ಪುತ್ತೂರು: ನೆಲ್ಲಿಕಟ್ಟೆ ಜನರಿಗೆ ಕೊಚ್ಚೆ ನೀರು ಭಾಗ್ಯ

7
ನಗರಸಭೆ ನಿರ್ಲಕ್ಷ್ಯ; ಶುದ್ಧ ನೀರಿನ ಪೈಪ್‌ಗೆ ಮಲಿನ ನೀರು

ಪುತ್ತೂರು: ನೆಲ್ಲಿಕಟ್ಟೆ ಜನರಿಗೆ ಕೊಚ್ಚೆ ನೀರು ಭಾಗ್ಯ

Published:
Updated:
ಪುತ್ತೂರು: ನೆಲ್ಲಿಕಟ್ಟೆ ಜನರಿಗೆ ಕೊಚ್ಚೆ ನೀರು ಭಾಗ್ಯ

ಪುತ್ತೂರು : ‘ಪುತ್ತೂರು ರೈಲ್ಷೇ ಸ್ಟೇಷನ್ ರಸ್ತೆ ಬದಿಯ ಚರಂಡಿಯಲ್ಲಿ ಹಾದು ಹೋಗುವ ದುರ್ವಾಸನೆಯುಕ್ತ, ರೋಗ ಕಾರಕ ಕೊಚ್ಚೆ ನೀರು ನೆಲ್ಲಿಕಟ್ಟೆ ಪರಿಸರಕ್ಕೆ ಸರಬರಾಜು ಆಗುವ ಕುಡಿಯುವ ನೀರು ಸರಬರಾಜು ಯೋಜನೆಯ  ಪೈಪ್‌ ಸೇರಿಕೊಂಡಿದ್ದು, ನೆಲ್ಲಿಕಟ್ಟೆ ವ್ಯಾಪ್ತಿಯ ಹಲವು ಮನೆಗಳಿಗೆ ನಗರಸಭೆ ನಾಲ್ಕು ದಿನಗಳಿಂದ ಕುಡಿಯಲು ಕೊಳಚೆ ನೀರಿನ ಭಾಗ್ಯ ಕರುಣಿಸಿದೆ’ ಎಂಬ  ನಿವಾಸಿಗಳು ದೂರಿದ್ದಾರೆ.

ಪುತ್ತೂರಿನ ಭುವನೇಂದ್ರ ಕಲ್ಯಾಣ ಮಂಟಪದ ಕಡೆಯಿಂದ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗುವ ರೈಲ್ವೇ ಸ್ಟೇಷನ್ ರಸ್ತೆ ಬದಿಯಲ್ಲಿ ಹಾದು ಹೋಗುವ ಚರಂಡಿಯಲ್ಲಿ ತ್ಯಾಜ್ಯಗಳು ತುಂಬಿಕೊಂಡು ಹರಿಯುವ ಕೊಳಚೆ ನೀರಿಗೆ ತಡೆಯಾಗಿದೆ.

ನೆಲ್ಲಿಕಟ್ಟೆ ಜಂಕ್ಷನ್ ವ್ಯಾಪ್ತಿಯಲ್ಲಿ ಚರಂಡಿಯಲ್ಲೇ ಅಳವಡಿಸಲಾಗಿರುವ ನೀರು ಸರಬರಾಜು ಯೋಜನೆಯ ಪೈಪ್ ಒಡೆದು ಹೋದ ಪರಿಣಾಮವಾಗಿ ಅದರೊಳಗೆ ಚರಂಡಿಯಲ್ಲಿ ಹಾದು ಹೋಗುವ ಕೊಳಚೆ ನೀರು ತುಂಬಿಕೊಂಡು ನೆಲ್ಲಿಕಟ್ಟೆ ಪರಿಸರದ ಹಲವು ಮನೆಗಳಿಗೆ ಕಳೆದ ನಾಲ್ಕು ದಿನಗಳಿಂದ ಸರಬರಾಜು ಆಗುತ್ತಿದೆ.

ಚರಂಡಿಯಲ್ಲಿ ಹರಿದು ಹೋಗುತ್ತಿದ್ದ ಅಕ್ಕ ಪಕ್ಕದ ಮನೆಗಳ ಕೊಳಚೆ ಮಲೀನ ನೀರು ಕಳೆದ ನಾಲ್ಕು ದಿನಗಳಿಂದ ನೆಲ್ಲಿಕಟ್ಟೆ ವ್ಯಾಪ್ತಿಯ ಮನೆಗಳಿಗೆ ಸರಬರಾಜು ಆಗುತ್ತಿದ್ದು, ದುರ್ವಾಸನೆಯುಕ್ತ ಈ ಮಲೀನ ನೀರು ಬಳಕೆಗೆ ಅಯೋಗ್ಯವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ.

ನೆಲ್ಲಿಕಟ್ಟೆ ಪರಿಸರದಲ್ಲಿ ನೀರಿನ ಸಮಸ್ಯೆ ಎದುರಾದ ಹಿನ್ನಲೆಯಲ್ಲಿ ಸ್ಥಳೀಯ ನಗರಸಭಾ ಸದಸ್ಯ ಶಕ್ತಿ ಸಿನ್ಹಾ ಅವರು ಗುರುವಾರ ಸಮಸ್ಯೆ ಬಗೆಹರಿ ಸುವ ಕುರಿತು ಮುತುವರ್ಜಿ ವಹಿಸಿದ್ದರು.

ಸಿಬ್ಬಂದಿ ಬಂದು ಚರಂಡಿಗೆ ಅಳವಡಿಸಲಾಗಿದ್ದ ಸ್ಲಾಬ್‌ಗಳನ್ನು ತೆರದು ನೋಡಿದಾಗ ಚರಂಡಿಯಲ್ಲಿ ಪೂರ್ತಿಯಾಗಿ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ತ್ಯಾಜ್ಯಗಳು ತುಂಬಿಕೊಂಡು ಹರಿದು ಹೋಗುವ ಕೊಳಚೆ ನೀರಿಗೆ ತಡೆಯುಂಟಾಗಿರುವುದು ಕಂಡು ಬಂದಿತ್ತು. ನಗರಸಭೆಯ ಸಿಬ್ಬಂದಿ ಚರಂಡಿಯಲ್ಲಿ ತುಂಬಿಕೊಂಡಿದ್ದ ಬಾಟಲಿಗಳನ್ನು ಮತ್ತು ತ್ಯಾಜ್ಯಗಳನ್ನು ತೆರವುಗೊಳಿಸಿ ಪರಿಶೀಲಿಸಿದಾಗ, ಚರಂಡಿಯೊಳಗೆ ಅಳವಡಿಸಲಾಗಿದ್ದ ನೀರು ಸರಬರಾಜು ಯೋಜನೆಯ ಪೈಪ್ ಹೊಡೆದು ಹೋಗಿರುವುದು ಹಾಗೂ ಹೊಡೆದು ಹೋದ ಪೈಪಿನೊಳಗೆ ಚರಂಡಿಯ ಕೊಳಚೆ ನೀರು ಸೇರಿಕೊಂಡಿರುವುದು ಕಂಡು ಬಂದಿತ್ತು.

ಕುಡಿಯುವ ನೀರು ಸರಬರಾಜು ಯೋಜನೆಯ ಪೈಪಿನೊಳಗೆ ಸೇರಿಕೊಂಡಿರುವ ಕೊಳಚೆ ನೀರನ್ನು ತೆರವುಗೊಳಿಸಿ, ಆ ಭಾಗದ ಮಂದಿಗೆ ಶುದ್ದ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮಾಡುವ ಮೂಲಕ ಈ ಭಾಗದ ಮಂದಿ ಎದುರಿಸುತ್ತಿದ್ದ ನೀರಿನ ಸಮಸ್ಯೆ ನಿವಾರಿಸುವ ಕೆಲಸ ನಗರಸಭೆಯ ವತಿಯಿಂದ ನಡೆದಿದೆ.

ನೆಲ್ಲಿಕಟ್ಟೆ ವ್ಯಾಪ್ತಿಯಲ್ಲಿರುವ ಕೊಳವೆಬಾವಿಯಿಂದ ಪ್ರತ್ಯೇಕವಾಗಿ ಹೊಸ ಪೈಪ್ ಅಳವಡಿಸಿ ಸಮಸ್ಯೆ ಇರುವ ಮನೆಗಳಿಗೆ ನೀರು ಸರಬರಾಜು ಮಾಡುವ ಕೆಲಸ ನಡೆಯುತ್ತಿದ್ದು, ಮತ್ತೆ ಆ ಭಾಗದ ಮಂದಿಗೆ ಶುದ್ಧ ನೀರಿನ ಭಾಗ್ಯ ಲಭಿಸಲಿದೆ.

ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ

‘ನೆಲ್ಲಿಕಟ್ಟೆ ಪರಿಸರದಲ್ಲಿ ನೀರಿನ ಸಮಸ್ಯೆ ಎದುರಾದ ಹಿನ್ನಲೆಯಲ್ಲಿ ಸಮಸ್ಯೆ ಪರಿಹರಿಸುವ ಕೆಲಸ ನಡೆಸಲಾಗುತ್ತಿದೆ. ಚರಂಡಿಯ ಸ್ಲಾಬ್‌ಗಳನ್ನು ತೆಗೆದು ಸಮಸ್ಯೆಯ ಕಾರಣ ಹುಡುಕಲಾಗಿದೆ. ಇದೀಗ ಚರಂಡಿಯೊಳಗಿದ್ದ ಕುಡಿಯುವ ನೀರಿನ ಯೋಜನೆಯ ಪೈಪನ್ನು ಬಂದ್‌ ಮಾಡಿ, ಆ ಭಾಗದ 5 ಮನೆಗಳಿಗೆ ಕೊಳವೆ ಬಾವಿಯಿಂದ ಹೊಸ ಪೈಪ್ ಅಳವಡಿಸಿ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ನಗರಸಭೆಯ ಆಯುಕ್ತೆ ರೂಪಾ ಶೆಟ್ಟಿ  ತಿಳಿಸಿದ್ದಾರೆ.

ಚುನಾವಣೆ: ಅಧಿಕಾರಿಗಳು ಸ್ಪಂದಿಸುತ್ತಿಲ್ಲ’

ನೀರು ಸರಬರಾಜು ಯೋಜನೆಯ ಪೈಪಿನಲ್ಲಿ ಸರಬರಾಜು ಆಗುತ್ತಿದ್ದ ನೀರು ದುರ್ವಾಸನೆ ಬೀರಲಾರಂಭಿಸಿದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ನೆಲ್ಲಿಕಟ್ಟೆ ಪರಿಸರದ ಮಂದಿ ನಗರಸಭೆಯ ಆಡಳಿತಕ್ಕೆ ಆರಂಭದಲ್ಲೇ ಮಾಹಿತಿ ನೀಡಿದ್ದರೂ ಅಧಿಕಾರಿಗಳು, ನಗರಸಭೆಯ ಆರೋಗ್ಯ ಇಲಾಖೆಯವರು ಸ್ಪಂದನೆ ನೀಡಿಲ್ಲ. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈಗ ಅಧಿಕಾರಿಗಳದ್ದೇ ಕಾರುಬಾರು ಆಗಿದ್ದು, ಅಧಿಕಾರಿಗಳು ಸ್ಪಂದಿಸದ ಕಾರಣ ಇಲ್ಲಿನ ಮಂದಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ ಎಂಬುವುದು ಅಲ್ಲಿನ ಮಂದಿಯ ಆರೋಪ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry