ಭಾನುವಾರ, ಡಿಸೆಂಬರ್ 15, 2019
19 °C

ಮಹಿಳೆಯರ ಕಾಂಡೋಮ್; ತಿಳಿಯಬೇಕಾದ್ದೆಷ್ಟು?

ಡಾ. ಎಸ್.ಎಸ್. ವಾಸನ್ Updated:

ಅಕ್ಷರ ಗಾತ್ರ : | |

ಮಹಿಳೆಯರ ಕಾಂಡೋಮ್; ತಿಳಿಯಬೇಕಾದ್ದೆಷ್ಟು?

ಅನಗತ್ಯ ಗರ್ಭಧಾರಣೆ ತಡೆಯಲು ಅಥವಾ ಲೈಂಗಿಕವಾಗಿ ಹರಡಬಲ್ಲ ರೋಗಗಳನ್ನು ತಡೆಗಟ್ಟಲು ಪುರುಷರು ಕಾಂಡೋಮ್ ಬಳಸುವುದು ರೂಢಿ. ಆದರೆ ಕಾಂಡೋಮ್ ಪುರುಷರಿಗಷ್ಟೇ ಅಲ್ಲ, ಮಹಿಳೆಯರಿಗೂ ಇದೆ. ಇದು ಎಷ್ಟೋ ಮಂದಿಗೆ ಇಂದಿಗೂ ತಿಳಿಯದ ವಿಷಯ. ಅದನ್ನು ಕುರಿತು ಮುಕ್ತವಾಗಿ ಚರ್ಚೆ ನಡೆಯದಿರುವುದೂ ಈ ಅವಜ್ಞೆಗೆ ಕಾರಣವಿರಬಹುದು. ಹಾಗಾದರೆ ಮಹಿಳೆಯರ ಕಾಂಡೋಮ್ ಹೇಗಿರುತ್ತದೆ? ಅದು ನಿಜಕ್ಕೂ ಬಳಕೆಗೆ ಸೂಕ್ತವೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಲೈಂಗಿಕಕ್ರಿಯೆಯ ಸಂದರ್ಭದಲ್ಲಿ ವೀರ್ಯವು ಒಳಹೋಗದಂತೆ ಅಡ್ಡ ತಡೆಯುವ ಕೆಲಸವನ್ನು ಕಾಂಡೋಮ್ ಮಾಡುತ್ತದೆ. ಆದರೆ ಮಹಿಳೆಯರ ಹಾಗೂ ಪುರುಷರ ಕಾಂಡೋಮ್‌ಗೆ ಕೆಲವು ಭಿನ್ನತೆಗಳಿವೆ. ಉದ್ದದ ಪ್ಲಾಸ್ಟಿಕ್ ಪೌಚ್‌ನಂತೆ ಇರುವ ಈ ಕಾಂಡೋಮ್‌ ಅನ್ನು ಪಾಲಿಯುರೆಥೇನ್‌ನಿಂದ ತಯಾರಿಸಲಾಗಿರುತ್ತದೆ. ಯೋನಿಯ ಒಳಗೆ ಕೂರುವಂತೆ ಕಾಂಡೋಮ್‌ನ ತುದಿಗೆ ರಿಂಗ್‌ಗಳಿದ್ದು, ಸೂಕ್ತ ಜಾಗದಲ್ಲಿ ಕೂರಲು ಸಹಕಾರಿ.

ಗರ್ಭನಿರೋಧಕ ಬಳಸುವುದು ಅವರವರ ವೈಯಕ್ತಿಕ ಆಯ್ಕೆ. ಹಾಗೆಯೇ, ಕೆಲ ದಂಪತಿಗಳು, ಮಹಿಳೆಯರ ಕಾಂಡೋಮ್ ಬಳಸಲು ಇಚ್ಛಿಸುತ್ತಾರೆ.

ಏಕೆಂದರೆ‌:

* ಲೈಂಗಿಕ ಕ್ರಿಯೆ ನಡೆಸುವ ಎಂಟು ತಾಸುಗಳ ಮುನ್ನವೇ ಇದನ್ನು ಧರಿಸಿದರೂ ತೊಂದರೆಯಾಗುವುದಿಲ್ಲ.

* ಕಾಂಡೋಮನ್ನು ಬಳಸಲು ಪತಿ ನಿರಾಕರಿಸಿದ ಸಂದರ್ಭದಲ್ಲಿ ಹೆಂಡತಿಯೇ ಧರಿಸಬಹುದು.

* ಈ ಕಾಂಡೋಮ್‌ಗೆ ಲಾಟೆಕ್ಸ್ ಬಳಸುವುದಿಲ್ಲವಾದ್ದರಿಂದ ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವುದಿಲ್ಲ.

ಆದರೆ ಪುರುಷರ ಕಾಂಡೋಮ್‌ಗಳ ಕುರಿತು ಹೇಗೆ ಕೆಲವು ದೂರುಗಳಿವೆಯೋ, ಹಾಗೆಯೇ ಮಹಿಳೆಯರ ಕಾಂಡೋಮ್‌ಗಳ ಕುರಿತೂ ದೂರುಗಳಿವೆ. ಲೈಂಗಿಕಕ್ರಿಯೆಯ ಸಮಯದಲ್ಲಿ ಜಾರುವ ಸಂಭವ ಎದುರಾಗುತ್ತದೆ,  ಚರ್ಮಕ್ಕೆ ಕಿರಿಕಿರಿ,  ಸ್ಪಂದನೆಯ ಮಟ್ಟ ಕಡಿಮೆ ಇರುತ್ತದೆ; ಇದು ಲೈಂಗಿಕ ಸುಖಕ್ಕೆ ಅಡ್ಡಿ ತರುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಪುರುಷರ ಕಾಂಡೋಮ್‌ಗೆ ಹೋಲಿಸಿದರೆ, ಇದು ಗರ್ಭಧಾರಣೆಯನ್ನು ತಡೆಯುವಲ್ಲಿ ಅಷ್ಟು ಪರಿಣಾಮಕಾರಿಯಾಗಿಲ್ಲ ಎನ್ನುತ್ತಾರೆ ಕೆಲವರು.

ಕಾರ್ಯವೈಖರಿ ಹೇಗಿದೆ: ಕಾಂಡೋಮ್ ಅನ್ನು ಸೂಕ್ತವಾಗಿ ಬಳಸಿದ್ದರೂ, ವರ್ಷಕ್ಕೆ, ನೂರರಲ್ಲಿ ಐದು ಮಹಿಳೆಯರು ಗರ್ಭ ಧರಿಸಿದ ಉದಾಹರಣೆ ಇದೆ. ಪುರುಷರು ಸರಿಯಾಗಿ ಬಳಸಿದ್ದರೂ ನೂರರಲ್ಲಿ ಇಬ್ಬರು ಗರ್ಭ ಧರಿಸಿದ, ಹಾಗೆಯೇ, ಸರಿಯಾಗಿ ಕಾಂಡೋಮ್ ಬಳಸದ ದಂಪತಿಗಳಲ್ಲಿ, ವರ್ಷಕ್ಕೆ ನೂರರಲ್ಲಿ ಇಪ್ಪತ್ತೊಂದು ಮಹಿಳೆಯರು ಗರ್ಭ ಧರಿಸಿದ ಉದಾಹರಣೆಗಳು ದೊರೆತಿವೆ. 

ಹೇಗೆ ಬಳಸಬೇಕು?

* ಋತುಚಕ್ರದ ಸಮಯದಲ್ಲಿ ಟ್ಯಾಂಪನ್ ಬಳಸುವ ರೀತಿಯೇ ಕಾಂಡೋಮ್ ಬಳಸಬೇಕು.

* ಪ್ರತಿ ಬಾರಿಯೂ ಹೊಸ ಕಾಂಡೋಮ್ ಬಳಸಿ, ಹರಿಯದಂತೆ ಎಚ್ಚರ ವಹಿಸಿ.

* ಕಾಂಡೋಮ್‌ಗೆ ಲ್ಯೂಬ್ರಿಕೆಂಟ್ ಅನ್ನೂ ಬಳಸಬಹುದು.

* ಏಕಕಾಲಕ್ಕೆ ಇಬ್ಬರೂ ಕಾಂಡೋಮ್ ಧರಿಸುವಂತಿಲ್ಲ. ‌

* ಕಾಂಡೋಮ್ ಹಾಕಿಕೊಳ್ಳುವಾಗ ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಂಡು ಹಾಕಿಕೊಳ್ಳಬೇಕು. ರಿಂಗ್ ಒಳಗೆ ಹೋಗಿ ಗಟ್ಟಿಯಾಗಿ ಕೂರಬೇಕು.

ಪ್ರತಿಕ್ರಿಯಿಸಿ (+)