ಪಕ್ಷಕ್ಕಿಂತ ವ್ಯಕ್ತಿಗೆ ಮಣೆ ಹಾಕುವ ಮೇಲುಕೋಟೆ ಮತದಾರ

7
ಹೋರಾಟಗಾರರು, ಸಂಘಟನಾ ಚತುರರು, ಸಮಸ್ಯೆಗೆ ಸ್ಪಂದಿಸುವ ನಾಯಕರಿಗೆ ಶಾಸಕ ಪಟ್ಟ

ಪಕ್ಷಕ್ಕಿಂತ ವ್ಯಕ್ತಿಗೆ ಮಣೆ ಹಾಕುವ ಮೇಲುಕೋಟೆ ಮತದಾರ

Published:
Updated:

ಮಂಡ್ಯ: ಸಹಕಾರ ಚಳವಳಿ, ರೈತ ಚಳವಳಿಗೆ ಹೆಸರಾಗಿರುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮತದಾರರು ಪಕ್ಷಕ್ಕಿಂತ ವ್ಯಕ್ತಿಗೆ ಮಣೆ ಹಾಕಿದ್ದಾರೆ. ಹೋರಾಟಗಾರರು, ಸಂಘಟನಾ ಚತುರರು, ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗಳನ್ನೇ ಆಯ್ಕೆ ಮಾಡುವ ಮೂಲಕ ಜಿಲ್ಲೆಗೆ ಮಾದರಿಯೂ ಆಗಿದ್ದಾರೆ.

ಆರಂಭದಲ್ಲಿ ಪಾಂಡವವುರ ಕ್ಷೇತ್ರ ಎಂಬ ಹೆಸರು ಇತ್ತು. 2008ರಲ್ಲಿ ಮೇಲುಕೋಟೆ ಎಂದು ನಾಮಕರಣ ಮಾಡಲಾಯಿತು. 1952ರ ಮೊದಲ ಚುನಾವಣೆಯಲ್ಲೇ ಸ್ವಾತಂತ್ರ್ಯ ಹೋರಾಟಗಾರ, ಸಹಕಾರಿ ಕ್ಷೇತ್ರದ ಅನುಭವಿ, ಕಾಂಗ್ರೆಸ್‌ನ ನಿಷ್ಠಾವಂತ ಬಿ.ವೈ.ನೀಲೇಗೌಡ ಅವರನ್ನು ಆಯ್ಕೆ ಮಾಡಿ ಮತದಾರರು ಉತ್ತಮ ಮಾರ್ಗ ಹಾಕಿಕೊಟ್ಟರು. ನೀಲೇಗೌಡರು ಪಾಂಡವಪುರಕ್ಕೆ ಸಕ್ಕರೆ ಕಾರ್ಖಾನೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

1957ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ನೀಲೇಗೌಡರಿಗೆ ಟಿಕೆಟ್‌ ನೀಡಲಿಲ್ಲ. ಇದರಿಂದ ಬಂಡೆದ್ದ ನೀಲೇಗೌಡರು ಬಂಡೆದ್ದರು. ಶ್ರೀರಂಗಪಟ್ಟಣ ಮೂಲದ ದಮಯಂತಿ ಬೋರೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್‌ ನೀಡಿತು. ಆ ಚುನಾವಣೆಯಲ್ಲಿ ಪಿಎಸ್‌ಪಿ (ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ) ಯಿಂದ ಸ್ಪರ್ಧಿಸಿದ್ದ ಸರಳತೆಯ ಸಾಕಾರ ಮೂರ್ತಿಯಂತಿದ್ದ ಬಿ.ಚಾಮಯ್ಯ ಜಯಗಳಿಸಿದರು.

ಕಾಂಗ್ರೆಸ್‌ ಒಡಕಿನ ಮನೆಯಾದ ಕಾರಣ ಜನರು ಮತ್ತೊಬ್ಬ ಸಜ್ಜನ ವ್ಯಕ್ತಿಗೆ ಮಣೆ ಹಾಕಿದರು. ನಂತರ 1962ರ ಚುನಾವಣೆಯ ವೇಳೆಗೆ ನೀಲೇಗೌಡರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎರಡನೇ ಬಾರಿ ಜಯಗಳಿಸಿದರು.

1972ರ ಚುನಾವಣೆ ವೇಳೆಗೆ ಕಾಂಗ್ರೆಸ್ ಇಬ್ಭಾಗವಾಗಿತ್ತು. ಆಡಳಿತ ಕಾಂಗ್ರೆಸ್‌ನಿಂದ ಡಿ.ಹಲಗೇಗೌಡ ಸ್ಪರ್ಧಿಸಿದ್ದರು. ಸಂಸ್ಥಾ ಕಾಂಗ್ರೆಸ್‌ನಿಂದ ಕೆ.ಕೆಂಪೇಗೌಡರು ಕಣಕ್ಕಿಳಿದಿದ್ದರು. ಈ ಚುನಾವಣೆಯಲ್ಲಿ ಹಲಗೇಗೌಡರು ಜಯಗಳಿಸಿದರು. ನಂತರ ಅವರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರಾಗಿ ಕೆಲಸ ಮಾಡಿದರು. 1978ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಆರ್‌.ರಾಜಗೋಪಾಲ್‌ ಗೆಲುವು ಪಡೆದರು.

ಮೂರುಬಾರಿ ಗೆದ್ದ ಕೆಂಪೇಗೌಡರು: ಮೇಲುಕೋಟೆ ಕ್ಷೇತ್ರದಲ್ಲಿ ಕೆ.ಕೆಂಪೇಗೌಡ ಅವರಿಗೆ ಮಾತ್ರ ಮೂರು ಬಾರಿ ಶಾಸಕರಾಗುವ ಅವಕಾಶ ಸಿಕ್ಕಿದೆ. ಹಲವರು ಎರಡು ಬಾರಿ ಆಯ್ಕೆಯಾಗಿದ್ದಾರೆ. 1983ರ ಚುನಾವಣೆಯಲ್ಲಿ ಮೊದಲ ಬಾರಿಗೆ ರೈತಸಂಘದ ಬೆಂಬಲದೊಂದಿಗೆ ಕೆ.ಕೆಂಪೇಗೌಡ ಆಯ್ಕೆಯಾದರು. ಮತ್ತೆ 1985ರಲ್ಲಿ ಕೆಂಪೇಗೌಡರಿಗೆ ಜನತಾಪಕ್ಷದ ಟಿಕೆಟ್‌ ತಪ್ಪಿತು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಎರಡನೇ ಬಾರಿಗೆ ಶಾಸಕರಾದರು. 1999ರಲ್ಲಿ ಮೂರನೇ ಬಾರಿಗೆ ಶಾಸಕರಾದ ಕೆಂಪೇಗೌಡರು ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದರು.

ಪುಟ್ಟಣ್ಣಯ್ಯ ರಂಗಪ್ರವೇಶ: ರೈತ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಕೆ.ಎಸ್‌.ಪುಟ್ಟಣ್ಣಯ್ಯ ಮೊದಲ ಬಾರಿಗೆ 1994ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹೋರಾಟದಿಂದ ಹೆಸರುವಾಸಿಯಾಗಿದ್ದ ಪುಟ್ಟಣ್ಣಯ್ಯ ಅವರಿಗೆ ಮೇಲುಕೋಟೆ ಜನರು ವಿಜಯಮಾಲೆ ಹಾಕಿದರು. ನಂತರ 1999, 2004, 2008ರ ಚುನಾವಣೆಗಳಲ್ಲಿ ಸತತವಾಗಿ ಸೋತ ಪುಟ್ಟಣ್ಣಯ್ಯ 2013ರ ಚುನಾವಣೆಯಲ್ಲಿ ಸರ್ವೋದಯ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದರು. ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗುತ್ತಿರುವಾಗಲೇ ಫೆ.18ರಂದು ಇಹಲೋಕ ತ್ಯಜಿಸಿದರು. ಅವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಈಗ ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಪುಟ್ಟರಾಜು ಪ್ರವೇಶ: ಎಚ್‌.ಡಿ.ದೇವೇಗೌಡರ ಆಪ್ತ, ಯುವ ನಾಯಕರಾಗಿದ್ದ ಸಿ.ಎಸ್‌.ಪುಟ್ಟರಾಜು ಅವರು ಮೊದಲ ಬಾರಿಗೆ ಜನತಾದಳದ ಅಭ್ಯರ್ಥಿಯಾಗಿ 1989ರ ಚುನಾವಣೆಯಲ್ಲಿ ಸ್ಪರ್ಧಿಸಿದರು. ಮೊದಲ ಚುನಾವಣೆಯಲ್ಲಿ ಸೋಲು ಅನುಭವಿಸಿದ ಅವರು 2004 ಚುನಾವಣೆಯಲ್ಲಿ ಗೆಲುವು ದಾಖಲಿಸಿದರು. 2008ರಲ್ಲಿ ಅವರು ಮತ್ತೊಮ್ಮೆ ಗೆದ್ದು ಶಾಸಕರಾದರು. 2013ರಲ್ಲಿ ಸಂಸದರಾಗಿ ಆಯ್ಕೆಯಾದರೂ ರಾಜ್ಯ ರಾಜಕಾರಣಕ್ಕೆ ಬರಲು ಇಷ್ಟಪಟ್ಟಿರುವ ಅವರು ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. ಮೇಲುಕೋಟೆ ಕ್ಷೇತ್ರ 14 ಮಹಾ ಚುನಾವಣೆ ಕಂಡಿದೆ. ಮುಖಂಡರು ಹಲವು ಪಕ್ಷ ಬದಲಾವಣೆ ಮಾಡಿದರೂ ಜನರು ವ್ಯಕ್ತಿಗೇ ಮನ್ನಣೆ ಕೊಟ್ಟಿದ್ದಾರೆ. ಕ್ಷೇತ್ರದಿಂದ ಗೆದ್ದ ಯಾವ ಮುಖಂಡರೂ ಸಚಿವರಾಗಿ ಅಧಿಕಾರ ನಡೆಸುವ ಅವಕಾಶ ಸಿಕ್ಕಿಲ್ಲ ಎಂಬ ಕೊರಗು ಕ್ಷೇತ್ರದಲ್ಲಿ ಇದೆ.

ಪುಟ್ಟರಾಜು ವಿರುದ್ಧ ದರ್ಶನ್‌

ಅನುಭವಿ ರಾಜಕಾರಣಿ ಸಿ.ಎಸ್‌.ಪುಟ್ಟರಾಜು ಅವರಿಗೆ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್‌ ಎದುರಾಗಿದ್ದಾರೆ. ಪುಟ್ಟಣ್ಣಯ್ಯ ಸಾವಿನ ಅನುಕಂಪ ದರ್ಶನ್‌ ಜೊತೆಗಿದೆ. ಅಲ್ಲದೆ ರೈತಸಂಘ, ಸ್ವರಾಜ್‌ ಇಂಡಿಯಾ ಪಕ್ಷದ ರಾಜ್ಯ, ರಾಷ್ಟ್ರಮಟ್ಟದ ಮುಖಂಡರು ದರ್ಶನ್‌ ಬೆನ್ನಿಗೆ ನಿಂತಿದ್ದಾರೆ.ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ ಪಕ್ಷವೂ ದರ್ಶನ್‌ಗೆ ಬೆಂಬಲ ಘೋಷಣೆ ಮಾಡಿದೆ. ‘ಅನುಕಂಪದ ಅಲೆ ಇಲ್ಲ, ಎಚ್‌.ಡಿ.ಕುಮಾರಸ್ವಾಮಿ ಅವರ ಅಲೆ ಇದೆ’ ಎನ್ನುತ್ತಾ ಪ್ರಚಾರ ಕೈಗೊಂಡಿರುವ ಪುಟ್ಟರಾಜು ಮೂರನೇ ಬಾರಿಗೆ ಶಾಸಕರಾಗುವ ನಿರೀಕ್ಷೆಯಲ್ಲಿದ್ದಾರೆ.ಇನ್ನೊಂದೆಡೆ ಮಾಜಿ ಶಾಸಕ ಡಿ.ಹಲಗೇಗೌಡ ಅವರ ಪುತ್ರ ಎಚ್‌.ಮಂಜುನಾಥ್‌ ಬಿಜೆಪಿ ಅಂಗಳದಲ್ಲಿದ್ದು ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.ಅಮೆರಿಕದಲ್ಲಿ ನೆಲೆಸಿದ್ದ ಪುಟ್ಟಣ್ಣಯ್ಯ ಅವರ ಮಕ್ಕಳು ಈಗ ದರ್ಶನ್‌ ಪರ ಪ್ರಚಾರ ನಡೆಸುತ್ತಿದ್ದಾರೆ. ಪುಟ್ಟಣ್ಣಯ್ಯ ಮೃತಪಟ್ಟಿದ್ದರೂ ಇದು ಪುಟ್ಟಣ್ಣಯ್ಯ ಹಾಗೂ ಪುಟ್ಟರಾಜು ನಡುವಿನ ಹೋರಾಟ ಎಂದೇ ಬಿಂಬಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry