ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾಟದ ಮೋಜು

Last Updated 13 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

* ಜನರಲ್ಲಿ ಈಜು ಕಲಿಕೆ ಕುರಿತ ಆಸಕ್ತಿ 10 ವರ್ಷದ ಹಿಂದೆ ಹೇಗಿತ್ತು, ಈಗ ಹೇಗಿದೆ?
10ರಿಂದ 15 ವರ್ಷದ ಹಿಂದೆ ಜನರಲ್ಲಿ ಆಸಕ್ತಿ ಕಡಿಮೆ ಇತ್ತು. ಈಜುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ಪೋಷಕರ ಸಂಖ್ಯೆಯೂ ಕಡಿಮೆ ಇತ್ತು. ಆದರೆ ಇಂದು ಸಾಕಷ್ಟು ಬದಲಾವಣೆಯಾಗಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಜನರು ಈಜಿನತ್ತ ನೋಟ ಬೀರಿದ್ದಾರೆ. ಮಕ್ಕಳನ್ನು ಪ್ರೋತ್ಸಾಹಿಸುವ ಪೋಷಕರಂತೂ ಈಗ ಹೆಚ್ಚಾಗಿದ್ದಾರೆ. ಬೇಸಿಗೆ ಸಮಯದಲ್ಲಿ ಮೂರು–ನಾಲ್ಕು ತಿಂಗಳು ಈಜು ಕಲಿಯುವವರ ಸಂಖ್ಯೆ ಅತಿ ಹೆಚ್ಚು.

* ಹೊಸದಾಗಿ ಈಜು ಕಲಿಯುವವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?
ಮೊದಲು ಉತ್ತಮ ಈಜುಕೊಳವನ್ನು ಹುಡುಕಿಕೊಳ್ಳಬೇಕು. ಮನೆಯ ಬಳಿಯದ್ದೇ ಆದರೆ ಸೂಕ್ತ. ಅಲ್ಲಿ ನೀರಿನ ಶುಚಿತ್ವಕ್ಕೆ ಎಷ್ಟು ಆದ್ಯತೆ ನೀಡಲಾಗಿದೆ, ಉತ್ತಮ ಕೋಚ್‌ ಇದ್ದಾರಾ ಎಂಬುದನ್ನು ಗಮನಿಸಬೇಕು. ಈಜಿಗೂ ಮುನ್ನ ಸ್ವಿಮ್‌ ಸ್ಯೂಟ್‌, ಸ್ವಿಮ್‌ ಕ್ಯಾಪ್‌, ಸ್ವಿಮ್‌ ಗಾಗಲ್‌ಗಳನ್ನು ಹಾಕಿಕೊಳ್ಳಬೇಕು. ಈಜುಕೊಳ ಪ್ರವೇಶಕ್ಕೆ ಮೊದಲು ಸಣ್ಣಪುಟ್ಟ ವ್ಯಾಯಾಮ ಮಾಡಿ, ‘ಶವರ್‌’ನಲ್ಲಿ ದೇಹವನ್ನು ತಂಪು ಮಾಡಿಕೊಳ್ಳಬೇಕು. ಈಜಿಗೂ ಮುನ್ನ ಕೆಲ ‘ಸನ್‌ಸ್ಕ್ರೀನ್‌ ಲೋಷನ್‌’ ಹಚ್ಚಿಕೊಳ್ಳಬೇಕು ಎಂಬುದಾಗಿ ಕೆಲವರು ಹೇಳುತ್ತಾರೆ. ಆದರೆ ಅದರ ಅಗತ್ಯ ಇರುವುದಿಲ್ಲ. ಇವೆಲ್ಲ ನೀರಿನಲ್ಲಿ ಕರಗುವುದರಿಂದ ನೀರೇ ಮಲಿನವಾಗುತ್ತದೆ. ಈಜಿನ ನಂತರ ‘ಶವರ್‌’ನಲ್ಲಿ ಸ್ನಾನ ಮಾಡಿ, ಬೇಕಾದರೆ ಕೊಬ್ಬರಿ ಎಣ್ಣೆಯನ್ನು ಮೈ, ಕೈಗೆ ಸ್ವಲ್ಪ ಪ್ರಮಾಣದಲ್ಲಿ ಹಚ್ಚಿಕೊಂಡರೆ ಸಾಕು.

* ಎಳೆಯ ಮಕ್ಕಳ ಈಜು ಕಲಿಕೆ ಹೇಗೆ? ಎಷ್ಟು ವಯಸ್ಸಿನಿಂದ ಈಜು ಕಲಿಕೆಯಲ್ಲಿ ತೊಡಗುವುದು ಸೂಕ್ತ?
ಐದು ವರ್ಷದೊಳಗಿನ ಎಳೆಯ ಮಕ್ಕಳಿಗೆ ಈಜು ಕಲಿಸುವುದು ಸ್ವಲ್ಪ ಕಷ್ಟ. ಅವರಿಗೆ ಕೋಚ್‌ಗಳು ಹೇಳುವ ಕಲಿಕಾ ವಿಧಾನಗಳು ಸುಲಭವಾಗಿ ಅರ್ಥವಾಗುವುದಿಲ್ಲ. ಆದ್ದರಿಂದ ಐದು ವರ್ಷದ ನಂತರದ ಮಕ್ಕಳು ಕಲಿಕೆಗೆ ಸೂಕ್ತ. ಅದರಲ್ಲೂ ಐದರಿಂದ ಆರು ವರ್ಷದ ಮಕ್ಕಳು ಈಜು ಕಲಿಕೆಯ ವಿಧಾನಗಳನ್ನು ಬೇಗ ಗ್ರಹಿಸುತ್ತಾರೆ.

* ಕಲಿಕೆಯಲ್ಲಿ ತೊಡಗುವ ಮಕ್ಕಳು ಎಷ್ಟು ಆಳದ ಈಜುಕೊಳದಲ್ಲಿ ಅಭ್ಯಾಸ ನಡೆಸಬೇಕು?
ಬಸನಗುಡಿ ಸೇರಿದಂತೆ ಕೆಲ ಪ್ರತಿಷ್ಠಿತ ಈಜು ಕೇಂದ್ರಗಳಲ್ಲಿನ ಆವರಣದಲ್ಲಿ ವಿವಿಧ ಅಡಿಯ ಈಜುಕೊಳಗಳು ಇವೆ. ಮಕ್ಕಳ ಎತ್ತರಕ್ಕೆ ತಕ್ಕಂತೆ ಇರುವ ಆಳದ ಕೊಳದಲ್ಲಿ ಈಜು ಕಲಿಸಬೇಕು. ಎರಡು ಅಡಿ, ಮೂರು ಅಡಿ, ನಾಲ್ಕು ಅಡಿ ಈಜುಕೊಳಗಳೂ ಬಸವನಗುಡಿಯಲ್ಲಿ ಇವೆ. ಸಾಮಾನ್ಯವಾಗಿ ಈಜು ಕಲಿಯಬೇಕು ಎಂದರೆ ಮಕ್ಕಳ ಸೊಂಟ ಅಥವಾ ಎದೆಯ ಮಟ್ಟದವರೆಗಿನ ನೀರು ಇದ್ದರೆ ಕಲಿಕೆ ಸುಲಭ.

* ಈಜು ಕಲಿಯಲು ಎಷ್ಟು ದಿನ ಅಥವಾ ಅವಧಿ ಬೇಕಾಗುತ್ತದೆ?
ಅದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗುತ್ತದೆ. ಆಸಕ್ತಿ ಹೊಂದಿರುವ ಮಕ್ಕಳು ಅಥವಾ ಯುವ ಜನರಿಗಾದರೆ ದಿನಕ್ಕೆ ಒಂದು ಗಂಟೆಯಂತೆ ಇಪ್ಪತ್ತು ತರಗತಿಗಳು ಬೇಕಾಗುತ್ತವೆ. ಕೆಲವರು ಬೇಗ ಕಲಿಯಬಹುದು, ಇನ್ನೂ ಕೆಲವರು ಎರಡು ಮೂರು ದಿನ ಹೆಚ್ಚುವರಿಯಾಗಿ ತೆಗೆದುಕೊಳ್ಳಬಹುದು. ಈ ಅವಧಿಯಲ್ಲಿ ಈಜು ವಿದ್ಯಾರ್ಥಿಗಳು ಕನಿಷ್ಠ ಐದು ಮೀಟರ್‌ವರೆಗೆ ಈಜುವುದನ್ನು ಕಲಿಯುತ್ತಾರೆ. ಇನ್ನಷ್ಟು ತರಬೇತಿ ಪಡೆದರೆ ಸುಧಾರಣೆ ಕಂಡು ಬರುತ್ತದೆ. ಈಜುವಿಕೆಯ ಸಾಮರ್ಥ್ಯವೂ ಹೆಚ್ಚುತ್ತದೆ.

* ಈಜು ಕಲಿಯುವವರಿಗೆ ನುರಿತ ಕೋಚ್‌ ಎಷ್ಟು ಅಗತ್ಯ? ಯಾರನ್ನು ನುರಿತ ಕೋಚ್‌ ಎಂದು ಕರೆಯಲಾಗುತ್ತದೆ?
ಈಜಲು ನೀರು ಎಷ್ಟು ಮುಖ್ಯವೋ, ಈಜು ಕಲಿಯಲು ಉತ್ತಮ ಮಾರ್ಗದರ್ಶಕ ಅಥವಾ ಕೋಚ್‌ ಅತ್ಯಗತ್ಯ. ಈಜನ್ನು ಯಾವ ವಿಧಾನದಲ್ಲಿ ಹೇಗೆ ಕಲಿಯಬೇಕು, ಉಸಿರು ಕಟ್ಟುವುದು ಹೇಗೆ, ಕೊಳದಲ್ಲಿ ಕೈ ಮತ್ತು ಕಾಲನ್ನು ಯಾವ ವಿಧಾನದಲ್ಲಿ ಚಲಿಸುವಂತೆ ಮಾಡಬೇಕು ಎಂಬುದನ್ನು ವೈಜ್ಞಾನಿಕವಾಗಿ ತಿಳಿದು, ಕಲಿಯಲು ಕೋಚ್‌ ಬೇಕೇಬೇಕು. ಅಮೆರಿಕ ಸ್ವಿಮ್ಮಿಂಗ್‌ ಕೋಚರ್ಸ್ ಅಸೋಸಿಯೇಷನ್‌ (ಎಎಸ್‌ಸಿಎ), ಕರ್ನಾಟಕ ಸ್ವಿಮ್ಮಿಂಗ್‌ ಅಸೋಸಿಯೇಷನ್‌ (ಕೆಎಸ್‌ಎ) ಸಂಸ್ಥೆಗಳಿಂದ ಕೋಚ್‌ ಪ್ರಮಾಣಪತ್ರ ಪಡೆದಿರುವವರಿಂದ ತರಬೇತಿ ಪಡೆಯುವುದು ಒಳ್ಳೆಯದು.

ಅದರ ಜತೆಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್‌)ಗಳಲ್ಲಿ ಸರ್ಟಿಫಿಕೆಟ್‌ ಪಡೆದವರು ಮತ್ತು ಡಿಪ್ಲೊಮಾ ಕೋರ್ಸ್‌ ಪೂರೈಸಿರುವವರೂ ಉತ್ತಮ ಕೋಚ್‌ ಆಗಿರುತ್ತಾರೆ. ಪ್ರಸ್ತುತ ಬೆಂಗಳೂರಿನ ಈಜುಕೊಳಗಳಲ್ಲಿ ಶೇ 90ರಿಂದ 95ರಷ್ಟು ಅರ್ಹ ಕೋಚ್‌ಗಳಿದ್ದಾರೆ.

*ಈಜುಕೊಳದಲ್ಲಿ ನೀರಿನ ಶುಚಿತ್ವ ಕಾಪಾಡಿಕೊಳ್ಳುವುದು ಹೇಗೆ?
ಈಜುಕೊಳಗಳಲ್ಲಿ ನೀರಿನ ಶುಚಿತ್ವ ಕಾಯ್ದುಕೊಳ್ಳಲು ‘ಕ್ಲೋರಿನ್’ ಬಳಸಲಾಗುತ್ತದೆ. ಇದು ರಾಸಾಯನಿಕವಾಗಿದ್ದು, ನೀರಿನಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯಾ, ವೈರಸ್‌ಗಳನ್ನು ಕೊಲ್ಲುತ್ತದೆ. ಆ ಮೂಲಕ ಈಜುಗಾರರ ಆರೋಗ್ಯಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ. ಈಜುಕೊಳದಲ್ಲಿ ಸಾಮಾನ್ಯವಾಗಿ 1 ಪಿಪಿಎಂನಷ್ಟು ಕ್ಲೋರಿನ್‌ ಬಳಸುವುದು ಒಳ್ಳೆಯದು. ಬಸವನಗುಡಿ ಈಜು ಕೇಂದ್ರದ ಆವರಣದಲ್ಲಿಯೇ ನೀರಿನ ಪ್ರಯೋಗಾಲಯವೂ ಇದೆ. ಇಲ್ಲಿ ದಿನಕ್ಕೆ ಮೂರು ಬಾರಿ ಕೊಳದ ನೀರಿನ ಶುಚಿತ್ವ ಪರೀಕ್ಷಿಸಲಾಗುತ್ತದೆ. ಅಲ್ಲದೆ ಎರಡು ತಿಂಗಳಿಗೆ ಒಮ್ಮೆ ಬಾಹ್ಯ ಪ್ರಯೋಗಾಲಯದಿಂದಲೂ ನೀರಿನ ಶುಚಿತ್ವದ ಪರೀಕ್ಷೆ ನಡೆಸಲಾಗುತ್ತದೆ.

*ಈಜು ಕಲಿಕೆ ದುಬಾರಿಯಾ?
ಈಜು ಕಲಿಕೆ ಅಷ್ಟೇನು ದುಬಾರಿಯಲ್ಲ. ವಿವಿಧ ಮಟ್ಟದ ಸ್ಪರ್ಧೆಗಳಿಗಾಗಿ ನಿರಂತರ ಕಲಿಯುವುದು ದುಬಾರಿ ಎನಿಸಬಹುದು. ಅಲ್ಲದೆ ಸ್ವಿಮ್‌ ಡ್ರೆಸ್‌ಗಳ ಖರೀದಿ, ಸ್ಪರ್ಧೆಗಾಗಿ ಬೇರೆ ಬೇರೆ ಊರುಗಳಿಗೆ ಹೋಗಿ ಅಲ್ಲಿ ವಾಸ್ತವ್ಯ, ಊಟೋಪಚಾರದ ಖರ್ಚು ವೆಚ್ಚಗಳನ್ನು ಲೆಕ್ಕ ಮಾಡಿದರೆ ದುಬಾರಿ ಎನಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಪೋಷಕರು ಹೆಚ್ಚಿಗೆ ಆಸಕ್ತಿ ತೋರಿಸುತ್ತಿದ್ದಾರೆ. ತಾವೇ ಮಕ್ಕಳೊಂದಿಗೆ ಸ್ಪರ್ಧೆ ನಡೆಯುವ ಸ್ಥಳಗಳಿಗೆ ಹೋಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಆದರೆ 10ನೇ ತರಗತಿ, ದ್ವಿತೀಯ ಪಿಯುಸಿ ನಂತರ ಮಕ್ಕಳು ಭವಿಷ್ಯದ ಓದಿನತ್ತ ಹೆಚ್ಚು ಗಮನ ಕೇಂದ್ರೀಕರಿಸುತ್ತಿರುವುದರಿಂದ ಈಜು ಸ್ಪರ್ಧೆಗಳತ್ತ ನಿರಾಸಕ್ತಿ ತಾಳುತ್ತಿದ್ದಾರೆ. ಇದು ಹೋಗಬೇಕು. ಈಜಿನಲ್ಲಿ ಸಾಧನೆ ಮಾಡುವ ಛಲ ಬರಬೇಕು.

* ಈಜಿನಲ್ಲಿ ಎಷ್ಟು ವಿಧಗಳಿವೆ? ಎಲ್ಲವನ್ನೂ ಕಲಿಯಬೇಕಾ?
ಈಜಿನಲ್ಲಿ ‘ಫ್ರೀಸ್ಟೈಲ್‌’, ‘ಬ್ಯಾಕ್‌ಸ್ಟ್ರೋಕ್‌’, ‘ಬ್ರೆಸ್ಟ್‌ ಸ್ಟೈಲ್‌’, ‘ಬಟರ್‌ಫ್ಲೈ’ ಎಂಬ ನಾಲ್ಕು ವಿಧಗಳಿವೆ. ಈಜು ಸ್ಪರ್ಧೆಗಳಲ್ಲಿ ಇವುಗಳಿಗೆ ಸಂಬಂಧಿಸಿದಂತೆ 17 ಬಗೆಯ ಸ್ಪರ್ಧೆಗಳಿರುತ್ತವೆ. ‘ಫ್ರೀಸ್ಟೈಲ್‌ನಲ್ಲಿ 50 ಮೀಟರ್‌, 100 ಮೀಟರ್‌ನಿಂದ 1,500 ಮೀಟರ್‌ವರೆಗೂ ಸ್ಪರ್ಧೆಗಳಿರುತ್ತವೆ. ಉಳಿದವುಗಳಲ್ಲಿ 50 ಮೀಟರ್‌ನಿಂದ 200 ಮೀಟರ್‌ವರೆಗಿನ ಸ್ಪರ್ಧೆಗಳಿರುತ್ತವೆ. ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂಬ ಆಸಕ್ತಿ ಇರುವವರು ಎಲ್ಲ ಬಗೆಯ ಈಜನ್ನು ಕಲಿಯುವುದು ಸೂಕ್ತ.

* ಈಜುವುದರಿಂದ ದೇಹದ ಬಣ್ಣ, ತ್ವಚೆ ಹಾಳಾಗುವುದಿಲ್ಲವಾ?
ಹಾಗೇನು ಆಗುವುದಿಲ್ಲ. ಬೇಸಿಗೆಯಲ್ಲಿ ಸ್ವಲ್ಪ ಹೊತ್ತು ಹೊರಗಡೆ ನಿಂತರೆ ಸಹಜವಾಗಿಯೇ ದೇಹದ ಬಣ್ಣ ಮತ್ತು ಕಾಂತಿ ಬದಲಾಗುತ್ತದೆ. ಅದೇ ರೀತಿ ಬೇಸಿಗೆಯಲ್ಲಿ ಮಾತ್ರ ಈಜುವುದರಿಂದ ಮೈ ಬಣ್ಣ ಕಪ್ಪಾಗುವುದು ಮತ್ತು ಚರ್ಮದ ಕಾಂತಿ ಕುಂದುವುದು (ಸ್ಕಿನ್‌ ಬರ್ನ್‌) ಸಹಜ. ಆದರೆ ಬೇಸಿಗೆಯ ನಂತರ ಅದು ಮೊದಲಿನಂತೆಯೇ ಆಗುತ್ತದೆ.

*ಈಜುವುದರಿಂದ ಚರ್ಮದ ಬಣ್ಣ ಹಾಳಾಗುವುದಿಲ್ಲವಾ?
ಹಾಗೇನು ಆಗುವುದಿಲ್ಲ. ಬೇಸಿಗೆಯಲ್ಲಿ ಸ್ವಲ್ಪ ಹೊತ್ತು ಹೊರಗಡೆ ನಿಂತರೆ ಸಹಜವಾಗಿಯೇ ದೇಹದ ಬಣ್ಣ ಮತ್ತು ಕಾಂತಿ ಬದಲಾಗುತ್ತದೆ. ಅದೇ ರೀತಿ ಬೇಸಿಗೆಯಲ್ಲಿ ಮಾತ್ರ ಈಜುವುದರಿಂದ ಮೈ ಬಣ್ಣ ಕಪ್ಪಾಗುವುದು ಮತ್ತು ಚರ್ಮದ ಕಾಂತಿ ಕುಂದುವುದು (ಸ್ಕಿನ್‌ ಬರ್ನ್‌) ಸಹಜ. ಆದರೆ ಬೇಸಿಗೆಯ ನಂತರ ಅದು ಮೊದಲಿನಂತೆಯೇ ಆಗುತ್ತದೆ.

*
ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರೆ ನಿರಂತರ ಕಲಿಕೆಯಲ್ಲಿ ತೊಡಗಬೇಕು. ಇದಕ್ಕಾಗಿ ಕನಿಷ್ಠ ನಾಲ್ಕರಿಂದ ಐದು ವರ್ಷದ ಸತತ ಪರಿಶ್ರಮ ಅಗತ್ಯ. ಐದು ವರ್ಷಕ್ಕೆ ಕಲಿಕೆ ಆರಂಭಿಸಿದ್ದರೆ 10 ವರ್ಷವಾಗುವ ತನಕ ಮಾರ್ಗದರ್ಶಕರ ಗರಡಿಯಲ್ಲಿ ಪಳಗುವುದು ಒಳ್ಳೆಯದು.
-ವಿ.ಪದ್ಮನಾಭರಾವ್‌, ಈಜು ತರಬೇತುದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT