ಟಿಕೆಟ್‌ಗಾಗಿ ‘ಪಂಗಡ’ಗಳ ಪೈಪೋಟಿ!

7
ಅಭ್ಯರ್ಥಿಗಳು ಘೋಷಣೆಯಾಗದ ಹಿನ್ನೆಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಚರ್ಚೆ

ಟಿಕೆಟ್‌ಗಾಗಿ ‘ಪಂಗಡ’ಗಳ ಪೈಪೋಟಿ!

Published:
Updated:

ಹಾವೇರಿ: ಬಿಜೆಪಿಯಲ್ಲಿ ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ ಕ್ಷೇತ್ರಗಳ ಟಿಕೆಟ್‌ಗೆ ಪೈಪೋಟಿ ಹೆಚ್ಚುತ್ತಿದ್ದು, ವಿವಿಧ ‘ಪಂಗಡ’ಗಳ ನಡುವಿನ ಚರ್ಚೆ ಜೋರಾಗಿದೆ. ಹಾವೇರಿ (ಮೀಸಲು) ಕ್ಷೇತ್ರದಲ್ಲಿ ‘ಎಡಗೈ–ಬಲಗೈ’, ಬ್ಯಾಡಗಿ ಯಲ್ಲಿ ‘ಪಂಚಮಸಾಲಿ– ಸಾದರ’, ರಾಣೆಬೆನ್ನೂರಿನಲ್ಲಿ ‘ಲಿಂಗಾಯತ– ಹಿಂದುಳಿದ ವರ್ಗ’ಗಳ ಪೈಕಿ ಯಾರಿಗೆ ಟಿಕೆಟ್‌ ಸಿಗಬಹುದು? ಎಂಬುದೇ ಸದ್ಯ ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ.

ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಲಗೈ ಸಮುದಾಯದಿಂದ ಮಾಜಿ ಶಾಸಕ ನೆಹರು ಓಲೇಕಾರ ಮತ್ತು ವೆಂಕಟೇಶ್‌ ನಾರಾಯಣಿ ಹಾಗೂ ಎಡಗೈ ಸಮುದಾಯದಿಂದ ಸುಮಾರು 12 ಅಭ್ಯರ್ಥಿಗಳ ಹೆಸರು ಕೇಳಿ ಬಂದಿವೆ.

ಮುಂಬೈ ಕರ್ನಾಟಕ ವಿಭಾಗದಲ್ಲಿನ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯು ಎಡಗೈ ಸಮುದಾಯ ಮತ್ತು ಲಂಬಾಣಿಗರಿಗೆ ಟಿಕೆಟ್ ನೀಡಿದ್ದು, ಹಾವೇರಿಯಲ್ಲಿ ಬಲಗೈ ಸಮುದಾಯಕ್ಕೆ ನೀಡಬೇಕು ಎಂಬ ಬೇಡಿಕೆಯನ್ನು ಆಕಾಂಕ್ಷಿ ವೆಂಕಟೇಶ್ ನಾರಾಯಣಿ ಮತ್ತಿತರರು ಮುಂದಿಟ್ಟಿದ್ದಾರೆ.

ಹಾವೇರಿ ಕ್ಷೇತ್ರದಲ್ಲಿ ಎಡಗೈ ಸಮುದಾಯದ ಮತಗಳೇ ಅಧಿಕವಾಗಿವೆ. ಆದರೆ, ಅದಕ್ಕೆ ತಕ್ಕಂತೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಡಿ.ಎಸ್. ಮಾಳಗಿ, ಶಿವರಾಜ ಹರಿಜನ ಮತ್ತಿತರರು ಬೇಡಿಕೆ ಮಂಡಿಸಿದ್ದಾರೆ.

ರಾಣೆಬೆನ್ನೂರಿನಲ್ಲಿ ಬಿಜೆಪಿಯಿಂದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ಸ್ಪರ್ಧಿಸುವು ದಿಲ್ಲ ಎನ್ನುವುದು ದೃಢಪಟ್ಟ ಹಿನ್ನೆಲೆ ಯಲ್ಲಿ ಸ್ಥಳೀಯ 16 ಆಕಾಂಕ್ಷಿಗಳ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಿತ್ತು. ‘ಸ್ಥಳೀಯರಿಗೆ ಟಿಕೆಟ್ ನೀಡಿ’ ಎಂದು ಬೇಡಿಕೆ ಮಂಡಿಸಿದ್ದರು.  ಇತ್ತ ಕಾಂಗ್ರೆಸ್‌ನಿಂದ ಕೆ.ಬಿ.ಕೋಳಿವಾಡ ಮತ್ತು ಕೆಪಿಜೆಪಿಯಿಂದ ಆರ್. ಶಂಕರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಇದರ ಪರಿಣಾಮ ಬಿಜೆಪಿಯಲ್ಲೂ ಹಿಂದುಳಿದ ವರ್ಗ ಮತ್ತು ಲಿಂಗಾಯತರ ಪೈಕಿ ಯಾರಿಗೆ ಟಿಕೆಟ್ ಸಿಗುವುದು ಎಂಬ ಚರ್ಚೆ ಬಲಗೊಂಡಿದೆ.

ಹಿಂದುಳಿದ ವರ್ಗಕ್ಕೆ ಸೇರಿದ ಡಾ.ಬಸರಾಜ ಕೇಲಗಾರ ಅಥವಾ ರಾಮಪ್ಪ ಕೋಲಕಾರ ಪೈಕಿ ಒಬ್ಬರಿಗೆ ಟಿಕೆಟ್ ಸಿಗಲಿದೆ ಎಂಬ ಸುದ್ದಿ ಹಬ್ಬಿತ್ತು. ಇಲ್ಲವೇ, ಟಿಕೆಟ್‌ ಬೇರೆ ಅಭ್ಯರ್ಥಿಗಳ ಪಾಲಾಗುವುದೋ ಎಂಬ ಕುತೂಹಲ ಹೆಚ್ಚಿದೆ.

ಬ್ಯಾಡಗಿಯ ಬಿಜೆಪಿ ಟಿಕೆಟ್‌, ಪಂಚಮಸಾಲಿ ಮತ್ತು ಸಾದರ ಪಂಗಡಗಳ ಪೈಕಿ ಯಾರಿಗೆ ದೊರೆಯಬಹುದು? ಎಂಬುದೇ ಪ್ರಮುಖ ಚರ್ಚೆಯ ವಿಚಾರವಾಗಿದೆ. ಅತ್ತ ಕಾಂಗ್ರೆಸ್ ಟಿಕೆಟ್ ಶಾಸಕ ಬಸವ ರಾಜ ಶಿವಣ್ಣನವರಿಗ ಖಚಿತಗೊಂಡಿದೆ. ಅಲ್ಲದೇ, ಎಸ್‌.ಆರ್. ಪಾಟೀಲ್ ಬಂಡಾಯ ಸಾರಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟ್‌ ಕುರಿತ ಚರ್ಚೆಗೆ ಇನ್ನಷ್ಟು ರೆಕ್ಕೆ–ಪುಕ್ಕಗಳು ಬಂದಿವೆ.

ಹಾನಗಲ್ ಕ್ಷೇತ್ರದಿಂದ ಮಾಜಿ ಶಾಸಕ ಸಿ.ಎಂ. ಉದಾಸಿ, ಶಿಗ್ಗಾವಿಯಿಂದ ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ಹಿರೇಕೆರೂರಿನಿಂದ ಶಾಸಕ ಯು.ಬಿ. ಬಣಕಾರ ಅಭ್ಯರ್ಥಿಗಳು ಎಂದು ಬಿಜೆಪಿ ಘೋಷಿಸಿದೆ. ಉಳಿದ ಕ್ಷೇತ್ರಗಳಲ್ಲಿ ಟಿಕೆಟ್‌ ಪೈಪೋಟಿ ಹಚ್ಚಿದೆ.

ಈ ನಡುವೆಯೇ ವಿವಿಧ ಧರ್ಮ, ಜಾತಿ, ಪಂಗಡ, ಸಮುದಾಯಗಳ ಮುಖಂಡರು ತಮ್ಮವರ ಪರವಾಗಿ ಹೈಕಮಾಂಡ್ ಮಟ್ಟದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಜಿಲ್ಲೆಯ ಆರು ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಂಡು, ಎಲ್ಲರಿಗೂ ಅವಕಾಶ ಕಲ್ಪಿಸುವ ಸೂತ್ರವನ್ನು ಮುಖಂಡರು ರೂಪಿಸುತ್ತಿದ್ದಾರೆ ಎಂದು ಮುಖಂಡರೊಬ್ಬರು ತಿಳಿಸಿದರು.

ಶಿಗ್ಗಾವಿ–ಹಾನಗಲ್‌ ಟಿಕೆಟ್‌ಗೆ ಫೈಟ್

ಇತ್ತ ಕಾಂಗ್ರೆಸ್‌ನಲ್ಲಿ ರಾಣೆಬೆನ್ನೂರಿನಿಂದ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಹಾವೇರಿಯಿಂದ ಸಚಿವ ರುದ್ರಪ್ಪ ಲಮಾಣಿ, ಬ್ಯಾಡಗಿಯಿಂದ ಶಾಸಕ ಬಸವರಾಜ ಶಿವಣ್ಣನವರ, ಹಿರೇಕೆರೂರಿನಿಂದ ಮಾಜಿ ಶಾಸಕ ಬಿ.ಸಿ. ಪಾಟೀಲ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಶಿಗ್ಗಾವಿ ಮತ್ತು ಹಾನಗಲ್ ಕ್ಷೇತ್ರದಲ್ಲಿ ಟಿಕೆಟ್ ಪೈಪೋಟಿ ಹೆಚ್ಚಿದೆ. ಈ ಕ್ಷೇತ್ರಗಳ ಪೈಕಿ ಒಂದರಲ್ಲಿ ಮುಸ್ಲಿಂ ಅಥವಾ ಯುವ ಅಥವಾ ಮಹಿಳಾ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂಬ ರಾಜಕೀಯ ಒತ್ತಡಗಳು ಹೆಚ್ಚಾಗಿವೆ. ಹೀಗಾಗಿ, ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry