ಸೋಮವಾರ, ಜುಲೈ 13, 2020
25 °C
ಡಾ.ವಸುಂಧರಾ ಭೂಪತಿ ಅಭಿಮತ

ವಿಮರ್ಶಕರಿಂದ ಮಹಿಳಾ ಸಾಹಿತ್ಯ ಕಡೆಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮರ್ಶಕರಿಂದ ಮಹಿಳಾ ಸಾಹಿತ್ಯ ಕಡೆಗಣನೆ

ನಂಜನಗೂಡು: ಮಹಿಳಾ ಸಾಹಿತ್ಯಕ್ಕೆ ಹಾಗೂ ಮಹಿಳಾ ಲೇಖಕಿಯರಿಗೆ ಸಮಾಜದಲ್ಲಿ ನಿರೀಕ್ಷಿತ ಪ್ರೋತ್ಸಾಹ ಹಾಗೂ ಬೆಂಬಲ ಈಗಲೂ ಸಿಗುತ್ತಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂದರಾ ಭೂಪತಿ ಬೇಸರ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಈಚೆಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ‘ಎಂ.ಕೆ.ಇಂದಿರಾ, ವಾಣಿ ಹಾಗೂ ನಂಜನಗೂಡು ತಿರುಮಲಾಂಬರ ಕರ್ನಾಟಕ ನಂದಿನಿ ನೂರರ ನೆನಪು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರ ಸಂಸ್ಕಾರಕ್ಕೆ ವಿಮರ್ಶಕರು ನೀಡಿದ ಪ್ರಾತಿನಿಧ್ಯವನ್ನು ಡಾ.ಎಂ.ಕೆ.ಇಂದಿರಾ ಅವರ ಫಣಿಯಮ್ಮ ಕಾದಂಬರಿಗೆ ನೀಡಲಿಲ್ಲ. ಮಹಿಳಾ ಸಾಹಿತ್ಯವನ್ನು ಇಂದಿಗೂ ವಿಮರ್ಶಿಸದೆ ಕಡೆಗಣಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಖ್ಯಾತ ಕಾದಂಬರಿಕಾರರಾದ ಎಂ.ಕೆ.ಇಂದಿರಾ ಹಾಗೂ ವಾಣಿ ಅವರ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ಅರ್ಥ ಪೂರ್ಣಗೊಳಿಸಿರುವುದು ಪ್ರಶಂಸಾರ್ಹ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಮರ್ಶಕಿ ಡಾ.ಎನ್.ಗಾಯಿತ್ರಿ ಮಾತನಾಡಿ, ಕನ್ನಡದ ಮೊದಲ ಮಹಿಳಾ ಪತ್ರಕರ್ತೆ ಎಂಬ ಹೆಗ್ಗಳಿಕೆ ಯನ್ನು ಪಡೆದುಕೊಂಡಿರುವ ನಂಜನ ಗೂಡು ತಿರುಮಲಾಂಬರ ಬದುಕು ಪ್ರತಿಯೊಬ್ಬ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸುವಂತಹದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಡಾ.ಎಂ.ಕೆ.ಇಂದಿರಾ ವ್ಯಕ್ತಿತ್ವ ಹಾಗೂ ಸಾಹಿತ್ಯ ಎಂಬ ವಿಷಯದ ಕುರಿತು ಮಹಾರಾಜ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಡಿ.ವಿಜಯಲಕ್ಷ್ಮಿ ಹಾಗೂ ವಾಣಿ ಅವರ ಬದುಕು ಹಾಗೂ ಸಾಹಿತ್ಯದ ಒಳನೋಟ ಎಂಬ ವಿಷಯದ ಕುರಿತು ಬನುಮಯ್ಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಎಸ್.ಇಂದಿರಮ್ಮ ವಿಚಾರ ಮಂಡನೆ ಮಾಡಿದರು.

ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಸಾಮಾಜಿಕ ಮತ್ತು ವೈಚಾರಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸ ಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ತೇಜಸ್ವಿನಿ ಅವರು ರಚಿಸಿರುವ ‘ನನ್ನೊಳಗಿನ ಬುದ್ಧ’ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಬಿ.ಸಿದ್ಧರಾಜು, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎ.ಎಂ.ಶಿವಸ್ವಾಮಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.