ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಕ್ಷದ ಗೆಲುವಿಗಾಗಿ ಕ್ಷೇತ್ರದಲ್ಲಿ ರಣತಂತ್ರ’

ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿರ್ಧಾರವಾಗಿಲ್ಲ: ಸಂಸದ ಡಿ.ಕೆ.ಸುರೇಶ್
Last Updated 13 ಏಪ್ರಿಲ್ 2018, 13:23 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಯಾರೆಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಸಂಸದ‌ ಡಿ.ಕೆ.ಸುರೇಶ್‌ ತಿಳಿಸಿದರು.ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ್ದ ಅವರು ಕಾಂಗ್ರೆಸ್ ಮುಖಂಡ ಟಿ.ಕೆ.ಯೋಗೇಶ್‌ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಸಚಿವ ಎಚ್‌.ಎಂ.ರೇವಣ್ಣ ಅವರ ಹೆಸರು ಈಗ ಚಾಲ್ತಿಗೆ ಬಂದಿರುವುದು ನಿಜ. ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

ಪಕ್ಷದ ವರಿಷ್ಠರು ಯಾರನ್ನೇ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೂ ಅವರನ್ನು ಗೆಲ್ಲಿಸುವುದು ಪಕ್ಷದ ಕಾರ್ಯಕರ್ತರು,ಮುಖಂಡರ ಗುರಿಯಾಗಿರಬೇಕು ಎಂದರು. ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಸ್‌.ಗಂಗಾಧರ್‌ ಅವರಿಗೆ ಕ್ಷೇತ್ರ ಸಂಘಟನೆ ಜವಾಬ್ದಾರಿ ನೀಡಲಾಗಿದೆ. ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್‌ ಪಕ್ಷವನ್ನು ಸೋಲಿಸುವುದೇ ಕಾಂಗ್ರೆಸ್‌ನ ಗುರಿಯಾಗಿದೆ ಎಂದರು.

ಪಕ್ಷದ ಗೆಲುವಿಗಾಗಿ ಕ್ಷೇತ್ರದಲ್ಲಿ ರಣತಂತ್ರ ರೂಪಿಸಲಾಗಿದೆ. ಇದಕ್ಕಾಗಿ ಮುಖಂಡರು ಹಾಗೂ ಕಾರ್ಯಕರ್ತರು ಅವಿರತವಾಗಿ ಶ್ರಮಿಸಬೇಕು ಎಂದು ತಿಳಿಸಿದರು. ಪಕ್ಷದ ಸಿದ್ಧಾಂತ, ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸಿ, ಮತ ಕೇಳುವ ಕೆಲಸವನ್ನು ಮುಖಂಡರು, ಕಾರ್ಯಕರ್ತರು ಮಾಡಬೇಕು ಎಂದು ಸೂಚಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ನಮ್ಮ ಸಾಧನೆ ಜನರಿಗೆ ತಿಳಿದಿದೆ ಎಂದರು. ಮತದಾರರಿಗೆ ಪಕ್ಷದ ಸಾಧನೆ, ಯೋಜನೆ ತಿಳಿಸಿಕೊಡುವ ಕೆಲಸ ರಾಜ್ಯದೆಲ್ಲೆಡೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಸನ್ನಕುಮಾರ್, ಮುಖಂಡ ಟಿ.ಕೆ.ಯೋಗೇಶ್, ಕುಕ್ಕಟ ಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು,ಹಾಪ್ ಕಾಮ್ಸ್ ನಿರ್ದೇಶಕ
ರಂಗನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಸಿ.ವೀರೇಗೌಡ, ಶಿವಮಾದು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆ.ಟಿ.ಲಕ್ಷ್ಮಮ್ಮ, ನಗರಸಭೆ ಸದಸ್ಯ ಪಿ.ಡಿ.ರಾಜು ಇದ್ದರು. ನಂತರ ಡಿ.ಕೆ.ಸುರೇಶ್ ತಾಲ್ಲೂಕಿನ ಹಲವು ಗ್ರಾಮಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಮುಖಂಡರ ನಿವಾಸಗಳಲ್ಲಿ ಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT