ಮಂಗಳವಾರ, ಡಿಸೆಂಬರ್ 10, 2019
26 °C

ಚಿಕಿತ್ಸೆ ವೇಳೆ ನೀಡಿದ್ದ ರಕ್ತದಿಂದ ಎಚ್‌ಐವಿ ಸೋಂಕು: ಹೈಕೋರ್ಟ್‌ನಲ್ಲಿ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕಿತ್ಸೆ ವೇಳೆ ನೀಡಿದ್ದ ರಕ್ತದಿಂದ ಎಚ್‌ಐವಿ ಸೋಂಕು: ಹೈಕೋರ್ಟ್‌ನಲ್ಲಿ ವಿಚಾರಣೆ

ಬೆಂಗಳೂರು: ‘ಚಿಕಿತ್ಸೆ ವೇಳೆ ನೀಡಿದ ರಕ್ತದಿಂದ ನಾನು ಎಚ್‌ಐವಿ ಸೋಂಕಿಗೆ ಒಳಗಾಗಿದ್ದೇನೆ. ಈ ಕುರಿತು ಆಸ್ಪತ್ರೆ ಮತ್ತು ಪೊಲೀಸರು ನನ್ನ ಅಹವಾಲಿಗೆ ಮಾನ್ಯತೆ ನೀಡುತ್ತಿಲ್ಲ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ನ್ಯಾಯಮೂರ್ತಿ ಆರ್.ಎಸ್. ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಪೊಲೀಸರು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಕ್ಕೆ ಮತ್ತು ಮಡಿವಾಳ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕುರಿತಂತೆ ನ್ಯಾಯಮೂರ್ತಿಗಳು ಸರ್ಕಾರಿ ವಕೀಲರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.

‘ನೀವು ನೀಡುತ್ತಿರುವ ಸಮಜಾಯಿಷಿ ತೃಪ್ತಿಕರವಾಗಿಲ್ಲ. ಒಂದಕ್ಕೊಂದು ತಾಳೆಯಾಗದ ವಿವರಣೆ ನೀಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠ, ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ, ವಸ್ತುನಿಷ್ಠವಾಗಿ ಮತ್ತು ಸಮರ್ಥವಾಗಿ ನಡೆಯಬೇಕು. ಕೋರ್ಟ್ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಯಲಿ. ಈ ಸಂಬಂಧ ಪ್ರತಿ 15 ದಿನಗಳಿಗೊಮ್ಮೆ ತನಿಖೆಯ ವರದಿಯನ್ನು ನ್ಯಾಯಾಲಯಕ್ಕೆ ನೀಡಬೇಕು’ ಎಂದು ಆದೇಶಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣವೇನು: ‘ಲಕ್ಕಸಂದ್ರದ 45 ವರ್ಷದ ಮಹಿಳೆಯೊಬ್ಬರು ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ 2014ರಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಅವರಿಗೆ ರಕ್ತ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ನೀಡಿದ ರಕ್ತದಿಂದ ನನಗೆ ಎಚ್ಐವಿ ಸೋಂಕು ತಗುಲಿದೆ ಎಂಬುದು ಮಹಿಳೆಯ ಆಕ್ಷೇಪಣೆ. ಈ ಕುರಿತಂತೆ ನಾನು ನೀಡಿದ ದೂರನ್ನು ಪೊಲೀಸರು ತಕ್ಷಣ ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಲಾಗಿದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಪ್ರತಿಕ್ರಿಯಿಸಿ (+)