‘ಹಾಕುವೆವು ವೋಟು, ಬೇಕಿಲ್ಲ ನೋಟು’

7
ಮತದಾನ ಜಾಗೃತಿಗೆ ಬೀದಿ ಕವಿಗೋಷ್ಠಿ, ಗಾಯನ

‘ಹಾಕುವೆವು ವೋಟು, ಬೇಕಿಲ್ಲ ನೋಟು’

Published:
Updated:

ಹಾವೇರಿ: ಮುಕ್ತ ಮತದಾನಕ್ಕಾಗಿ ಜಿಲ್ಲಾಡಳಿತವು ಸಾಹಿತಿ ಬಳಗದ ಸಹಯೋಗದಲ್ಲಿ ಕೈಗೊಂಡ ಮತದಾನ ಜಾಗೃತಿಯ ಬೀದಿ ಕವಿಗೋಷ್ಠಿ, ಗಾಯನಗಳು ಗಮನ ಸೆಳೆಯುತ್ತಿವೆ.

ಜಿಲ್ಲಾಡಳಿತದ ವಿಭಿನ್ನ ಪ್ರಯತ್ನಕ್ಕೆ ಸಾಹಿತಿ ಬಳಗವು ಕೈ ಜೋಡಿಸಿದ್ದು, ಬೀದಿ ಕವಿಗೋಷ್ಠಿ, ಗಾಯನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮತದಾರರ ಜಾಗೃತಿ ಗೀತೆಗಳನ್ನು ರಚಿಸಿ, ಹಾಡುವ ಮೂಲಕ ನಗರದ ವಿವಿಧ ವೃತ್ತಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಜಾಗೃತಿ ಮೂಡಿಸುತ್ತಿದೆ.

ಹಾವೇರಿ ನಗರ ಬಸ್ ನಿಲ್ದಾಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕವಯತ್ರಿ ಗಾಯತ್ರಿ ರವಿ, ‘ಹಾಕುವೆವು ನಾವು ಓಟು, ನಮಗೆ ಬೇಕಿಲ್ಲ ಗಾಂಧಿ ನೋಟು’ ಎಂಬ ಕವಿತೆಯ ಮೂಲಕ ಗಮನ ಸೆಳೆದರು. ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿ ಎಂದು ಸಂದೇಶ ನೀಡಿದರು.

ಕವಿ ಸಂತೋಷ ಪಿಶೆ , ‘ಯಾರೂ ಗುಲಾಮರಲ್ಲ, ಯಾರ ಮರ್ಜಿ ನಮಗಿಲ್ಲ, ಮತ ಹಾಕದಿದ್ದರೆ ತಪ್ಪು , ಮತದಾನ ನಿನ್ನ ಹಕ್ಕು...’ ಎಂಬ ಸ್ವರಚಿತ ಕವನದ ಸಾಲುಗಳನ್ನು ಓದಿದರು.

ಕವಿ ರಾಜೇಶ್ವರಿ ಸಾರಂಗಮಠ ಅವರು, ‘ಬನ್ನಿರೋ ಬನ್ನಿರೋ ಮತದಾನ ಮಾಡಲು ಬನ್ನಿರೋ’, ರಾಹಿಲ್ ರಾಜಾಭಕ್ಷು, ‘ನಿಮ್ಮೊಂದು ಮತ ದೇಶಕ್ಕೆ ಅಮೂಲ್ಯ’, ಕವಿ ಗಂಗಾಧರ ನಂದಿ, ‘ಒಳಿತು ಮಾಡಲು ಏಳು, ಮತ ಹಾಕಲು ಹೇಳು’, ವಿದ್ಯಾರ್ಥಿ ರವೀಂದ್ರ ಕೊಳ್ಳಿ, ‘ ವರ್ಷದ ಮಳೆಗೆ ಕೆರೆ ಕಟ್ಟೆ ತುಂಬುತ್ತವೆ, ಐದು ವರ್ಷದ ಚುನಾವಣೆಯಲ್ಲಿ ಮತಡಬ್ಬಿಗಳು ತುಂಬಲಿ’ ಎಂಬ ಕವನಗಳು ಜನಮೆಚ್ಚುಗೆ ಪಡೆದವು. ಜಿ.ಎಂ.ಓಂಕಾರಣ್ಣನವರ ಸೇರಿದಂತೆ ಹಲವರು ಮತಜಾಗೃತಿ ಕವನ ವಾಚಿಸಿದರು.

ಹಿರಿಯ ಸಾಹಿತಿ ಕೋರಗಲ್ ವಿರೂಪಾಕ್ಷಪ್ಪ ಕವನ ವಾಚನದ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಿದರು. ಗಾಯಕರಾದ ಕೆ.ಆರ್. ಹಿರೇಮಠ, ಆರ್. ಸಿ. ನಂದೀಹಳ್ಳಿ, ಎ.ಬಿ.ಗುಡ್ಡಳ್ಳಿ, ಹೇಮಾ ಗೀತೆಗಳನ್ನು ಸ್ಥಳದಲ್ಲಿಯೇ ಬರೆದು ಹಾಡಿದರು.

ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಸಾಹಿತಿ ಸತೀಶ ಕುಲಕರ್ಣಿ, ಮಹಿಳಾ ಸಾಂತ್ವನ ಕೇಂದ್ರದ ಪರಿಮಳಾ ಜೈನ್ ಮತ್ತಿತರರು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry