ಹೋಟೆಲ್‌ ಮಾಲೀಕರಿಗೆ ಎಚ್ಚರಿಕೆ

7
ಹೋಟೆಲ್ ಗಳಿಗೆ ಅಧಿಕಾರಿಗಳ ತಂಡ ಭೇಟಿ, ಸ್ವಚ್ಛತೆ ಪಾಲಿಸದವರಿಗೆ ಎಚ್ಚರಿಕೆ

ಹೋಟೆಲ್‌ ಮಾಲೀಕರಿಗೆ ಎಚ್ಚರಿಕೆ

Published:
Updated:

ಮುಂಡಗೋಡ: ಹೋಟೆಲ್‌, ಬೇಕರಿ ಸೇರಿದಂತೆ ತಿಂಡಿತಿನಿಸುಗಳನ್ನು ಮಾರುವ ಅಂಗಡಿಗಳಿಗೆ ಆರೋಗ್ಯ ಇಲಾಖೆ, ಕಂದಾಯ ಹಾಗೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಗುರುವಾರ ದಿಢೀರ್‌ ಭೇಟಿ ನೀಡಿ, ಸ್ವಚ್ಛತೆ ಕಾಪಾಡದ ಹೋಟೆಲ್ ಮಾಲಿಕರಿಗೆ ಎಚ್ಚರಿಕೆ ನೀಡಿದರು.

ಪಟ್ಟಣ ವ್ಯಾಪ್ತಿಯ 20ಕ್ಕೂ ಅಧಿಕ ಹೋಟೆಲ್‌, ಬೇಕರಿಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡವು ಆಹಾರ ತಯಾರಿಸುವ ಕೋಣೆ, ಆಹಾರವನ್ನು ಸಂರಕ್ಷಣೆ ಮಾಡುವ ವಿಧಾನ, ಅಡುಗೆ ಕೋಣೆಯ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿತು.

ಕೆಲವು ಹೋಟೆಲ್‌ಗಳಲ್ಲಿ ಸ್ವಚ್ಛತೆಯಿಲ್ಲದಿರುವುದು ಹಾಗೂ ತಯಾರಿಸಿದ ಆಹಾರವನ್ನು ಸೂಕ್ತವಾಗಿ ಮುಚ್ಚಿ ಇಡದಿರುವುದು ಕಂಡುಬಂತು. ಆಹಾರ ಸಂರಕ್ಷಣೆ, ಸ್ವಚ್ಛತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.

‘ಆಹಾರ ತಯಾರಿಸುವ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು, ಉಪಯೋಗಿಸಿದ ಪಾತ್ರೆಗಳನ್ನು ತೊಳೆಯಲು ಶುದ್ಧ ನೀರು, ಸೋಪು ಬಳಕೆ ಮಾಡಬೇಕು. ಹೋಟೆಲ್‌, ಬೇಕರಿ ಸೇರಿದಂತೆ ಅಂಗಡಿ ನಡೆಸಲು ಕಡ್ಡಾಯವಾಗಿ ಪಟ್ಟಣ ಪಂಚಾಯ್ತಿಯಿಂದ ಅನುಮತಿ ಪತ್ರವನ್ನು ಪಡೆಯಬೇಕು. ಗ್ರಾಹಕರಿಗೆ ಟ್ಯಾಪ್‌ ಅಳವಡಿಸಿದ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು’ ಎಂದು ಕ್ಷೇತ್ರ ಆರೋಗ್ಯಾಧಿಕಾರಿ ಶ್ರೀಶೈಲ ಪಟ್ಟಣಶೆಟ್ಟಿ ಹೇಳಿದರು.

‘ಸ್ವಚ್ಛತೆಯಿಲ್ಲದಿದ್ದರೆ ರೋಗಗಳು ಹರಡುವ ಸಾಧ್ಯತೆ ಹೆಚ್ಚು. ಗ್ರಾಹಕರಿಗೆ ಗುಣಮಟ್ಟದ ಆಹಾರವನ್ನು ನೀಡಬೇಕಾಗಿರುವುದು ಹೋಟೆಲ್ ಮಾಲೀಕರ ಕರ್ತವ್ಯ. ಅದಕ್ಕೆ ಸರ್ಕಾರ ನಿಗದಿಪಡಿಸಿದ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

‘ಪಟ್ಟಣದ ವ್ಯಾಪ್ತಿಯಲ್ಲಿರುವ ಹೋಟೆಲ್‌, ಬೇಕರಿಗಳಲ್ಲಿ ಸ್ವಚ್ಛತೆ ಹಾಗೂ ಗ್ರಾಹಕರಿಗೆ ನೀಡುವ ಆಹಾರದ ಗುಣಮಟ್ಟದ ಬಗ್ಗೆ ತಿಳಿಯಲು ಮೂರು ಇಲಾಖೆಗಳ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲಿಸಲಾಗಿದೆ. ಒಂದು ವಾರದ ಕಾಲಾವಕಾಶ ನೀಡಿ, ಮತ್ತೊಮ್ಮೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಆಗಲೂ ಅಗತ್ಯ ಕ್ರಮಗಳು ಪಾಲನೆಯಾಗದಿದ್ದರೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಂಗನಬಸಯ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry