ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣಾ ಮಂಡಳಿ: ಎಚ್ಚೆತ್ತುಕೊಳ್ಳದಿದ್ದರೆ ಅಪಾಯ

ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎಚ್ಚರಿಕೆ l ಪ್ರಧಾನಿ ಮೋದಿಗೆ ರಾಜ್ಯ ಮನವರಿಕೆ ಮಾಡಲಿ
Last Updated 13 ಏಪ್ರಿಲ್ 2018, 13:21 IST
ಅಕ್ಷರ ಗಾತ್ರ

ರಾಮನಗರ: ಕಾವೇರಿ ನಿರ್ವಹಣಾ ಮಂಡಳಿ ರಚನೆಗಾಗಿ ತಮಿಳುನಾಡಿನ ಶಾಸಕರು, ಸಂಸದರು ಮತ್ತು ಚಿತ್ರನಟರು ಉಪವಾಸ ಕುಳಿತಿದ್ದಾರೆ. ಅದೇನಾದರೂ ರಚನೆಯಾದಲ್ಲಿ ಕರ್ನಾಟಕಕ್ಕೆ ಉಳಿಗಾಲವಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಎಚ್ಚರಿಸಿದರು.

ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾವೇರಿ ನೀರು ಹಂಚಿಕೆ ಕುರಿತು ಸಂಪೂರ್ಣವಾಗಿ ತಿಳಿಯದೆಯೇ ಇಲ್ಲಿನ ಮಂತ್ರಿಗಳು ಸಿಹಿ ಹಂಚಿ ಸಂಭ್ರಮಿಸಿದರು. ನಿರ್ವಹಣಾ ಮಂಡಳಿ ರಚನೆಯಾದರೆ ಕಷ್ಟ. ಸಂಸತ್ತಿನಲ್ಲಿ ಚರ್ಚೆಯೇ
ಆಗದೆಯೇ ಹೇಗೆ ಮಂಡಳಿ ರಚನೆ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.

‘ಮಂಚನಬೆಲೆ,ಹಾರೋಬೆಲೆ, ಕಣ್ವ, ಇಗ್ಗಲೂರು ಜಲಾಶಯ ನಿರ್ಮಾಣದಲ್ಲಿ ನನ್ನ ಪಾತ್ರ ಏನೆಂಬುದು ಇಲ್ಲಿನ ಜನರಿಗೆ ಗೊತ್ತು. ಒಬ್ಬಬ್ಬರು ಒಂದೊಂದು ಮಾತನಾಡುತ್ತಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಆದರೆ ನಮ್ಮ ಆಧುನಿಕ ಭಗೀರಥರು ಅದೇಗೆ ಕೆರೆ ತುಂಬಿಸುತ್ತಾರೋ’ ಎಂದು ಲೇವಡಿ ಮಾಡಿದರು.

ಯಾರು ಅವಕಾಶವಾದಿ: ‘2004ರ ವಿಧಾನಸಭೆ ಚುನಾವಣೆಯ ನಂತರ ಜೆಡಿಎಸ್ 58 ಸ್ಥಾನ ಪಡೆದಿತ್ತು. ಸಿದ್ದರಾಮಯ್ಯ ಬಿಜೆಪಿ, ಕಾಂಗ್ರೆಸ್‌ ಯಾವುದಾದರೂ ಜೊತೆ ಕೈಜೋಡಿಸಿದರೂ ಸರಿಯೇ ಮುಖ್ಯಮಂತ್ರಿ ಆಗಲೇಬೇಕು ಎಂದು ಹಠಕ್ಕೆ ಬಿದ್ದಿದ್ದರು. ನಾನು ದೆಹಲಿಯಲ್ಲಿರುವ ಸೋನಿಯಾಗಾಂಧಿ ನಿವಾಸಕ್ಕೆ ಐದು ಬಾರಿ ಅಲೆದರೂ ಉತ್ತರ ಸಿಗಲಿಲ್ಲ. ಮತ್ತೆ ಚುನಾವಣೆಗೆ ಹೋಗುವುದಾಗಿ ಅವರು ಅಹಮದ್‌ ಪಟೇಲ್‌ ಮೂಲಕ ತಿಳಿಸಿದ್ದರು. ಈಗ ಅದೇ ಸಿದ್ದರಾಮಯ್ಯ ನನ್ನನ್ನು ಅವಕಾಶವಾದಿ ಎನ್ನುತ್ತಾರೆ’ ಎಂದು ಟೀಕಿಸಿದರು.

‘ಜೆಡಿಎಸ್‌ನ ಏಳು ಮಂದಿ ಮಹಾನ್‌ ಶಾಸಕರು ಕುಮಾರಸ್ವಾಮಿಯನ್ನು ಕರೆದುಕೊಂಡು ಹೋಗಿ ಬಿಜೆಪಿ ಜೊತೆ ಸರ್ಕಾರ ರಚನೆ ಮಾಡಿದರು. ಈಗ ಎಲ್ಲ ಮಡಿವಂತಿಕೆ, ಶುದ್ಧೀಕರಣ ಮಾಡಿಕೊಂಡು ಜಾತ್ಯತೀತವಾದವರಂತೆ ಕಾಂಗ್ರೆಸ್‌ ಸೇರಿದ್ದಾರೆ’ ಎಂದು ಲೇವಡಿ ಮಾಡಿದರು.

‘85ರ ಇಳಿ ವಯಸ್ಸಿನಲ್ಲಿಯೂ ನಾನು ಒಂದು ನಿಮಿಷ ಬಿಡುವಿಲ್ಲದ ಹಾಗೆ ದುಡಿಯುತ್ತಿದ್ದೇನೆ. ಕುಮಾರಸ್ವಾಮಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ, ವೈದ್ಯರ ಸಲಹೆಯನ್ನೂ ನಿರ್ಲಕ್ಷಿಸಿ ಪ್ರವಾಸ ಮಾಡುತ್ತಿದ್ದಾರೆ. ಇದರ ಜೊತೆಗೆ ರಾಮನಗರ, ಚನ್ನಪಟ್ಟಣ ಎರಡೂ ಕಡೆ ಸ್ಪರ್ಧಿಸಿದ್ದಾರೆ. ಕಾರ್ಯಕರ್ತರ ಶಕ್ತಿಯಿಂದ ಮಾತ್ರ ಅವರು ಗೆಲ್ಲಲು ಸಾಧ್ಯ. ಇನ್ನೆರಡು ದಿನದಲ್ಲಿ ಕನಕಪುರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು’ ಎಂದರು.

‘ನಾಗರಾಜು ಕಾಂಗ್ರೆಸ್‌ನಲ್ಲಿ ಕಿರುಕುಳದಿಂದ ಬೇಸತ್ತು ಇಂದು ಜೆಡಿಎಸ್ ಸೇರಿದ್ದಾರೆ. ಅವರ ರೈತ ಪರ ಬೇಡಿಕೆಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಾಗುವುದು. ಪಕ್ಷವು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರಷ್ಟೇ ಇವುಗಳನ್ನು ಈಡೇರಿಸಲು ಸಾಧ್ಯ’ ಎಂದರು.

ಜೆಡಿಎಸ್‌ನ ಕಾರ್ಯಾಧ್ಯಕ್ಷ ಪಿಜಿಆರ್ ಸಿಂಧ್ಯ ಮಾತನಾಡಿ ‘ಕರ್ನಾಟಕದಲ್ಲಿ ಕ್ಷೀರಕ್ರಾಂತಿ ಆರಂಭವಾಗಿದ್ದೇ ದೇವೇಗೌಡರಿಂದ. ಅವರು ಈ ಭಾಗದ ನೀರಾವರಿ ಭೀಷ್ಮ’ ಎಂದು ಬಣ್ಣಿಸಿದರು. ‘ನಾವೆಲ್ಲ ಇವರಿಗೆ ಮಕ್ಕಳಿದ್ದ ಹಾಗೆ. ಅಂತಹವರ ಮೇಲೆಯೇ ಸಿದ್ದರಾಮಯ್ಯ ಟೀಕೆ ಮಾಡುತ್ತಾರೆ. ಹಿಂದುಳಿದ ವರ್ಗಕ್ಕೆ ಸೇರಿದ ನಿಮ್ಮನ್ನು ಹಣಕಾಸು, ಅಬಕಾರಿ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಮಾಡಿದ್ದು ಯಾರು’ಎಂದು ಪ್ರಶ್ನಿಸಿದರು.

ಜೆಡಿಎಸ್‌ಗೆ ಸೇರ್ಪಡೆಗೊಂಡ ಕೆಎಂಎಫ್‌ ಅಧ್ಯಕ್ಷ ಪಿ.ನಾಗರಾಜು ಮಾತನಾಡಿ ‘ರಾಮಲಿಂಗೇಗೌಡರನ್ನು ಕೆಎಂಎಫ್‌ ಎಂ.ಡಿ.ಯಾಗಿ ನೇಮಿಸಿಕೊಂಡದ್ದೇ ನನಗೆ ಮುಳುವಾಯಿತು. ಅಲ್ಲಿಂದ ಕಾಂಗ್ರೆಸ್ ನಾಯಕರು ಕಿರುಕುಳ ನೀಡಲು ಆರಂಭಿಸಿದರು’ ಎಂದು ದೂರಿದರು.

‘ರಾಜ್ಯದಲ್ಲಿನ 13,500 ಹಾಲು ಉತ್ಪಾದಕರ ಸಂಘಗಳಲ್ಲಿ ಸುಮಾರು 35 ಸಾವಿರದಷ್ಟು ಕಾರ್ಯದರ್ಶಿಗಳು, ಸಹಾಯಕರು ಕಾರ್ಯ ನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ಕಾಯಂ ಮಾಡಬೇಕು. ಹಾಲಿನ ಹಾಗೂ ಪಶು ಆಹಾರದ ಮೇಲಿನ ಸಬ್ಸಿಡಿ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಎರಡು ಹಾಲಿನ ಮೆಗಾ ಡೇರಿ ಮತ್ತು ಶೀಥಲೀಕರಣ ಘಟಕಗಳು ನಿರ್ಮಾಣವಾಗುತ್ತಿವೆ. ಇದಕ್ಕಾಗಿ ರೈತರಿಗೆ ಸೇರಿದ ₹1 ಸಾವಿರ ಕೋಟಿಯನ್ನು ವಿನಿಯೋಗಿಸಲಾಗುತ್ತಿದೆ. ಹೀಗಾಗಿ ಯಾರೂ ಈ ಯೋಜನೆ ನನ್ನದೆಂದು ಕಾಲರ್ ಎತ್ತಿ ಪ್ರದರ್ಶನ ಮಾಡುವ ಅಗತ್ಯವಿಲ್ಲ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದರು.

ಜೆಡಿಎಸ್ ಮುಖಂಡ ಜಫರುಲ್ಲಾ ಖಾನ್, ಮಾಗಡಿ ಕ್ಷೇತ್ರದ ಅಭ್ಯರ್ಥಿ ಎ.ಮಂಜುನಾಥ್‌ ಮಾತನಾಡಿದರು. ಮುಖಂಡರಾದ ಎಚ್.ಎಂ. ಕೃಷ್ಣಮೂರ್ತಿ, ಎಂ. ರಾಮಯ್ಯ, ಜಿ.ರಾಮಣ್ಣ, ಸಿ. ಉಮೇಶ್‌, ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಂ. ಅಶೋಕ್‌ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ವಿವಿಧ ಘಟಕಗಳ ಪದಾಧಿಕಾರಿಗಳಾದ ಉಮೇಶ್‌, ರಾಜಶೇಖರ್, ಜಯಕುಮಾರ್, ಅಜಯ್‌ ದೇವೇಗೌಡ, ಎಚ್‌.ಕೆ. ಲೋಕೇಶ್‌, ಜಿ.ಟಿ. ಕೃಷ್ಣ, ಕಿರಣ್‌ ಬಿಳಗುಂಬ ಇದ್ದರು.

ಜೆಡಿಎಸ್‌ಗೆ ಸೇರ್ಪಡೆ
ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು, ರಾಮನಗರ ನಗರಸಭೆ ಕಾಂಗ್ರೆಸ್ ಸದಸ್ಯ ಡಿ.ಕೆ. ಶಿವಕುಮಾರ್, ತಾಲ್ಲೂಕು ಕುರುಬರ ಸಂಘದ ಉಪಾಧ್ಯಕ್ಷ ನಾಗೇಶ್, ವಡೇರಹಳ್ಳಿ ತಿಮ್ಮಯ್ಯ, ವೀರಶೈವ ಮುಖಂಡ ಕೂನಮುದ್ದನಹಳ್ಳಿ ವೀರಪ್ಪಾಜಿ, ಬೈರಮಂಗಲ ಕುಮಾರ್, ಮಾಯಗಾನಹಳ್ಳಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಮತ್ತಿತರರು ಗುರುವಾರ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು.

‘ಚನ್ನಪಟ್ಟಣದಲ್ಲಿ ಗೆಲುವು ಖಚಿತ’

ಚನ್ನಪಟ್ಟಣದಲ್ಲಿ ಯಾರೇ ಎದುರಾಳಿಯಾದರೂ ಎಚ್‌.ಡಿ. ಕುಮಾರಸ್ವಾಮಿ ಗೆಲುವು ಖಚಿತ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು. ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಕುರಿತು ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ‘ಈ ಹಿಂದೆ ಕನಕಪುರದಲ್ಲಿ ನನ್ನನ್ನು ಮಣಿಸಲು ಪ್ರಯತ್ನ ನಡೆದಿತ್ತು. ಡಿ.ಕೆ. ಶಿವಕುಮಾರ್ ರನ್ನು ಎದುರು ನಿಲ್ಲಿಸಿದ್ದರು. ಆದರೂ ಗೆದ್ದೆ. ಕನಕಪುರ ಲೋಕಸಭೆ ಚುನಾವಣೆಯಲ್ಲಿಯೂ ಉತ್ತಮ ಫಲಿತಾಂಶವೇ ಸಿಕ್ಕಿತು. ಈಗಲೂ ಅಷ್ಟೇ ಚನ್ನಪಟ್ಟಣದಿಂದ ಕುಮಾರಸ್ವಾಮಿ ಗೆದ್ದೇ ಗೆಲ್ಲುತ್ತಾರೆ. ಜೆಡಿಎಸ್‌ಗೂ ಹಿಂದುಳಿದ ವರ್ಗದವರ ಬೆಂಬಲ ಇದೆ’ ಎಂದರು. ‘ಬಿಎಸ್ಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪ್ರಚಾರ ಮಾಡಲಾಗುತ್ತಿದೆ. ಈ ಬಗ್ಗೆ ಅಪಪ್ರಚಾರ ಬೇಡ’ ಎಂದು ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.

ಭಾಷಣದ ವೇಳೆ ಕುರ್ಚಿಗಳು ಖಾಲಿ

ಜೆಡಿಎಸ್ ಕಾರ್ಯಕ್ರಮಕ್ಕೆ ಬೆಳಿಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಜನರು ಬಂದಿದ್ದರು. 11ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ 1.45ಕ್ಕೆ ಶುರುವಾಯಿತು. ದೇವೇಗೌಡರು ಭಾಷಣ ಆರಂಭಿಸುವ ಹೊತ್ತಿಗೆ ಸಾಕಷ್ಟು ಕುರ್ಚಿಗಳು ಖಾಲಿಯಾಗಿದ್ದವು. ಧ್ವನಿವರ್ಧಕ ಸಮಸ್ಯೆಯಿಂದಾಗಿ ಗೌಡರ ಮಾತುಗಳು ಕೇಳಿಸದೇ ಬೇಸರಗೊಂಡು ಸಾಕಷ್ಟು ಕಾರ್ಯಕರ್ತರು ಅರ್ಧದಲ್ಲಿಯೇ ನಿರ್ಗಮಿಸಿದರು.

**

ಮಾಗಡಿ ಕ್ಷೇತ್ರದಲ್ಲಿ ಹಣ ಬಲ, ಜನ ಬಲದ ನಡುವೆ ಹೋರಾಟ ನಡೆದಿದೆ. ಅಲ್ಲಿನ ನಾಯಕರ ಗರ್ವವನ್ನು ಜನರೇ ಇಳಿಸಲಿದ್ದಾರೆ – ಎಚ್.ಡಿ. ದೇವೇಗೌಡ ,ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT