ಶುಕ್ರವಾರ, ಡಿಸೆಂಬರ್ 6, 2019
26 °C

ಆರೋಗ್ಯ ಪ್ರಣಾಳಿಕೆ ಮತ್ತು ಬೇಡಿಕೆಗಳು

Published:
Updated:
ಆರೋಗ್ಯ ಪ್ರಣಾಳಿಕೆ ಮತ್ತು ಬೇಡಿಕೆಗಳು

ಕೆಲವರು ದುಬೈಗೆ ಹೋಗಲು ಆಗದಿದ್ದಾಗ ಬೆಂಗಳೂರಿನಲ್ಲಿ ಬದುಕಲು ಇಷ್ಟಪಡುತ್ತಾರೆ ಎನ್ನುವುದನ್ನು ಬಹಳಷ್ಟು ಬಾರಿ ಕೇಳಿದ್ದೇವೆ. ಭಾರತದ ಉತ್ತರ ಮತ್ತು ದಕ್ಷಿಣ–ಪೂರ್ವದವರಿಗೆ ಬೆಂಗಳೂರು ವಿದೇಶವಿದ್ದಂತೆ ಸರಿ. ನೆಹರೂ ಹೇಳಿದಂತೆ ‘ಭಾರತದ ಪ್ರತಿ ಮಹಾನಗರ ನಮ್ಮ ಭೂತಕಾಲವನ್ನು ಹೇಳಿದರೆ ಬೆಂಗಳೂರು ನಮ್ಮ ಭವಿಷ್ಯವನ್ನು ಸೂಚಿಸುತ್ತದೆ’. ಹಾಗಂತ ಇಲ್ಲಿ ಸಮಸ್ಯೆಗಳಿಲ್ಲ ಎಂದಲ್ಲ.

ಈ ಬೆಂಗಳೂರಿನ ಹೆಗ್ಗಳಿಕೆಗೆ ಇಲ್ಲಿನ ಐಟಿ, ಬಿಟಿ ಮತ್ತು ಬ್ಯೂಟಿಯೂ ಕಾರಣವಿರಬಹುದು. ಆದರೆ ಆರೋಗ್ಯಮಾಪನಕ್ಕೆ ಬಂದಾಗ ಕೇರಳ ನಮಗಿಂತ ಒಂಬತ್ತು ಸ್ಥಾನ ಮುಂದಿದೆ. ಇಡಿಯ ದೇಶದಲ್ಲಿಯೇ ಅಗ್ರಗಣ್ಯ ಸ್ಥಾನದಲ್ಲಿದೆ. ಆರೋಗ್ಯವೆಂದಾಗ ಕಣ್ಣಿಗೆ ಬೀಳುವ ಮೊದಲ ಮಾಪನ ಶಿಶುಮರಣ. ಅಂದರೆ ಹುಟ್ಟಿದ ಸಾವಿರ ಶಿಶುಗಳಲ್ಲಿ ಒಂದು ವರ್ಷದೊಳಗೆ ಸಾಯುವ ಶಿಶುಗಳು.

ಈ ಸಂಖ್ಯೆ ಕೇರಳದಲ್ಲಿ 10, ಕರ್ನಾಟಕದಲ್ಲಿ 24, ತಮಿಳುನಾಡಿನಲ್ಲಿ 17. ಕರ್ನಾಟಕದ ಈಗಿನ ಪ್ರಗತಿಯ ನಡಿಗೆಯಲ್ಲಿ ಕೇರಳದ ಮಟ್ಟಕ್ಕೆ ತಲುಪಲು ಇನ್ನೂ 15 ವರ್ಷ ಬೇಕಾಗುವುದು. ರಾಜಕೀಯ ಇಚ್ಛಾಶಕ್ತಿ ಇದ್ದರೆ ಇದನ್ನು ಐದು ವರ್ಷದಲ್ಲಿ ಸಾಧಿಸುವುದು ಸಾಧ್ಯ. ಇದರ ಅರ್ಥ, ವರ್ಷಕ್ಕೆ ಸುಮಾರು 20ಸಾವಿರ ಮಕ್ಕಳ ಸಾವನ್ನು ತಪ್ಪಿಸುವುದು. ಇದಕ್ಕಿಂತ ಉತ್ತಮ ಪ್ರಾಮಾಣಿಕ ಪ್ರಣಾಳಿಕೆ ಬೇರೊಂದುಂಟೇ? ಇನ್ನು ಅಪೌಷ್ಟಿಕತೆ ಕೇರಳ, ತಮಿಳುನಾಡಿಗಿಂತಲೂ ನಾವು ಹಿಂದೆ ಬಿದ್ದಿದ್ದೇವೆ.

ರಾಷ್ಟ್ರೀಯ ಸರಾಸರಿಗಿಂತ ಇತ್ತೀಚೆಗೆ ಮುಂದೆ ಬಂದಿರುವುದು ಸರಿ. ಆದರೆ ಕೇರಳದಂತೆಯೇ, ಮಿಜೊರಾಂ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಕೂಡ ಅಪೌಷ್ಟಿಕತೆಯನ್ನು ಹತ್ತಿಕ್ಕುವಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದೆ. ಉದಾಹರಣೆಗೆ ಎತ್ತರಕ್ಕೆ ತಕ್ಕ ತೂಕವಿಲ್ಲದ ಮಕ್ಕಳ ಪ್ರಮಾಣ ಕರ್ನಾಟಕದಲ್ಲಿ ಶೇ 36.2. ಇದು ಮಿಜೊರಾಂನಲ್ಲಿ 6.1, ನಾಗಾಲ್ಯಾಂಡ್‍ನಲ್ಲಿ 11.2, ಮಣಿಪುರದಲ್ಲಿ 6.8. ಈ ಸಣ್ಣ ರಾಜ್ಯಗಳ ಸಾಧನೆ ನಮ್ಮನ್ನು ಎಚ್ಚರಿಸಲೇಬೇಕು.

ನಮ್ಮಲ್ಲಿ ತಜ್ಞವೈದ್ಯರ ಒಟ್ಟಾರೆ ಕೊರತೆ ಇಡೀ ರಾಷ್ಟ್ರದಲ್ಲಿಯೇ ಕಡಿಮೆ ಪ್ರಮಾಣದಲ್ಲಿರುವುದು. ಇದು ಹಳ್ಳಿಗಳಿಗೆ ಹೊಂದುವುದಿಲ್ಲ ಎನ್ನುವುದು ಮರೆಯುವಂತಿಲ್ಲ. ಆದರೆ ಒಟ್ಟಾರೆ ಶಿಶುವೈದ್ಯರಿಂದ ಹಿಡಿದು ಪ್ರಸೂತಿತಜ್ಞೆಯರು ನಮ್ಮಲ್ಲಿಯೇ ಹೆಚ್ಚು.

ವೈದ್ಯಕೀಯ ಕಾಲೇಜುಗಳು ನಮ್ಮಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು. ಆದರೆ ಇದು ಬೆಂಗಳೂರು ಮತ್ತು ಮಂಗಳೂರು ಕೇಂದ್ರಿತವಾಗಿದ್ದು ಉತ್ತರಕರ್ನಾಟಕದಲ್ಲಿ ಸೇವೆಯ ಬರಗಾಲವಿದೆ. ಕರ್ನಾಟಕದಲ್ಲಿ ಸಮುದಾಯ ಆಸ್ಪತ್ರೆಗಳ ಕೊರತೆ ಕೂಡ ಬಹಳಷ್ಟಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಉತ್ತರಿಸಿದ ಪ್ರಕಾರ ನಮಗೆ ಬೇಕಾಗಿರುವುದು 326 ಸಮುದಾಯ ಆಸ್ಪತ್ರೆಗಳು. ಆದರೆ ಇರುವುದು 206. 121 ಸಮುದಾಯ ಆಸ್ಪತ್ರೆಗಳ ಕೊರತೆ ಇದೆ.

ಪ್ರತಿ 2.6 ಲಕ್ಷ ಜನಕ್ಕೆ ಒಂದು ಸಮುದಾಯ ಆಸ್ಪತ್ರೆ ಇರತಕ್ಕದ್ದು. ಹಾಗೆಯೇ ಪ್ರತಿ 28,768 ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿರಬೇಕು ಮತ್ತು ಪ್ರತಿ 4,737 ಜನರಿಗೆ ಒಂದು ಉಪ ಕೇಂದ್ರವಿರತಕ್ಕದ್ದು. ಇಲ್ಲಿಯೂ ಸಾಕಷ್ಟು ವೈದ್ಯರ, ದಾದಿಯರ ಕೊರತೆ ಇದೆ. ಕರ್ನಾಟಕದಲ್ಲಿ ಶೇ 87 ಪ್ರಾಥಮಿಕ ಕೇಂದ್ರಗಳಲ್ಲಿ ಒಬ್ಬರೇ ವೈದ್ಯರಿದ್ದು ಇತರೆ ಸಿಬ್ಬಂದಿಯ ಕೊರತೆಯಲ್ಲಿ ದೇಶದಲ್ಲಿಯೇ ಎರಡನೆಯ ಸ್ಥಾನದಲ್ಲಿದೆ. ಇದನ್ನು ತುಂಬಲು ಕಳೆದ ವರ್ಷ ಹರಸಾಹಸ ಮಾಡಿರುವುದಂತು ಸರಿಯೇ. ಜನಸಾಮಾನ್ಯರಿಗೆ ಮೊದಲ ಆರೋಗ್ಯಸ್ಪಂದನ ಇಲ್ಲಿ ಸರಿಯಾಗಿ ನಡೆದರೆ ರೆಫರಲ್ ಜಿಲ್ಲಾ ಆಸ್ಪತ್ರೆಗೆ ಕೊನೆ ಹಂತಕ್ಕೆ ಬರುವ ಅವಶ್ಯಕತೆ ಇಲ್ಲ.

ದೆಹಲಿಯ ಮೊಹಲ್ಲಾ ಕ್ಲಿನಿಕ್‍ಗಳಂತೆ ನಮ್ಮ ನಗರ–ಪಟ್ಟಣಗಳಲ್ಲಿ ಆರೋಗ್ಯಸೇವೆ ದೊರೆತರೆ ಲಕ್ಷಾಂತರ ರೂಪಾಯಿಗಳನ್ನು ಬಡಜನರಿಗೆ ಉಳಿಸಿದಂತಾಗುತ್ತದೆ. ನಮ್ಮ ರಾಜ್ಯದಲ್ಲಿ ಸುಮಾರು ಹತ್ತು ಸಾವಿರ ಕುಟುಂಬಗಳು ಪ್ರತಿ ವರ್ಷ ಕಾಯಿಲೆಯ ವೆಚ್ಚದ ಕಾಣದಿಂದಾಗಿ ಬಡತನರೇಖೆಗಿಂತ ಕೆಳಕ್ಕೆ ಇಳಿಯುತ್ತಿದ್ದಾರೆ.

ಬಡತನರೇಖೆಗಿಂತ ಮೇಲೆತ್ತುವ ಕೆಲಸ ಇನ್ನೊಂದೆಡೆ ನಡೆಯುತ್ತಿದ್ದಂತೆ ಇತ್ತ ಕೆಳಗೆ ಪರೋಕ್ಷವಾಗಿ ತಳ್ಳುವ ಕೆಲಸವೂ ನಡೆಯುತ್ತಿದೆ. ಈ ಮೂಲಸೌಕರ್ಯವನ್ನು ಉತ್ತಮಪಡಿಸಿದರೆ, ಸಾಮಾಜಿಕ ವಲಯಕ್ಕೆ ಸಬ್ಸಿಡಿ ರೂಪದಲ್ಲಿ ಪ್ರತಿ ವ್ಯಕ್ತಿಗೆ ಸರ್ಕಾರ ಖರ್ಚು ಮಾಡುತ್ತಿರುವ ಸುಮಾರು ಐದು ಸಾವಿರ ರೂಪಾಯಿಗಳನ್ನು ಕೂಡ ಕಡಿಮೆ ಮಾಡಬಹುದೇನೋ. ಜಾನ್ ರಾಲ್ಸ್ ಹೇಳುವಂತೆ ‘ಸರ್ಕಾರ ಏನೇ ಮಾಡಿದರೂ ಅದು ಕಟ್ಟಕಡೆಯ ಮನುಷ್ಯನಿಗೆ ಹೇಗೆ ಸಹಾಯ ಮಾಡುತ್ತದೆ’ ಎನ್ನುವುದೇ ಮುಖ್ಯ. 

ಪ್ರತಿಕ್ರಿಯಿಸಿ (+)