ಪ್ರೀತಿ, ರೌಡಿಸಂನಲ್ಲಿ ಮಿಂದ ‘ದಳಪತಿ’

7

ಪ್ರೀತಿ, ರೌಡಿಸಂನಲ್ಲಿ ಮಿಂದ ‘ದಳಪತಿ’

Published:
Updated:
ಪ್ರೀತಿ, ರೌಡಿಸಂನಲ್ಲಿ ಮಿಂದ ‘ದಳಪತಿ’

ಚಿತ್ರ: ದಳಪತಿ  

ನಿರ್ಮಾಣ: ನವೀನ್

ನಿರ್ದೇಶನ: ಪ್ರಶಾಂತ್‌ ರಾಜ್

ತಾರಾಗಣ: ಪ್ರೇಮ್‌, ಕೃತಿ ಕರಬಂಧ, ಶರತ್‌ ಲೋಹಿತಾಶ್ವ, ಚಿಕ್ಕಣ್ಣ, ಪದ್ಮಜಾ ರಾವ್, ಶ್ರೀನಿವಾಸ ಪ್ರಭು, ಕೃಷಿ ತಾಪಂಡ

ಆ ಗ್ರಾಮದ ಹೆಸರು ‘ಅಂಗ’. ಅದಕ್ಕೆ ಸೂರ್ಯಕಾಂತ್‌ ತಂಬರಗಿಯೇ ಅಧಿಪತಿ. ಅಪರಾಧ ಕೃತ್ಯ ಎಸಗುವುದರಲ್ಲಿ ಆತ ನಿಸ್ಸೀಮ. ಅವನ ಎಲ್ಲಾ ಕೃತ್ಯಗಳ ಹಿಂದೆ ನೆರಳಾಗಿ ನಾಯಕ ರಾಮ್ ಇರುತ್ತಾನೆ. ಸೂರ್ಯಕಾಂತ್‌ನ ರಕ್ತಪಿಪಾಸುತನಕ್ಕೆ ನಾಯಕಿ ವೈದೇಹಿಯ ಅಜ್ಜ- ಅಜ್ಜಿ ಕೂಡ ಬಲಿಯಾಗುತ್ತಾರೆ. ನ್ಯಾಯಕ್ಕಾಗಿ ಆಕೆಯ ತಂದೆ– ತಾಯಿಯದ್ದು ಅವಿರತ ಹೋರಾಟ.

ರಾಮ್‌ ಮುಂಜಾನೆ ಎದ್ದು ವಾಯುವಿಹಾರಕ್ಕೆ ಹೋಗುತ್ತಾನೆ. ಆಗ ವೈದೇಹಿ ಎದುರಾಗುತ್ತಾಳೆ. ಒಮ್ಮೆಲೆ ಅವನಿಗೆ ಆಕೆಯ ಮೇಲೆ ಪ್ರೀತಿ ಅಂಕುರವಾಗುತ್ತದೆ. ‘ದಳಪತಿ’ ಸಿನಿಮಾ ಆರಂಭವಾಗುವುದು ಹೀಗೆ.  

ಚಿತ್ರದ ಮೊದಲಾರ್ಧ ನಾಯಕ ಮತ್ತು ನಾಯಕಿ ನಡುವಿನ ಪ್ರೇಮ ಕಥನಕ್ಕೆ ಮೀಸಲು. ನಾಯಕಿಯನ್ನು ಒಲಿಸಿಕೊಳ್ಳಲು ನಾಯಕ ನಡೆಸುವ ಹರಸಾಹಸ ನೋಡುಗರಿಗೆ ರೇಜಿಗೆ ಹುಟ್ಟಿಸುತ್ತದೆ. ರಾಮ್‌ ಮೇಲೆ ವೈದೇಹಿಗೆ ಪ್ರೀತಿ ಮೂಡಲು ಹೆಚ್ಚು ಹೊತ್ತು ಹಿಡಿಯುವುದಿಲ್ಲ. ಆದರೆ, ಆಕೆಯ ಅ‍ಪ್ಪ– ಅಮ್ಮ ಬೇರೊಬ್ಬ ಹುಡುಗನಿಗೆ ಮದುವೆ ಮಾಡಿಕೊಡಲು ನಿಶ್ಚಯಿಸುತ್ತಾರೆ. ಇದು ಆಕೆಗೆ ಇಷ್ಟವಾಗುವುದಿಲ್ಲ. ಬೇಸರಗೊಂಡು ರಾಮ್‌ನೊಂದಿಗೆ ದೂರದ ಊರಿಗೆ ತೆರಳಿದಾಗ ಸೂರ್ಯಕಾಂತ್‌ನ ಬಂಧಿಯಾಗುತ್ತಾಳೆ ವೈದೇಹಿ. ಆಗ ಕಥೆ ಹೊಸ ಹಾದಿಗೆ ಹೊರಳುತ್ತದೆ.‌‌

ರಾಮ್‌ಗೆ ತನ್ನ ಪ್ರೀತಿ ಉಳಿಸಿಕೊಳ್ಳಬೇಕೆಂಬ ಛಲ. ಸೂರ್ಯಕಾಂತ್‌ನದು ಕೋರ್ಟ್‌ ಶಿಕ್ಷೆಯಿಂದ ತ‍‍ಪ್ಪಿಸಿಕೊಳ್ಳಲು ಕಸರತ್ತು. ರೌಡಿಸಂ ಮತ್ತು ಪ್ರೇಮ ಕಥನವನ್ನು ತೆರೆಯ ಮೇಲೆ ಮುಖಾಮುಖಿಯಾಗಿಸುತ್ತಾರೆ ನಿರ್ದೇಶಕ ಪ್ರಶಾಂತ್‌ ರಾಜ್. ಆದರೆ, ಪೇಲವ ನಿರೂಪಣೆ, ದ್ವಂದ್ವಾರ್ಥದ ಸಂಭಾಷಣೆಯಿಂದ ಸಿನಿಮಾ ಪ್ರೇಕ್ಷಕರಿಗೆ ಕುತೂಹಲ ಹುಟ್ಟಿಸುವುದಿಲ್ಲ.

ದ್ವಿತೀಯಾರ್ಧದಲ್ಲಿ ನಾಯಕಿಯ ಅಮ್ಮ ತನ್ನ ಸ್ವಂತ ಅಕ್ಕ ಎಂಬುದು ರಾಮ್‌ಗೆ ಗೊತ್ತಾಗುತ್ತದೆ. ಅಪ್ಪ– ಅಮ್ಮನನ್ನು ಕೊಂದ ತನ್ನ ಆಶ್ರಯದಾತನ ಅಂತ್ಯಕ್ಕೆ ಮುಂದಾಗುವುದರೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

ಪ್ರೇಮ್, ಶರತ್‌ ಲೋಹಿತಾಶ್ವ, ಪದ್ಮಜಾ ರಾವ್, ಶ್ರೀನಿವಾಸ ಪ್ರಭು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕೃತಿ ಕರಬಂಧ ಅವರದ್ದು ಅಚ್ಚುಕಟ್ಟಾದ ನಟನೆ. ಚರಣ್‌ರಾಜ್‌ ಸಂಗೀತ ಸಂಯೋಜನೆಯ ಎರಡು ಹಾಡುಗಳು ಕೇಳಲು ಹಿತವಾಗಿವೆ. ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಹಣ ಚಿತ್ರಕ್ಕೆ ಹೊಸದೇನನ್ನೂ ಕಟ್ಟಿಕೊಟ್ಟಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry