ಪ್ರಧಾನಿ ಮೋದಿ ಉಪವಾಸ ಹಾಸ್ಯಾಸ್ಪದ

7

ಪ್ರಧಾನಿ ಮೋದಿ ಉಪವಾಸ ಹಾಸ್ಯಾಸ್ಪದ

Published:
Updated:

ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸಂಸದರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಜಿ.ಮಧುಸೂದನ್ ಲೇವಡಿ ಮಾಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳ ನಡುವೆ ಸಂಘರ್ಷ ಇದ್ದೇ ಇರುತ್ತದೆ. ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವುದು ವಿರೋಧ ಪಕ್ಷಗಳ ಕರ್ತವ್ಯ. ಇದಕ್ಕೆ ತಕ್ಕ ಉತ್ತರ ನೀಡಲಾಗದೇ ಪ್ರಧಾನಿ ನರೇಂದ್ರ ಮೋದಿಯವರು ಉಪವಾಸ ಸತ್ಯಾಗ್ರಹದ ನಾಟಕವಾಡುತ್ತಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಯುಪಿಎ ಅಧಿಕಾರಾವಧಿಯಲ್ಲಿ 2ಜಿ ಸ್ಪೆಕ್ಟ್ರಂ ಹಗರಣ ಸೇರಿದಂತೆ ಹಲವು ಸಂದರ್ಭಗಳಲ್ಲಿ ಬಿಜೆಪಿ ಸಂಸದರು ಅಧಿವೇಶನದಲ್ಲಿ ಗಲಾಟೆ ನಡೆಸಿ, ಕಲಾಪಕ್ಕೆ ಅಡ್ಡಿಪಡಿಸಿದ್ದರು. ಆ ಸಂದರ್ಭದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್‌ ಅವರು ಸಂದರ್ಭವನ್ನು ಸಮರ್ಥವಾಗಿ ಎದುರಿಸಿದ್ದಲ್ಲದೆ, ಹಗರಣಗಳ ತನಿಖೆಗೆ ಆದೇಶಿಸಿದ್ದರು. ಆದರೆ, ನರೇಂದ್ರ ಮೋದಿವಯವರು ಇಂತಹ ದಿಟ್ಟತನ ತೋರದೆ, ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

2014ರ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಕಪ್ಪು ಹಣ ತರುವುದಾಗಿ ಹೇಳಿ, ನೋಟ್ ಬ್ಯಾನ್ ಮೂಲಕ ಜನಸಾಮಾನ್ಯರ ಜೀವನವನ್ನೇ ಹೈರಾಣಾಗಿಸಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿ ಕೋಟ್ಯಂತರ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ಉದ್ಯೋಗ ಸೃಷ್ಟಿಸಲಾಗದೆ, ಬೋಂಡಾ-ಪಕೋಡಾ ಮಾರಿ ಜೀವನ ನಡೆಸಬಹುದು ಎಂಬ ಬಿಟ್ಟಿ ಸಲಹೆ ನೀಡಿದ್ದಾರೆ. ಒಟ್ಟಾರೆ ಎಲ್ಲ ರಂಗಗಳಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ. ಇದನ್ನು ವಿರೋಧ ಪಕ್ಷಗಳು ಸಂಸತ್‌ ಅಧಿವೇಶನದಲ್ಲಿ ಪ್ರಶ್ನಿಸಬೇಕಲ್ಲದೆ ಮತ್ತಿನ್ನೆಲ್ಲಿ ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.

ಕರ್ನಾಟಕದ ಜನತೆ ಬಿಜೆಪಿಯವರ ನಾಟಕಗಳನ್ನು ನಂಬುವುದಿಲ್ಲ. ಇಂತಹ ಮೊಸಳೆ ಕಣ್ಣೀರಿಗೆ ಕರಗುವುದೂ ಇಲ್ಲ. ಪ್ರಧಾನಿ ಮೋದಿಯವರು ಇಂತಹ ಕಣ್ಣೊರೆಸುವ ತಂತ್ರಗಳನ್ನು ಬಿಟ್ಟು ಇನ್ನುಳಿದ ಒಂದು ವರ್ಷದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ಗಮನ ಹರಿಸಲಿ ಎಂದು ಸಿ.ಜಿ. ಮಧುಸೂದನ್ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry