಾ ವಿಷಯಗಳು ತಿಳಿಯಬೇಕು. ನಾಮಪತ್ರ ಸ್ವೀಕೃತಿಯಿಂದ ಮತ ಎಣಿಕೆವರೆಗೆ ನಡೆಯುವ ಪ್ರಕ್ರಿಯೆಗಳ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲವೂ ಅರಿವಿರಬೇಕು. ಹಾಗಾಗಿ ಈವರೆಗೆ ತೇರ್ಗಡೆಯಾದವರಿಗೆ ಏ. 16ರವರೆಗೆ ವಿಶೇಷ ತರಬೇತಿ ನೀಡಬೇಕು ಎಂದು ತಿಳಿಸಿದರು.

ಚುನಾವಣೆಗೆ ನಿಯೋಜನೆ ಗೊಂಡಿರುವ ಎಲ್ಲಾ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಕಡ್ಡಾಯವಾಗಿ ಚುನಾವಣಾ ಆಯೋಗದ ಪರೀಕ್ಷೆ ತೇರ್ಗಡೆ ಹೊಂದಲೇಬೇಕು. ಅನುತ್ತೀರ್ಣರಾಗುವವರಿಗೆ ಜಿಲ್ಲಾ ಚುನಾವಣಾಧಿಕಾರಿ ಮುಂದಿನ 3 ದಿನ ನಿರಂತರ ತರಬೇತಿ ನೀಡಬೇಕಿದೆ ಎಂದು ಸಂಜೀವ್ ಕುಮಾರ್ ಸೂಚನೆ ನೀಡಿದರು.

ಸಭೆಯಲ್ಲಿ ಸುವಿಧಾ ಮತ್ತು ಸಮಾದಾನ್ ತಂತ್ರಾಂಶಗಳ ಸಮರ್ಪಕ ಬಳಕೆ, ದೂರುಗಳ ನಿರ್ವಹಣೆ, ವಿದ್ಯುನ್ಮಾನ ಮತಯಂತ್ರಗಳು ಹಾಗೂ ವಿ.ವಿ.ಪ್ಯಾಟ್ ಗಳ ‌ರ‍್ಯಾಂಡನೈಝೇಷನ್ ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ನೇಮಕಾತಿಗಳ ಬಗ್ಗೆ ಸಭೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಹಲವು ಸಲಹೆ, ಸೂಚನೆ ನೀಡಿದರು.

ಇದೇ ವೇಳೆ ರಾಜ್ಯ ನೋಡಲ್ ಅಧಿಕಾರಿಗಳು, ಜಿಲ್ಲಾ ಮಟ್ಟದ ನೋಡೆಲ್ ಅಧಿಕಾರಿಗಳು, ಪೊಲೀಸ್, ಅಬಕಾರಿ, ಆದಾಯ ತೆರಿಗೆ, ಮತ್ತಿತರ ಇಲಾಖೆ ಅಧಿಕಾರಿಗಳಿಗೆ ಸಂವಾದ ನಡೆಸಿ ಹಲವು ನಿರ್ದೇಶನಗಳನ್ನು ನೀಡಿದರು.

ಜಿಲ್ಲಾ ಚುನಾವಣಾ ಮಾದರಿ ನೀತಿ ಸಂಹಿತೆ ಮೇಲ್ವಿಚಾರಣಾ ತಂಡದ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಸಹಕಾರ ಸಂಘಗಳ ನೋಂದಣಾಧಿಕಾರಿಗಳೊಂದಿಗೆ ಸಂವಾದ ನಡೆಸಲಾಯಿತು.

ಪೋಲಿಸ್ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪುರ್ ವಾಡ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್ ಪೂರ್ಣಿಮಾ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಜಾನಕಿ,  ಎಂ.ಸಿ.ಎಂ.ಸಿ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry