ರಾಜಕಾರಣಿಗಳಿಗೆ ಬರೆ ಹಾಕಿದ ಗೆರೆಗಳು!

ಮಂಗಳವಾರ, ಮಾರ್ಚ್ 26, 2019
31 °C
ವಿದ್ಯಾಧರ ಗುರೂಜಿ ಸ್ಮರಣಾರ್ಥ ವ್ಯಂಗ್ಯ ಚಿತ್ರಗಳ ಪ್ರದರ್ಶನ

ರಾಜಕಾರಣಿಗಳಿಗೆ ಬರೆ ಹಾಕಿದ ಗೆರೆಗಳು!

Published:
Updated:
ರಾಜಕಾರಣಿಗಳಿಗೆ ಬರೆ ಹಾಕಿದ ಗೆರೆಗಳು!

ಕಲಬುರ್ಗಿ: ನರೇಂದ್ರ ಮೋದಿ, ರಾಹುಲ್ ಗಾಂಧಿ, ಅಮಿತ್ ಶಾ, ಸಿದ್ದರಾಮಯ್ಯ, ಲಾಲೂ ಪ್ರಸಾದ್ ಅವರನ್ನೆಲ್ಲ ಭಿನ್ನವಾಗಿ ನೋಡುವ ಅವಕಾಶ. ಟೀಕೆ, ಕುಹಕ, ವೈಫಲ್ಯ, ಮೆಚ್ಚುಗೆ ಮುಂತಾದವೆಲ್ಲ ವ್ಯಂಗ್ಯದ ಗೆರೆಗಳಲ್ಲಿ ದಾಖಲಾಗಿದ್ದವು.

ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಸ್ಮರಣಾರ್ಥ ಹಿಂದಿ ಪ್ರಚಾರಸಭಾದಲ್ಲಿ ರಾಜಕೀಯ ವ್ಯಂಗ್ಯಚಿತ್ರಗಳ ಮುಕ್ತ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಲಬುರ್ಗಿ, ರಾಯಚೂರು, ಹುಮನಾಬಾದ್‌, ಸಿಂಧನೂರು, ಧಾರವಾಡದ 44 ವ್ಯಂಗ್ಯಚಿತ್ರಕಾರರು 100ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ತಂದಿದ್ದರು.

ರೈತರ ಆತ್ಮಹತ್ಯೆ, ಭ್ರಷ್ಟಾಚಾರ, ಪೊಳ್ಳು ಭರವಸೆ, ಮತದಾರರಿಗೆ ಆಮಿಷ, ಸೈದ್ಧಾಂತಿಕ ಸಂಘರ್ಷ, ಬಡವರ ನಿಷ್ಕಾಳಜಿ ಮುಂತಾದ ಅಂಶಗಳನ್ನು ವ್ಯಂಗ್ಯಚಿತ್ರಗಳು ಬಿಂಬಿಸಿದವು. ಚುನಾವಣೆಯ ಸಂದರ್ಭದಲ್ಲಿ ಮತದಾರರರ ವಹಿಸಬೇಕಾದ ಎಚ್ಚರಿಕೆಯನ್ನು ಸೂಚ್ಯವಾಗಿ ಅಭಿವ್ಯಕ್ತಿಗೊಳಿಸಿದವು.

ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ ಪಾಟೀಲ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ಹಣ ಗಳಿಸುವುದು ಜೀವನದ ಗುರಿ ಅಲ್ಲ. ಕಲೆ, ಕಲಾವಿದರ ಸಹವಾಸ ಬದುಕಿಗೆ ನೆಮ್ಮದಿ ನೀಡಲಿದೆ. ಚಿತ್ರಕಲೆಯ ಅಭಿರುಚಿ ಒಳ್ಳೆಯ ಹವ್ಯಾಸ’ ಎಂದರು.

‘ಕಲೆಗಳಲ್ಲಿ ವ್ಯಂಗ್ಯಚಿತ್ರಗಳಿಗೆ ಅಗ್ರಸ್ಥಾನವಿದೆ. ವ್ಯಂಗ್ಯಚಿತ್ರಕಲಾವಿದರು ನಿರ್ಭೀತಿಯಿಂದ ವಿಷಯಗಳನ್ನು ಅಭಿವ್ಯಕ್ತಿಗೊಳಿಸುತ್ತಾರೆ’ ಎಂದರು.

ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಮಾತನಾಡಿ, ‘ವ್ಯಂಗ್ಯಚಿತ್ರಗಳು ಪತ್ರಿಕೆಗಳ ದೊಡ್ಡ ಆಸ್ತಿ. ವಾಣಿಜ್ಯೀಕರಣದಿಂದಾಗಿ ಅವು ನೇಪಥ್ಯಕ್ಕೆ ಸರಿಯುತ್ತಿವೆ. ಪತ್ರಿಕೆಗಳಲ್ಲಿ ಅವುಗಳಿಗೆ ಸಿಗುತ್ತಿದ್ದ ಜಾಗ ಕಡಿಮೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಮಾಧ್ಯಮ ಪ್ರಮುಖ ಸಂಗಣ್ಣ ಇಜೇರಿ, ಉಮೇಶ ಶೆಟ್ಟಿ, ಸಿದ್ದರಾಮ ಮಾಗಡಿ, ಅಶೋಕ ಗುರೂಜಿ, ರಾಜು ಸಾಂಗವಿಕರ್ ಇದ್ದರು. 10 ಕಲಾವಿದರಿಗೆ ನಗದು ಪುರಸ್ಕಾರ ವಿತರಿಸಲಾಯಿತು.

ವಿಜೇತರು: ಬಸವರಾಜ ಕಲ್ಗುಡಿ, ಆರ್‌.ಭೀಮರೆಡ್ಡಿ, ರಾಜಶೇಖರ್, ರಮೇಶ, ಸಂಜೀವ ಎಂ, ಎಸ್‌.ರವಿಕಾಂತ್, ಶಿವಾನಂದ ಕಾಶಿನಾಥ್, ಮಲ್ಲಯ್ಯ ಕೆಂಭಾವಿ, ಡಾ.ಎಸ್‌.ಎಂ. ಲೀಲಾ, ಕೃಷ್ಣಪ್ಪ ಸಾಯಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry