ಸೋಮವಾರ, ಡಿಸೆಂಬರ್ 9, 2019
22 °C
ಕಿತ್ತುಹೋದ ಕಬ್ಬಿಣದ ತಡೆಗೋಡೆ, ಕಾಳಗಿ ಕಾಳೇಶ್ವರ ಭಕ್ತರಲ್ಲಿ ಭಯ

ಶಿಥಿಲ ಸೇತುವೆ: ಜನರಿಗೆ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಥಿಲ ಸೇತುವೆ: ಜನರಿಗೆ ಆತಂಕ

ಕಾಳಗಿ: ‘ಇಲ್ಲಿನ ಹೊರವಲಯದ ಇತಿಹಾಸ ಪ್ರಸಿದ್ಧ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ಬಂದುಹೋಗಲು ಸ್ಥಳೀಯರಿಗೆ ತೊಂದರೆ ಆಗುತ್ತಿದೆ ಎಂಬ ಉದ್ದೇಶದಿಂದ ಬುಗ್ಗಿ ನೀರಿನ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ಈಚೆಗೆ ನಿರ್ವಹಣೆ ಕೊರತೆಯಿಂದಾಗಿ ಅಪಾಯಕ್ಕೆ ಎಡೆಮಾಡಿದೆ’ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನವು ಊರಿನ ಹೊರಗಡೆ ಇದೆ. ಸ್ಥಳೀಯರು ಬೇಗನೆ ಹೋಗಿಬರಲು ಮಧ್ಯದಲ್ಲಿ ಬುಗ್ಗಿ ನೀರಿನ ಆಳವಾದ ಹಳ್ಳವಿದೆ. ದಾಟಿ ಹೋಗಲು ಸಾಧ್ಯವೇ ಇಲ್ಲ. ಕೊಡದೂರ ರಸ್ತೆ ಮಾರ್ಗದ ಸೇತುವೆ ಮೇಲಿಂದಲೇ ಸುತ್ತಿ ಹೋಗುವ ಅನಿವಾರ್ಯತೆ ಇದೆ. ಇದನ್ನು ಮನಗಂಡು ಆಗಿನ ಚಿತ್ತಾಪುರ ಕ್ಷೇತ್ರದ ಶಾಸಕರೊಬ್ಬರು ಊರು–ದೇವಸ್ಥಾನ ಹೊಂದಿಕೊಳ್ಳುವಂತೆ ಬುಗ್ಗಿಯ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಿದ್ದಾರೆ.

ಸೇತುವೆಗೆ ಎರಡು ಬದಿಯಲ್ಲಿ ಕಬ್ಬಿಣದ ಪೈಪ್‌ ಅಳವಡಿಸಿ ತಡೆಗೋಡೆ ನಿರ್ಮಿಸಲಾಗಿತ್ತು. ಈ ಸೇತುವೆ ಊರ ಜನರಿಗೆ ತುಂಬ ಹತ್ತಿರ ವಾಗಿದೆ. ಆಗಿನಿಂದ ದೇವಸ್ಥಾನಕ್ಕೆ ಬರುವ ಊರೊಳಗಿನ ಭಕ್ತರ ಸಂಖ್ಯೆ ಹೆಚ್ಚಳ ವಾಗಿದೆ. ಹಾಗೆಯೇ, ಹೊಲ ಗದ್ದೆಗಳ ಕೂಲಿ ಕಾರ್ಮಿಕರಿಗೆ ಈ ಮಾರ್ಗ ತೀರಾ ಸಮೀಪವಾಗಿ ಬಹುತೇಕ ಜನರು ಈ ಸೇತುವೆ ಮುಖಾಂತರವೇ ಓಡಾಡಿಕೊಂಡಿದ್ದಾರೆ.

ಆದರೆ, ಕೆಲ ವರ್ಷಗಳಿಂದ ಎರಡೂ ತಡೆಗೋಡೆಯ ಕಬ್ಬಿಣದ ಪೈಪ್‌ಗಳು ಮಾಯವಾಗಿ ಸೇತುವೆಯ ಅಗಲ ಬೋಳಾಗಿ ಬಿಟ್ಟಿದೆ. ಮೆಟ್ಟಿಲುಗಳು ಸಾಮರ್ಥ್ಯ ಕಳೆದುಕೊಂಡಂತೆ ಸೀಳಿಕೆ ಯಾಗಿ ನಿಂತಿವೆ. ದನಕರುಗಳು, ಚಿಕ್ಕ ಮಕ್ಕಳು ಸಹಜವಾಗಿ ಸೇತುವೆ ಹತ್ತುವಂತೆ ಆಗಿದೆ. ಬಟ್ಟೆ ತೊಳೆಯುವ ಮಹಿಳೆಯರು ಈ ಸೇತುವೆ ಮೇಲಿಂದಲೇ ಓಡಾಡುತ್ತಾರೆ.

‘ಸೇತುವೆ ಮೇಲಿಂದ ನಡೆಯುವಾಗ ಅಕ್ಕಪಕ್ಕದಲ್ಲಿ ಯಾವುದೇ ತರಹದ ಆಸರೆ ಇಲ್ಲದಂತಾಗಿದೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ ಕೆಳಗಡೆ ಹಳ್ಳದ ನೀರೊಳಗೆ ಬೀಳುವ ಭಯ ಕಾಡತೊಡಗಿದೆ. ಅದರಲ್ಲೂ ಜಾತ್ರೆ, ಮದುವೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಓಡಾಡುವ ಜನತೆಗೆ ಭಯ ಮನೆ ಮಾಡಿದೆ. ತಡೆ ಗೋಡೆ ಕಳಚಿಹೋಗಿ ನಾಲ್ಕೈದು ವರ್ಷಗಳಾದರೂ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಆದಷ್ಟು ಬೇಗ ತಡೆಗೋಡೆ ನಿರ್ಮಿಸಿ ಜನರ ನೋವು ನಿವಾರಿಸಬೇಕು’ ಎಂದು ಭಕ್ತರು ಕೋರಿದ್ದಾರೆ.

ಪ್ರತಿಕ್ರಿಯಿಸಿ (+)