ಭಾನುವಾರ, ಡಿಸೆಂಬರ್ 15, 2019
25 °C

ಅತ್ಯಾಚಾರದ ಆರೋಪಿ ಶಾಸಕ ಕುಲದೀಪ್ ಬಂಧನಕ್ಕೆ ಸಿಬಿಐಗೆ ಅಲಹಾಬಾದ್ ಹೈಕೋರ್ಟ್ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

ಅತ್ಯಾಚಾರದ ಆರೋಪಿ ಶಾಸಕ ಕುಲದೀಪ್ ಬಂಧನಕ್ಕೆ ಸಿಬಿಐಗೆ ಅಲಹಾಬಾದ್ ಹೈಕೋರ್ಟ್ ಆದೇಶ

ಲಖನೌ: 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ಅವರನ್ನು ಬಂಧಿಸುವಂತೆ ಸಿಬಿಐಗೆ ಅಹಲಾಬಾದ್‌ ಹೈಕೋರ್ಟ್‌ ಆದೇಶಿಸಿದೆ.

ಉತ್ತರ ಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿರುವ ಹೈಕೋರ್ಟ್‌, ತಕ್ಷಣ ಕುಲದೀಪ್‌ ಸಿಂಗ್‌ ಸೇಂಗರ್‌ ಅವರನ್ನು ಬಂಧಿಸುವಂತೆ ಶುಕ್ರವಾರ ಸೂಚಿಸಿದೆ.

ಪ್ರಕರಣ ಸಂಬಂಧ ಆಗುತ್ತಿರುವ ಬೆಳವಳಿಗೆ ಹಾಗೂ ಸರ್ಕಾರ ಕೈಗೊಳ್ಳುತ್ತಿರು ಕ್ರಮ ಮತ್ತು ದೂರು ದಾಖಲಿಸಿಕೊಳ್ಳಲು ತಡ ಮಾಡಿರುವ ಎಲ್ಲಾ ಅಂಶಗಳನ್ನು ಗಮನಿಸಿದ್ದೇವೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಳಾದ ಡಿ.ಬಿ. ಭೋಸೇಲ್ ಮತ್ತು ಸುನೀತ್ ಕುಮಾರ್ ಅವರನ್ನೊಳಗೊಂಡ ಪೀಠ ಖಾರವಾಗಿ ಹೇಳಿದ್ದು, ಪ್ರಕರಣದ ಮೇಲ್ವಿಚಾರಣೆ ಮಾಡುವುದಾಗಿಯೂ ಪೀಠ ಸ್ಪಷ್ಟಪಡಿಸಿದೆ.

20 ಪುಟಗಳ ಆದೇಶ ನೀಡಿರುವ ನ್ಯಾಯಾಲಯ, ಪ್ರಕರಣದ ವಿಚಾರಣೆ ನಡೆಸಿ ಮೇ 2ರ ಒಳಗೆ ವರದಿ ನೀಡುವಂತೆ ಸಿಬಿಐಗೆ ಸೂಚಿಸಿದೆ.

‘ಅತ್ಯಾಚಾರ ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ನನ್ನು ಬಂಧಿಸಲು ಕ್ರಮ ತೆಗೆದುಕೊಳ್ಳುತ್ತೀರೋ ಇಲ್ಲವೋ’ ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿತ್ತು.

ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ವಹಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಪೀಠ, ‘ಎಫ್‌ಐಆರ್ ದಾಖಲಾಗಿದ್ದರೂ, ಆರೋಪಿಯನ್ನು ಬಂಧಿಸದಿದ್ದರೆ ನಿಮ್ಮ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ನಾವು ಭಾವಿಸಬೇಕಾಗುತ್ತದೆ’ ಎಂದು ಸರ್ಕಾರಕ್ಕೆ ಎಚ್ಚರಿಸಿತ್ತು.

ಪ್ರಕರಣದಲ್ಲಿ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಗುರುವಾರ ಬೆಳಿಗ್ಗೆ ಎಫ್‌ಐಆರ್ ದಾಖಲಿಸಿದ್ದ ಉತ್ತರ ಪ್ರದೇಶ ಪೊಲೀಸರು, ಸಂಜೆ ವೇಳೆಗೆ ಶಾಸಕ ನಿರ್ದೋಷಿ ಎಂದು ಘೋಷಿಸಿದ್ದರು. ಇದರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಇದಾದ ಬಳಿಕ ಸಿಬಿಐ ಕುಲದೀಪ್‌ ಸಿಂಗ್‌ ಸೆಂಗರ್‌ ಅವರನ್ನು ಲಖನೌದಲ್ಲಿನ ಅವರ ನಿವಾಸದಲ್ಲಿ ಶುಕ್ರವಾರ ಬೆಳಗಿನಜಾವ 4ಕ್ಕೆ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ. ಪ್ರಕರಣ ಎಲ್ಲ ದಾಖಲೆಗಳನ್ನು ಹಸ್ತಾಂತರಿಸುವಂತೆ ಸಿಬಿಐ ಉತ್ತರ ಪ್ರದೇಶದ ಪೊಲೀಸರಿಗೆ ಸೂಚಿಸಿದೆ.

ಸಂತ್ರಸ್ಥೆಯು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿವಾಸದ ಮುಂದೆ ಕಳೆದ ಭಾನುವಾರ ಆತ್ಯಹತ್ಯೆಗೆ ಯತ್ನಿಸಿದ್ದಳು. ಆಕೆಯ ತಂದೆ ಪೊಲೀಸ್‌ ಕಸ್ಟಡಿಯಲ್ಲಿ ಇರುವಾಗಲೇ ಸೋಮವಾರ ಮೃತಪಟ್ಟಿದ್ದರು. ಹಾಗಾಗಿ ಈ ಉನ್ನಾವ್ ಅತ್ಯಾಚಾರ ಪ್ರಕರಣದ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

* ಇವನ್ನೂ ಓದಿ...

ಉನ್ನಾವ್: ಬೆಳಿಗ್ಗೆ ಎಫ್‌ಐಆರ್, ಸಂಜೆ ನಿರ್ದೋಷಿ

ಪ್ರತಿಕ್ರಿಯಿಸಿ (+)