ಭಾನುವಾರ, ಡಿಸೆಂಬರ್ 15, 2019
25 °C
ಅಧಿವೇಶನಕ್ಕೆ ಅಡ್ಡಿ ಖಂಡನೆ: ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ

ವಿರೋಧ ಪಕ್ಷಗಳ ಧೋರಣೆ:ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರೋಧ ಪಕ್ಷಗಳ ಧೋರಣೆ:ಉಪವಾಸ ಸತ್ಯಾಗ್ರಹ

ಉಡುಪಿ: ವಿರೋಧ ಪಕ್ಷಗಳು ಸಂಸತ್ ಅಧಿವೇಶನ ನಡೆಯಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಅಧಿವೇಶನ ನಡೆಯಲು ಬಿಡುತ್ತಿಲ್ಲ. ವಿನಾಕಾರಣ ಗದ್ದಲ ಮಾಡಿ ಮುಂದೂಡುವಂತೆ ಮಾಡುತ್ತಿದ್ದಾರೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಆರೋಪಿಸಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಕಾಂಗ್ರೆಸ್‌ಗೆ ಜನ ಪಾಠ ಕಲಿಸಲಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಂಸತ್ ಪ್ರಜಾಪ್ರಭುತ್ವದ ದೇಗುಲ. ದೇಶಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಚರ್ಚೆ ಇಲ್ಲಿ ನಡೆಯುತ್ತದೆ. ಸಮಸ್ಯೆ ಬಗೆಹರಿಸಲು ಹಾಗೂ ರಾಷ್ಟ್ರವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಚಿಂತನೆ ಇಲ್ಲಿಂದ ಆರಂಭವಾಗುತ್ತದೆ. ಎಲ್ಲ ವಿಷಯಗಳ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಚರ್ಚೆ ನಡೆಸಲು ಅವಕಾಶ ಇದೆ. ಇದನ್ನು ಬಳಸಿಕೊಳ್ಳದ ವಿರೋಧ ಪಕ್ಷಗಳು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಕಲಾಪಕ್ಕೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಎಷ್ಟು ದಿನ ಅಧಿವೇಶನ ನಡೆಯಬೇಕು ಹಾಗೂ ಯಾವಾಗ ನಡೆಯಬೇಕು ಎಂಬುದಕ್ಕೆ ನಿಯಮ ಇದೆ. ಅದರಂತೆ ಸರ್ಕಾರ ಅಧಿವೇಶನ ನಡೆಸುತ್ತಿದೆ, ಆದರೆ ಸದನದ ಬಾವಿಗೆ ಇಳಿಯುವ ವಿರೋಧ ಪಕ್ಷಗಳು ಕಾರಣವಿಲ್ಲದೆ ತೊಂದರೆ ನೀಡುವ ಪ್ರವೃತ್ತಿ ತೋರುತ್ತಿವೆ. ಈ ಬಾರಿ ರೈತರು, ಬರಗಾಲದಂತಹ ಪ್ರಮುಖ ವಿಷಯಗಳ ಚರ್ಚೆ ಮಾಡುವ ಉದ್ದೇಶವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದರಿಂದ ಬೇಸತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ದೇಶದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಹಳೆಯ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಇಂತಹ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಇನ್ನಾದರೂ ಬಿಡಬೇಕು. ಚರ್ಚೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಮುಖಂಡರಾದ ಕೆ. ಉದಯಕುಮಾರ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ಬೈಕಾಡಿ ಸುಪ್ರಸಾದ ಶೆಟ್ಟಿ, ಗೀತಾಂಜಲಿ ಸುವರ್ಣ ಇದ್ದರು.

**

ಅಭಿವೃದ್ಧಿ ವಿಷಯಗಳ ಬಗ್ಗೆ ಮಾತನಾಡುವ ಹಾಗೂ ಚರ್ಚಿಸುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಆದ್ದರಿಂದ ಅಧಿವೇಶನಕ್ಕೆ ಅಡ್ಡಿಪಡಿಸುತ್ತಿದೆ – ಶೋಭಾ ಕರಂದ್ಲಾಜೆ, ಸಂಸದೆ.

**

ಪ್ರತಿಕ್ರಿಯಿಸಿ (+)