ಶುಕ್ರವಾರ, ಡಿಸೆಂಬರ್ 6, 2019
25 °C

ಸೀಜರ್‌ ಅಂದರೆ ಸೇಡಿನ ಕಥೆ

Published:
Updated:
ಸೀಜರ್‌ ಅಂದರೆ ಸೇಡಿನ ಕಥೆ

ಚಿತ್ರ: ಸೀಜರ್

ನಿರ್ದೇಶನ: ವಿನಯ್ ಕೃಷ್ಣ

ನಿರ್ಮಾಪಕ: ತ್ರಿವಿಕ್ರಮ್ ಸಾಪಲ್ಯ

ತಾರಾಗಣ: ಚಿರಂಜೀವಿ ಸರ್ಜಾ, ರವಿಚಂದ್ರನ್, ಪ್ರಕಾಶ್ ರೈ, ಪಾರುಲ್ ಯಾದವ್‌

ಸಂಗೀತ: ಚಂದನ್ ಶೆಟ್ಟಿ

ಬ್ಯಾಂಕ್‌ ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ವಾಹನ ಖರೀದಿ ಮಾಡುವುದು ಸಾಮಾನ್ಯ. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡದಿರುವುದು ಅಲ್ಪ ಮಟ್ಟಿಗೆ ಸಾಮಾನ್ಯದ ವಿಚಾರ. ಸಾಲ ಮರುಪಾವತಿ ಮಾಡದವರ ವಾಹನಗಳನ್ನು ಹಣಕಾಸು ಸಂಸ್ಥೆಗಳಿಗೆ ಸೇರಿದವರು ಸೀಜ್‌ ಮಾಡಿಕೊಂಡು ಹೋಗುವುದು, ‘ಸಾಲದ ಕಂತು ಕಟ್ಟಿ, ವಾಹನ ಬಿಡಿಸಿಕೊಂಡು ಹೋಗಿ’ ಎಂದು ಜಬರ್ದಸ್ತ್‌ ದನಿಯಲ್ಲಿ ಹೇಳುವುದು ಮಾಮೂಲು. ಈ ವೃತ್ತಿಯಲ್ಲಿ ಇರುವವರ ಬಗ್ಗೆ ಒಂದು ಸಿನಿಮಾ ಮಾಡುವುದು ಕನ್ನಡದ ಮಟ್ಟಿಗೆ ತುಸು ಹೊಸದು.

ನಿರ್ದೇಶಕ ವಿನಯ್ ಕೃಷ್ಣ ಅವರು ತಮ್ಮ ‘ಸೀಜರ್‌’ ಚಿತ್ರದಲ್ಲಿ ಮಾಡಿರುವುದು ಅದನ್ನೇ. ವಾಹನ ಸಾಲದ ಕಂತು ಕಟ್ಟದವರ ವಾಹನಗಳನ್ನು ಹಣಕಾಸು ಸಂಸ್ಥೆಗಳ ಸೂಚನೆ ಮೇರೆಗೆ ಸೀಜ್‌ ಮಾಡುವ ವೃತ್ತಿಯವರ ಕಥೆಯನ್ನು ಸಿನಿಮಾ ಭಾಷೆಯ ಮೂಲಕ ಹೇಳಲು ಯತ್ನಿಸಿದ್ದಾರೆ ವಿನಯ್. ಅವರು ಸೃಷ್ಟಿಸಿದ ಕಥೆಯ ಪಾತ್ರಗಳಿಗೆ ಜೀವ ತುಂಬಿರುವವರು ಚಿರಂಜೀವಿ ಸರ್ಜಾ, ವಿ. ರವಿಚಂದ್ರನ್ ಮತ್ತು ಪ್ರಕಾಶ್ ರೈ. ಇದು ಪಕ್ಕಾ ಮಾಸ್‌ ಸಿನಿಮಾ. ಜೋಶ್‌ ಇರುವ ಹಾಡುಗಳು, ಹೊಡೆದಾಟ, ರಕ್ತ, ಮೈಚಳಿ ಬಿಡಿಸುವ ಸಂಭಾಷಣೆಗಳು ಇಂತಹ ಸಿನಿಮಾಗಳಲ್ಲಿ ಇದ್ದೇ ಇರುತ್ತವೆ ಎಂಬುದನ್ನು ಹೊಸದಾಗಿ ಹೇಳುವುದೇನೂ ಇಲ್ಲ.

ಚಿರು ಹೆಸರು ಇದರಲ್ಲಿ ಸೀಜರ್‌. ಅವರ ವೃತ್ತಿ ವಾಹನಗಳನ್ನು ಸೀಜ್‌ ಮಾಡುವುದು. ರವಿಚಂದ್ರನ್‌ ಅವರದ್ದು ಫೈನಾನ್ಶಿಯರ್‌ ಪಾತ್ರ. ರವಿಚಂದ್ರನ್‌ ಜೊತೆ ಕೆಲಸ ಮಾಡುವ ನಂಬಿಕಸ್ಥ ಬಂಟ ಚಿರು. ರೈ ಅವರದ್ದು ಖಳನ ಪಾತ್ರ.

ಸಿನಿಮಾದ ಮೊದಲಾರ್ಧವು ಚಿರು, ರವಿಚಂದ್ರನ್ ಮತ್ತು ರೈ ಪಾತ್ರಗಳನ್ನು ವೀಕ್ಷಕರಿಗೆ ಪರಿಚಯಿಸುವಲ್ಲಿ, ಅವರ ತಾಕತ್ತು ಏನು ಎಂಬುದನ್ನು ತೋರಿಸುವಲ್ಲಿಯೇ ಕಳೆದುಹೋಗುತ್ತದೆ. ಆಗೀಗ ಒಮ್ಮೆ ಎಂಬಂತೆ ಪಾರುಲ್‌ ಯಾದವ್‌ ಇದರಲ್ಲಿ ಬಂದು ಹೋಗುತ್ತಾರೆ – ಸೀಜರ್‌ನನ್ನು ಪ್ರೀತಿಸುವ ಹೆಣ್ಣಾಗಿ. ಆದರೆ ಮನಸ್ಸಿಗೆ ಕಚಗುಳಿ ಇಡುವಲ್ಲಿ ಯಶಸ್ಸು ಕಾಣುವುದಿಲ್ಲ ಪಾರುಲ್.

ಸಿನಿಮಾ ಕಥೆಯ ಹೂರಣ ಏನು ಎಂಬುದು ಗೊತ್ತಾಗುವುದು ದ್ವಿತೀಯಾರ್ಧದಲ್ಲಿ. ತನ್ನ ಕುಟುಂಬಕ್ಕೆ ಕೊಡಬಾರದ ಹಿಂಸೆ ಕೊಟ್ಟ ಗಜಪತಿ (ರೈ) ಎಂಬುದು ಸೀಜರ್‌ಗೆ ಗೊತ್ತಾಗುತ್ತದೆ. ಅದು ಗೊತ್ತಾದ ನಂತರ ಸೀಜರ್‌ ಗಜಪತಿಯ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ. ಅಲ್ಲಿಗೆ ಸಿನಿಮಾ ಕಥೆ ಪೂರ್ಣವಾಗುತ್ತದೆ.

ಇಡೀ ಸಿನಿಮಾದಲ್ಲಿ ಹೇಳಿಕೊಳ್ಳುವಂತಹ ಟ್ವಿಸ್ಟ್‌ಗಳು, ವೀಕ್ಷಕರನ್ನು ಕುರ್ಚಿಯ ಅಂಚಿಗೆ ತಂದು ಕೂರಿಸುವಂತಹ ದೃಶ್ಯಾವಳಿಗಳು ಇಲ್ಲ. ಸೀಜರ್‌ ತನ್ನ ಹುಡುಗರ ಜೊತೆ ಸೇರಿಕೊಂಡು ವಾಹನಗಳನ್ನು ಸೀಜ್‌ ಮಾಡುವ ಸನ್ನಿವೇಶಗಳು ಕೂಡ ಥ್ರಿಲ್ ನೀಡುವಲ್ಲಿ ಗೆಲ್ಲುವುದಿಲ್ಲ. ಆದರೆ ರೈ ತಮ್ಮ ಗತ್ತಿನಿಂದಾಗಿ, ಚಿರು ತನ್ನಲ್ಲಿನ ಜೋಶ್‌ನಿಂದಾಗಿ ಮತ್ತು ರವಿಚಂದ್ರನ್‌ ಅವರು ‘ಅಣ್ಣ’ನಂತಹ ಪಾತ್ರದಿಂದಾಗಿ ನೆನಪಿನಲ್ಲಿ ಉಳಿದುಕೊಳ್ಳುತ್ತಾರೆ.

ಪ್ರತಿಕ್ರಿಯಿಸಿ (+)